ಮಾಲಿನ್ಯ ತಡೆಗೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ

Update: 2018-10-21 04:54 GMT

ಹೊಸದಿಲ್ಲಿ, ಅ. 21: ಮಾಲಿನ್ಯ ಮಟ್ಟ ಏರುತ್ತಿರುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಎದುರಾಗಿದ್ದು, ರೋಗದ ಹೊರೆ ಮತ್ತು ರೋಗದಿಂದಾಗುವ ಸಾವಿನ ಪ್ರಮಾಣ ಕೂಡಾ ಹೆಚ್ಚುತ್ತಿದೆ. ಆದ್ದರಿಂದ ಎಲ್ಲ ದೇಶಗಳ ಆರೋಗ್ಯ ಸಚಿವರು, ಜಾಗತಿಕ ಮುಖಂಡರು, ಶೈಕ್ಷಣಿಕ ತಜ್ಞರು ಮತ್ತು ವೈಜ್ಞಾನಿಕ ಸಮುದಾಯ ಮಾಲಿನ್ಯದ ವಿರುದ್ಧ ಸಂಘಟಿತ ಕಾರ್ಯತಂತ್ರ ರೂಪಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕರೆ ನೀಡಿದೆ.

ಮಾಲಿನ್ಯ ತಡೆ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಗುರಿಗಳನ್ನು ನಿರ್ಧರಿಸಲು ಈ ತಿಂಗಳ 30 ರಿಂದ ನವೆಂಬರ್ 1ರ ವರೆಗೆ ಜಿನೀವಾದಲ್ಲಿ ಉನ್ನತ ಮಟ್ಟದ ಸಭೆ ಕರೆಲಾಗಿದೆ. ಅದರಲ್ಲೂ ಮುಖ್ಯವಾಗಿ ಮಾಲಿನ್ಯ ಸಂಬಂಧಿ ರೋಗಗಳಿಂದ ಅಧಿಕ ಮಂದಿ ಸಾವಿಗೀಡಾಗುತ್ತಿರುವ ದೇಶಗಳು ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ದೆಹಲಿ ಮತ್ತು ಉತ್ತರ ರಾಜ್ಯಗಳಲ್ಲಿ ಮಾಲಿನ್ಯ ಮಟ್ಟ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಮುಜುಗರ ಉಂಟಾಗುವ ಸಾಧ್ಯತೆ ಇದೆ.

ವಿಶ್ವದ 20 ಅತ್ಯಂತ ಮಲಿನ ನಗರಗಳ ಪೈಕಿ 14 ಭಾರತೀಯ ನಗರಗಳಾಗಿವೆ. ವಾತಾವರಣದ ವಾಯುಮಾಲಿನ್ಯದಿಂದ ದೇಶದಲ್ಲಿ ಪ್ರತಿ ವರ್ಷ 10.8 ಲಕ್ಷ ಮಂದಿ ಮೃತಪಡುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇಷ್ಟೇ ಸಂಖ್ಯೆಯ ಮಂದಿ ಮನೆಯೊಳಗಿನ ವಾಯುಮಾಲಿನ್ಯದಿಂದಲೂ ಜೀವ ಕಳೆದುಕೊಳ್ಳುತ್ತಿದ್ದಾರೆ. ವಿಶ್ವಾದ್ಯಂತ ವಾರ್ಷಿಕ 70 ಲಕ್ಷ ಮಂದಿ ವಾಯುಮಾಲಿನ್ಯ ಸಂಬಂಧಿ ಕಾಯಿಲೆಗಳಿಂದ ಸಾಯುತ್ತಿದ್ದಾರೆ.

ಕಾನ್ಪುರ, ಫರೀದಾಬಾದ್ ಮತ್ತು ವಾರಾಣಾಸಿ ವಿಶ್ವದ ಅತ್ಯಂತ ಮಲಿನ ನಗರಗಳಾದರೆ, ದೆಹಲಿ, ಪಾಟ್ನಾ, ಆಗ್ರಾ, ಮುಜಾಫರ್‌ಪುರ, ಶ್ರೀನಗರ, ಗುರುಗ್ರಾಮ, ಜೈಪುರ, ಪಾಟಿಯಾಲಾ, ಜೋಧಪುರ ಕೂಡಾ ಪಟ್ಟಿಯಲ್ಲಿ ಸೇರಿವೆ. "ಚಳಿಗಾಲ ಆರಂಭದಲ್ಲಿ ಬಿತ್ತನೆ ಮಾಡುವ ಸಲುವಾಗಿ ಹರ್ಯಾಣ ಮತ್ತು ಪಂಜಾಬ್ ರೈತರು ಬೆಳೆದಂಟುಗಳಿಗೆ ಬೆಂಕಿ ಹಚ್ಚುವುದರಿಂದ ಮತ್ತು ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಇನ್ನಷ್ಟು ಮಾಲಿನ್ಯ ಹೆಚ್ಚುವ ಭೀತಿ ಇದ್ದು, ಮಾಲಿನ್ಯ ನಿಯಂತ್ರಣಕ್ಕೆ ವಿಫಲವಾದ ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಟೀಕಿಸುವ ಸಾಧ್ಯತೆಯಿದೆ" ಎಂದು ಉನ್ನತ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News