ಚಿಕ್ಕಮಗಳೂರು: ಕೆರೆ ಹೂಳೆತ್ತದೆ ಕಾಮಗಾರಿ ಬಿಲ್ ಪಾವತಿ; ಆರೋಪ

Update: 2018-10-20 18:23 GMT

ಚಿಕ್ಕಮಗಳೂರು, ಅ.20: ಕೆರೆ ಹೂಳೆತ್ತಲು ಬಿಡುಗಡೆಯಾದ ಅನುದಾನ ದುರ್ಬಳಕೆ ಸಂಬಂಧ ರೈತರು ಲೋಕಾಯುಕ್ತರಿಗೆ ನೀಡಿದ್ದ ದೂರಿನ ಪರಿಶೀಲನೆಗೆ ಇಂಜಿನಿಯರ್ ಗಳು ಬಂದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ರೈತ ಮುಖಂಡರು ಇಂಜಿನಿಯರ್ ಗಳನ್ನು ಅಡ್ಡಗಟ್ಟಿ ತರಾಟೆಗೆ ಪಡೆದ ಘಟನೆ ಶನಿವಾರ ನಗರ ಸಮೀಪದ ಹಂಪಾಪುರ ಗ್ರಾಮದಲ್ಲಿ ನಡೆದಿದೆ.

ನಗರ ಹೊರವಲಯದ ಹಂಪಾಪುರದ ತೂಬುಗೆರೆಯ ಹೂ ತೆಗೆಯುವುದು ಸೇರಿದಂತೆ ಇತರ ಕಾಮಾರಿಗಳಿಗೆ ಸರಕಾರದಿಂದ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ಕೆರೆಯಲ್ಲಿನ ಹೂಳೆತ್ತುವ ಕಾಮಗಾರಿ ಮಾಡದೆ ಕಾಮಗಾರಿ ನಡೆದಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳು ಬಿಲ್ ಸಿದ್ಧಪಡಿಸಿ ಹಣ ಪಾವತಿಸಿದ್ದಾರೆಂದು ಆರೋಪಿಸಿ ರೈತ ಸಂಘದ ಸದಸ್ಯರು ಲೋಕಾಯುಕ್ತರಿಗೆ ಈ ಹಿಂದೆ ದೂರು ಸಲ್ಲಿಸಿದ್ದರು.

ಶನಿವಾರ ಬೆಳಗ್ಗೆ ಲೋಕೋಪಯೋಗಿ ಇಲಾಖೆಯ ಇಬ್ಬರು ಇಂಜಿನಿಯರ್ ಗಳು ಪರಿಶೀಲಿಸಲು ಹಂಪಾಪುರ ಗ್ರಾಮದ ಕೆರೆ ಬಳಿ ಆಗಮಿಸಿದ್ದರು. ಹೀಗೆ ಬಂದ ಅಧಿಕಾರಿಗಳು ಲೋಕಾಯುಕ್ತ ಸಂಸ್ಥೆಯವರಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ರೈತ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕೆರೆಯನ್ನು ಪರಿಶೀಲಿಸಲು ಅವಕಾಶ ನೀಡದೇ ಇಂಜಿನಿಯರ್ ಗಳನ್ನು ಗ್ರಾಮದ ಮಧ್ಯೆಯೇ ಅಡ್ಡಗಟ್ಟಿದರು.

ಈ ವೇಳೆ, ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಪರಿಶೀಲನೆಗಾಗಿ ಗ್ರಾಮಕ್ಕೆ ಬಂದಿರುವುದಾಗಿ ಇಂಜಿನಿಯರ್ ಗಳು ಸಮಾಜಾಯಿಸಿ ನೀಡಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಜಿಲ್ಲಾಧಿಕಾರಿಗಳ ವಿರುದ್ಧವೂ ನಾವು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇವೆ. ಅವರು ಹೇಗೆ ಕಾಮಗಾರಿ ಪರಿಶೀಲಿಸಲು ಸೂಚನೆ ನೀಡುತ್ತಾರೆ. ಲೋಕಾಯುಕ್ತರೇ ಇಲ್ಲಿಗೆ ಬಂದು ಕಾಮಗಾರಿ ಪರಿಶೀಲಿಸಬೇಕೆಂದು ಪಟ್ಟು ಹಿಡಿದರು.

ಜಿಲ್ಲೆಯಲ್ಲಿ ಒಟ್ಟು 244 ಕೆರೆಗಳ ಹೂಳು ತೆಗೆಯಲು ಸರಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ ಯಾವುದೇ ಕೆರೆಯ ಹೂಳು ತೆಗೆದಿಲ್ಲ. ಎಲ್ಲೆಡೆ ಕಾಮಗಾರಿ ನಿರ್ವಹಿಸದೇ ಬಿಲ್ ಪಾವತಿಯಾಗಿರುವುದು ಕಂಡು ಬಂದಿದ್ದು, ಸಾರ್ವಜನಿಕರ ಹಣವನ್ನು ಅಧಿಕಾರಿಗಳು, ಇಂಜಿನಿಯರ್ ಗಳು ಲೂಟಿ ಮಾಡುತ್ತಿದ್ದಾರೆ. ಕೆರೆಗಳಲ್ಲಿ ನೀರು ಖಾಲಿಯಾದಾಗ ರೈತರು ಕೆರೆಯಲ್ಲಿನ ಹೂಳು ತೆಗೆದು ತಮ್ಮ ಜಮೀನಿಗೆ ಹಾಕಿಕೊಳ್ಳುವುದು ಸಾಮಾನ್ಯ ಸಂಗತಿ. ಹೀಗೆ ಮಣ್ಣು ತೆಗೆದ ಕೆರೆಗಳ ಫೋಟೊ ತೆಗೆದು ತಾವೇ ಕಾಮಗಾರಿ ಮಾಡಿರುವುದಾಗಿ ಅಧಿಕಾರಿಗಳು, ಗುತ್ತಿಗೆದಾರರು ಬಿಲ್ ಮಾಡಿಕೊಂಡಿದ್ದಾರೆ. ಯಾವುದೇ ಕಾಮಗಾರಿ ನಡೆದರೂ ಎಷ್ಟು ಮೊತ್ತ, ಏನು ಕೆಲಸ, ಗುತ್ತಿಗೆದಾರರ ಹೆಸರು ಎಲ್ಲವನ್ನೂ ಸೇರಿಸಿ ನಾಮಫಲಕ ಹಾಕಬೇಕು. ಆದರೆ ಇಲ್ಲಿ ಯಾವುದೇ ನಾಮಫಲಕ ಹಾಕಿಲ್ಲ ಎಂದು ಇದೇ ವೇಳೆ ಆರೋಪಿಸಿದ ಗ್ರಾಮಸ್ಥರು, ರೈತ ಮುಖಂಡರು, ಕಾಮಗಾರಿ ಇಲ್ಲಿ ನಡೆದಿರುವುದು ನಿಜವಾದರೆ ಕೂಡಲೆ ನಾಮಫಲಕ ಹಾಕಿ, ಅದರಲ್ಲಿ ಕಾಮಗಾರಿಗಳ ಪಟ್ಟಿಯನ್ನೂ ಹಾಕಿ. ಆ ನಂತರ ನಾವು ನಿಮ್ಮನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ. ನೀವು ಏನು ತನಿಖೆ ನಡೆಸುತ್ತೀರಿ ಎಂಬುದೂ ನಮಗೆ ತಿಳಿಯುತ್ತದೆ ಎಂದು ಪಟ್ಟು ಹಿಡಿದರು.

ಇದಕ್ಕೆ ಸ್ಥಳದಲ್ಲಿದ್ದ ಇಂಜಿನಿಯರ್ ಗಳು ಪ್ರತಿಕ್ರಿಯಿಸಿ, ಸಿಮೆಂಟ್, ಕಬ್ಬಿಣ, ಎಷ್ಟು ಬಳಕೆ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಕಳಿಸಿದ್ದಾರೆ. ಹೂಳಿನ ವಿಚಾರ ತಮಗೆ ಗೊತ್ತಿಲ್ಲ ಎಂದರು, ಇದಕ್ಕೆ ಗ್ರಾಮಸ್ಥರು, ನೀವು ಯಾವ ಆಧಾರದಲ್ಲಿ ತನಿಖೆ, ಪರಿಶೀಲನೆ ಮಾಡುತ್ತೀರಿ, ಲೋಕಾಯುಕ್ತರು ಬರುವವರೆಗೂ ನಿಮ್ಮನ್ನು ಬಿಡುವುದಿಲ್ಲ ಎಂದು  ಪಟ್ಟು ಹಿಡಿದು ಕುಳಿತರು. 

ಬೆಳಗ್ಗೆ ಸುಮಾರು 11 ಗಂಟೆಗೆ ಗ್ರಾಮಕ್ಕೆ ಬಂದ ಇಂಜಿನಿಯರ್ ಳೊಂದಿಗೆ ಸಂಜೆ 4-30ರವರೆಗೂ ರೈತರು ಹಾಗೂ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದರು. ನಂತರ ಅಧಿಕಾರಿಗಳು ಪರಿಶೀಲನೆ ಕೈಬಿಟ್ಟು ಹಿಂದಿರುಗುವುದಾಗಿ ಹೇಳಿದಾಗ ರೈತರು ಸುಮ್ಮನಾದರು.

ರೈತ ಸಂಘದ ಮುಖಂಡರುಗಳಾದ ಮಂಜುನಾಥ ಗೌಡ, ಕೃಷ್ಣೇಗೌಡ, ಚಂದ್ರೇಗೌಡ, ಎಂ.ಸಿ.ಬಸವರಾಜ್, ಲಕ್ಷ್ಮಣ್ ಹಾಗೂ ನೂರಾರು ಗ್ರಾಮಸ್ಥರು ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News