ದಸರಾದ ಪ್ರತಿ ಹಂತದಲ್ಲೂ ಶಿಷ್ಟಾಚಾರ ಉಲ್ಲಂಘನೆ: ಶಾಸಕ ತನ್ವೀರ್ ಸೇಠ್

Update: 2018-10-20 18:13 GMT

ಮೈಸೂರು,ಅ.20: ನಾಡಹಬ್ಬ ದಸರಾ ಪ್ರತಿ ಹೆಜ್ಜೆಯಲ್ಲಿಯೂ ಗೊಂದಲದ ಗೂಡಾಗಿದ್ದು, ಪ್ರಸಕ್ತ ಸಾಲಿನ ದಸರವು ನಾಡ ಸಂಸ್ಕೃತಿ ಪರಂಪರೆಗೆ ಕಪ್ಪು ಚುಕ್ಕೆಯಾಯಿತು. ಅಲ್ಲದೇ ಪ್ರತಿ ಹಂತದಲ್ಲೂ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಶಾಸಕ ತನ್ವೀರ್ ಸೇಠ್  ಒತ್ತಾಯಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಾ.ರಾ.ಮಹೇಶ್ ಅವರ ಮುಸುಕಿನ ಗುದ್ದಾಟ ದಸರಾ ಮೇಲೆ ಬೀರಿದ್ದು, ನೆಪ ಮಾತ್ರದಲ್ಲಿ ಉಪ ಸಮಿತಿಗಳನ್ನು ನೇಮಿಸಿ ತಮ್ಮನ್ನು ಸೇರಿದಂತೆ ಸ್ಥಳೀಯ ಕಾಂಗ್ರೆಸಿಗರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

ಕಳೆದ ಐದು ಬಾರಿ ಆಯ್ಕೆಯಾಗಿರುವ ಹಿರಿಯ ಶಾಸಕನಾಗಿರುವ ನನ್ನ ಹೆಸರನ್ನೇ ಆಹ್ವಾನ ಪತ್ರಿಕೆಯಲ್ಲಿ 5ನೇ ಸ್ಥಾನದಲ್ಲಿ ಹಾಕಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ತನಗೆ ಸೇರಿದಂತೆ ಯಾವೊಬ್ಬ ಸ್ಥಳೀಯ ಕಾಂಗ್ರೆಸಿಗರಿಗೂ ಆಹ್ವಾನವೇ ಬಂದಿಲ್ಲ. ನಾಡ ಹಬ್ಬ ದಸರಾ ನಿರ್ವಿಘ್ನವಾಗಿ ಸಂಪನ್ನವಾಗಲಿ ಎಂಬ ಉದ್ದೇಶದಿಂದ ಇಲ್ಲಿಯವರೆಗೆ ಮೌನವಾಗಿದ್ದೆವು. ಇನ್ನು ಹೋರಾಟ ಆರಂಭವಾಗಲಿದೆ ಎಂದು ಎಚ್ಚರಿಸಿದರು.

ನಾಡ ಹಬ್ಬ ದಸರಾವನ್ನು ತಮ್ಮ ಮನೆಯ ಹಬ್ಬದಂತೆ ಆಚರಿಸಿರುವ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸ್ವಂತಕ್ಕೆ 10 ಸಾವಿರ, ಸಚಿವ ಸಾ.ರಾ. ಮಹೇಶ್ ಅವರಿಗೆ 5 ಸಾವಿರ, ಸಿ.ಎಂ ಗೆ 2 ಸಾವಿರ ಪಾಸ್ ವಿತರಿಸಿಕೊಂಡಿದ್ದಾರೆ. ಆದರೆ ಸ್ಥಳೀಯ ಶಾಸಕನಾದ ತನಗೆ ಕೇವಲ 100 ಪಾಸ್ ನೀಡಲಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಕೇವಲ 8 ಪಾಸ್ ನೀಡಿದ್ದು, ಬೇರೆ ಯಾವೊಬ್ಬ ಕಾಂಗ್ರೆಸಿಗರಿಗೂ ಪಾಸ್ ಲಭ್ಯವಾಗಿಲ್ಲ. ಪಾಸ್ ವಿತರಣೆಯಲ್ಲಿ ಸಂಪೂರ್ಣ ಗೋಲ್ ಮಾಲ್ ಆಗಿದ್ದು, ಗೋಲ್ಡನ್ ಪಾಸ್ ಇದ್ದವರಿಗೂ ಸೂಕ್ತ ರೀತಿಯ ಆಸನ ವ್ಯವಸ್ಥೆಯಾಗಿಲ್ಲ. ನಿಗದಿಗಿಂತ ಮೀರಿ ಪಾಸ್ ಮುದ್ರಿಸಲಾಗಿದ್ದು, ಪಾಸ್ ಮುದ್ರಿಸಿರುವ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಇದು ವ್ಯಕ್ತಿಗತ ಸಂಘರ್ಷವಲ್ಲ. ಸಮ್ಮಿಶ್ರ ಸರ್ಕಾರದಲ್ಲಿದ್ದರೂ ತನಗೆ ಅನ್ಯಾಯ, ಅವಮಾನವಾದಾಗ ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ನೀಡಿದ ಆದೇಶವನ್ನು ಸಚಿವರು ಗಾಳಿಗೆ ತೂರಿದ್ದಾರೆ ಎಂದರು.

ಕಾಂಗ್ರೆಸಿಗರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಜಿಲ್ಲಾಡಳಿತವು ಉಸ್ತುವಾರಿ ಸಚಿವರ ಕೈಗೊಂಬೆಯಾಗಿದೆ. ಪತ್ರಕರ್ತರು ಸೇರಿದಂತೆ ಅಮಾಯಕರ ಮೇಲೆ ಪೊಲೀಸ್ ದೌರ್ಜನ್ಯ, ಓಪನ್ ಸ್ಟ್ರೀಟ್ ನಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆ, ಪಾಸ್ ವಿತರಣೆ ಸಂಬಂಧ ಜಿಲ್ಲಾಡಳಿತ ಸ್ಪಷ್ಟೀಕರಣ ನೀಡಲಿ ಎಂದು ಆಗ್ರಹಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ವಿಜಯ್ ಕುಮಾರ್, ಸಾಹುಕಾರ್ ಚನ್ನಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶಾಂತಕುಮಾರಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News