ಸಹಾಯಕ ಪ್ರಾಧ್ಯಾಪಕರಿಗೆ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಉತ್ತೀರ್ಣ ಕಡ್ಡಾಯ

Update: 2018-10-20 16:51 GMT

ಬೆಂಗಳೂರು, ಅ.20: ರಾಜ್ಯದ ಸರಕಾರಿ ಪದವಿ ಕಾಲೇಜಿಗೆ ಸಹಾಯ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಲಿಯಿದ್ದ ವಿವಿಧ ವಿಷಯಗಳಿಗೆ ಸಹಾಯಕ ಪ್ರಾಧ್ಯಾಪಕರನ್ನು ಈಗಾಗಲೇ ನೇಮಿಸಿದೆ. ಆ ಎಲ್ಲ ಸಹಾಯಕ ಪ್ರಾಧ್ಯಾಪಕರಿಗೆ ಸ್ಥಳ ನಿಯುಕ್ತಿ ಆದೇಶ ನೀಡಲಾಗಿದೆ. ಆಯ್ಕೆಯಾಗಿರುವ ಎಲ್ಲ ಸಹಾಯಕ ಪ್ರಾಧ್ಯಾಪಕರ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಪಾಸಾಗಲೇ ಬೇಕು ಎಂದು ಆದೇಶ ಹೊರಡಿಸಲಾಗಿದೆ.

ಈಗಾಗಲೇ ನೇಮಕಗೊಂಡಿರುವ ಸಾವಿರಕ್ಕೂ ಅಧಿಕ ಸಹಾಯಕ ಪ್ರಾಧ್ಯಾಪಕರು ಈಗಾಗಲೇ ತಮಗೆ ಇಲಾಖೆಯಿಂದ ನಿಯುಕ್ತಿ ಮಾಡಿರುವ ಸ್ಥಳಗಳಲ್ಲಿ ಸೇವೆ ಆರಂಭಿಸಿದ್ದಾರೆ. ಅಲ್ಲದೆ, ಮೂರು-ನಾಲ್ಕು ತಿಂಗಳ ವೇತನ ಪಡೆದಿದ್ದಾರೆ. ಈಗ ಇಲಾಖೆಯಿಂದ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಉತ್ತೀರ್ಣರಾಗಬೇಕು ಎಂದು ಹೊರಡಿಸಿರುವ ಸುತ್ತೋಲೆ ಅಭ್ಯರ್ಥಿಗಳ ಆತಂಕ ಹೆಚ್ಚಿಸಿದೆ.

ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ) ನಿಮಯ 2012ರಂತೆ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಕಡ್ಡಾಯ ಮಾಡಲಾಗಿತ್ತು. ಸರಕಾರ ಕಾಲಕಾಲಕ್ಕೆ ಈ ನಿಯಮದಲ್ಲಿ ತಿದ್ದುಪಡಿ ತರುತ್ತಿದೆ. ಹೀಗಾಗಿ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆಯಲ್ಲಿ ಅಭ್ಯರ್ಥಿ ಕಡ್ಡಾಯವಾಗಿ ಉತ್ತೀರ್ಣವಾಗಿರಬೇಕು ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News