ಕೊಡಗಿನಲ್ಲಿ ಎಚ್1ಎನ್1 ರೋಗದ 3 ಪ್ರಕರಣ ಪತ್ತೆ: ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸಲಹೆ

Update: 2018-10-20 17:39 GMT

ಮಡಿಕೇರಿ, ಅ.20: ಕೊಡಗು ಜಿಲ್ಲೆಯಲ್ಲಿ ಈ ವರ್ಷದಲ್ಲಿ ಅ.17ರ ವರೆಗೆ 5 ಶಂಕಿತ ಎಚ್1ಎನ್1 ಇನ್‌ಫ್ಲುಯೆಂಝಾ ರೋಗ ಪ್ರಕರಣ ವರದಿಯಾಗಿದ್ದು, ಅವುಗಳಲ್ಲಿ 3 ಪ್ರಕರಣಗಳಿಗೆ ಎಚ್1ಎನ್1 ರೋಗ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಎಂ. ಶಿವಕುಮಾರ್ ತಿಳಿಸಿದ್ದಾರೆ. 

ಎಚ್1 ಎನ್1 ರೋಗ ಹರಡುವ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕೆಂದು ಮನವಿ ಮಾಡಿರುವ ಜಿಲ್ಲಾ ಸರ್ವೇಕ್ಷಣಾಧಿಕಾರಿ, ತೀವ್ರ ಸ್ವರೂಪದ ಜ್ವರ, ಕೆಮ್ಮು ಮತ್ತು ಹಳದಿ ಕಫ, ನೆಗಡಿ ಮತ್ತು ಗಂಟಲು ಕೆರೆತ, ಅತೀ ಬೇಧಿ - ವಾಂತಿ ರೋಗದ ಪ್ರಾಥಮಿಕ ಗುಣಲಕ್ಷಣಗಳಾಗಿದ್ದು, ಇಂತಹಾ ಲಕ್ಷಣಗಳು ಕಂಡು ಬಂದ ಕೂಡಲೇ ಹತ್ತಿರದ ಆರೋಗ್ಯಕೇಂದ್ರಗಳನ್ನು ಸಂಪರ್ಕಿಸಬೇಕೆಂದು ವಿನಂತಿಸಿದ್ದಾರೆ. ಸಾಮಾನ್ಯ ಪ್ಲೂ ಹರಡುವ ರೀತಿಯಲ್ಲಿಯೇ ಇನ್‌ಪ್ಲೂಯೆಂಝಾ ಎಚ್1ಎನ್1 ಹರಡುವುದಾಗಿ ಮಾಹಿತಿ ನೀಡಿರುವ ಅವರು, ಅತೀಯಾದ ಮೈ ಕೈ ನೋವು, ಉಸಿರಾಟ ತೊಂದರೆ ಕಾಣಿಸಿಕೊಳ್ಳುವುದು ತೀವ್ರ ತರಹವಾದ ರೋಗ ಲಕ್ಷಣಗಳು ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸ್‌ಗಳು ಹರಡುತ್ತವೆ. ವೈಯುಕ್ತಿಕ ಸ್ವಚ್ಛತೆ ಇಲ್ಲದೇ, ಮೂಗು ಬಾಯಿ ಆಗಿಂದಾಗೆ ಮುಟ್ಟುವುದರಿಂದಲೂ ಸೋಂಕು ಹರಡಬಹುದು. ಈ ಲಕ್ಷಣಗಳು ಕಂಡುಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನವನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸೋಂಕನ್ನು ದೃಢ ಪಡಿಸಲಾಗುತ್ತದೆ. ಎಲ್ಲಾ ಶಂಕಿತ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸುವ ಅವಶ್ಯಕತೆ ಇರುವುದಿಲ್ಲ. ಸರಕಾರದ ಮಾರ್ಗದರ್ಶಿಯಂತೆ ಕೇವಲ ತೀವ್ರ ತರಹದ ಲಕ್ಷಣಗಳುಳ್ಳ ಪ್ರಕರಣಗಳಿಗೆ ಮಾತ್ರ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಡಾ. ಶಿವಕುಮಾರ್‌ಮಾಹಿತಿ ನೀಡಿದ್ದಾರೆ.

ದೇಶದೆಲ್ಲೆಡೆ ಮಾರಕವಾಗಿ ಪರಿಣಮಿಸಿರುವ ಎಚ್1 ಎನ್1 ಇನ್‌ಫ್ಲುಯೆಂಝಾ ಸೋಂಕಿಗೆ ಪರಿಣಾಮಕಾರಿಯಾದ ಔಷಧ ಲಭ್ಯವಿದೆ. ಜಿಲ್ಲೆಯಲ್ಲಿ ರೋಗ ಪ್ರಕರಣ ವರದಿಯಾದರೆ ಸೂಕ್ತ ಚಿಕಿತ್ಸೆ ನೀಡಲು ಟ್ಯಾಮಿಪ್ಲೂ ಔಷಧವನ್ನು ದಾಸ್ತಾನು ಇಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ. ಶಿವಕುಮಾರ್ ಹೇಳಿದ್ದಾರೆ.

ಎಚ್1ಎನ್1 ಇನ್‌ಫ್ಲುಯೆಂಝಾ ರೋಗವು ವೈರಸ್‌ನಿಂದ ಬರುವ ಕಾಯಿಲೆ. ಎಚ್1 ಎನ್1 ಇನ್‌ಫ್ಲುಯೆಂಝಾ ರೋಗಕ್ಕೂ ಹಂದಿಗಳಿಗೂ ಯಾವುದೇ ಸಂಬಂಧವಿಲ್ಲ. ಹಂದಿ ಸಾಕಣೆ ಮಾಡುವುದರಿಂದ ಮತ್ತು ಮಾಂಸ ಸೇವನೆಯಿಂದ ರೋಗ ಹರಡುವುದಿಲ್ಲ. ಈ ರೋಗವು ಕೇವಲ ಮನುಷ್ಯರಿಂದ ಮನುಷ್ಯರಿಗೆ ಮಾತ್ರ ಹರಡುತ್ತದೆ.

-ಡಾ.ಎಂ. ಶಿವಕುಮಾರ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ

ಮುಂಜಾಗೃತಾ ಕ್ರಮಗಳು

-ಎಚ್1 ಎನ್1 ಇನ್‌ಫ್ಲುಯೆಂಝಾ ರೋಗ ಒಬ್ಬರಿಂದ ಒಬ್ಬರಿಗೆ ಹರಡದಂತೆ ಕೆಮ್ಮುವಾಗ, ಸೀನು ವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮೂಗನ್ನು ಮುಚ್ಚಿಕೊಳ್ಳಬೇಕು.

-ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯುತ್ತಿ ರಬೇಕು. ವೈಯುಕ್ತಿಕ ಸ್ವಚ್ಛತೆ ಪಾಲಿಸಿ, ಸ್ನಾನ ಮಾಡಿ, ಶುಭ್ರ ಬಟ್ಟೆ ಧರಿಸಬೇಕು.

-ಸೋಂಕು ಇದ್ದಲ್ಲಿ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುವುದು, ಒತ್ತಡವನ್ನು ನಿಭಾಯಿಸಿ ಪೌಷ್ಟಿಕ ಆಹಾರ ಸೇವಿಸಬೇಕು.

-ಸಣ್ಣ ಮಕ್ಕಳಿದ್ದಲ್ಲಿ ಅವರು ಸೋಂಕಿಗೆ ಒಳಗಾಗದಂತೆ ಎಚ್ಚರವಹಿಸಬೇಕು.

-ಶಾಲಾ ಮಕ್ಕಳಲ್ಲಿ ಸೋಂಕಿದ್ದರೆ ಶಾಲೆಗೆ ಕಳುಹಿಸದೇ ಸೂಕ್ತ ಚಿಕಿತ್ಸೆ ಪಡೆದು ಮನೆಯಲ್ಲಿಯೇ ವಿಶ್ರಾಂತಿ ಪಡೆಯಬೇಕು.

-ಜನನಿಬಿಡ ಪ್ರದೇಶದಿಂದ ದೂರವಿರಬೇಕು.

-ಎಚ್1 ಎನ್1 ಇನ್‌ಫ್ಲುಯೆಂಝಾ ರೋಗ ಹೆಚ್ಚಿನ ಮಾಹಿತಿಗೆ ಆರೋಗ್ಯ ಇಲಾಖೆಯ ಸಹಾಯವಾಣಿ 104ಕ್ಕೆ ಕರೆ ಮಾಡಿ ಪಡೆದುಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News