ಇಥಿಯೋಪಿಯಾ: ಪ್ರಧಾನಿ ಅಬೀ ಅಹ್ಮದ್ ಅವರ ನೂತನ ಸಂಪುಟದಲ್ಲಿ ಮಹಿಳೆಯರೆಷ್ಟು ಗೊತ್ತೇ?

Update: 2018-10-21 06:59 GMT

ಅಡೀಸ್ ಅಬಾಬಾ (ಇಥಿಯೋಪಿಯಾ),ಅ.21: ದೇಶದ ಸುಧಾರಣಾವಾದಿ ಪ್ರಧಾನಿ ಅಬೀ ಅಹ್ಮದ್ ಅವರು ತಮ್ಮ ನೂತನ ಸಂಪುಟವನ್ನು ಪ್ರಕಟಿಸಿದ್ದು, ಸಂಪುಟದಲ್ಲಿ ಅರ್ಧದಷ್ಟು ಮಹಿಳೆಯರಿರುವುದು ವಿಶೇಷ. ಸಂಪುಟದಲ್ಲಿ ಅರ್ಧದಷ್ಟು ಮಹಿಳೆಯರಿಗೆ ಸ್ಥಾನ ನೀಡುವ ಮೂಲಕ ಆಫ್ರಿಕಾದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಈ ದೇಶದಲ್ಲಿ ಲಿಂಗ ಸಮಾನತೆಗೆ ವಿಶೇಷ ಒತ್ತು ನೀಡಿದಂತಾಗಿದೆ.

ನಿರಂಕುಶವಾದಿ ಆಡಳಿತಕ್ಕೆ ಒಳಪಟ್ಟಿದ್ದ ಈ ದೇಶದಲ್ಲಿ ಏಳು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಅಹ್ಮದ್, ಈ ಅವಧಿಯಲ್ಲಿ ಭಾರಿ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಸಾವಿರಾರು ಮಂದಿ ರಾಜಕೀಯ ಕೈದಿಗಳ ಬಿಡುಗಡೆ, ಇಥಿಯೋಪಿಯಾದ ಪ್ರಮುಖ ಶತ್ರುರಾಷ್ಟ್ರ ಎನಿಸಿದ ಎರಿಟ್ರಿಯಾ ಜತೆಗೆ ಶಾಂತಿ ಒಪ್ಪಂದ ಇವುಗಳಲ್ಲಿ ಪ್ರಮುಖವಾದವು. ಜತೆಗೆ ಆರ್ಥಿಕತೆಯನ್ನು ಮುಕ್ತಗೊಳಿಸುವ ಭರವಸೆಯನ್ನೂ ಪ್ರಧಾನಿ ನೀಡಿದ್ದಾರೆ.

ಹೊಸ ಸಂಪುಟದ ಗಾತ್ರವನ್ನು 28 ರಿಂದ 20ಕ್ಕೆ ಇಳಿಸಲಾಗಿದ್ದು, ಇಥಿಯೋಪಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ, ಮಹಿಳೆಯರಿಗೆ ಭದ್ರತಾ ಹುದ್ದೆಗಳ ಅಗ್ರಸ್ಥಾನವನ್ನು ನೀಡಲಾಗಿದೆ. ಆಯಿಷಾ ಮುಹಮ್ಮದ್ ಅವರಿಗೆ ರಕ್ಷಣಾ ಖಾತೆಯ ಹೊಣೆ ವಹಿಸಿದ್ದರೆ, ಮಾಜಿ ಸ್ಪೀಕರ್ ಮುಫೇರಿಯತ್ ಕಮೀಲ್ ಹೊಸದಾಗಿ ರೂಪುಗೊಂಡ ಶಾಂತಿ ಸಚಿವಾಲಯದ ಮುಖ್ಯಸ್ಥೆಯಾಗಿರುತ್ತಾರೆ. ಈ ಸಚಿವಾಲಯ ಫೆಡರಲ್ ಪೊಲೀಸ್, ಗುಪ್ತಚರ ಸೇವೆ ಮತ್ತು ಮಾಹಿತಿ ಭದ್ರತಾ ಏಜೆನ್ಸಿಯ ಉಸ್ತುವಾರಿ ಹೊಂದಿರುತ್ತದೆ. ಅಬೀ ಸುಧಾರಣೆಗಳ ಬಳಿಕ ದೇಶಾದ್ಯಂತ ವ್ಯಾಪಕವಾಗಿರುವ ಜನಾಂಗೀಯ ಸಂಘರ್ಷವನ್ನು ನಿಯಂತ್ರಿಸುವ ನಿಟ್ಟಿನಲ್ಲೂ ಇದು ಕಾರ್ಯ ನಿರ್ವಹಿಸಲಿದೆ.

"ಮಹಿಳೆಯರು ಉತ್ತಮ ನಾಯಕತ್ವ ನೀಡಲಾರರು ಎಂಬ ಮಾತನ್ನು ನಮ್ಮ ಸಚಿವೆಯರು ಸುಳ್ಳು ಮಾಡಲಿದ್ದಾರೆ" ಎಂದು ಅಬೀ, ಪಾರ್ಲಿಮೆಂಟ್‍ನಲ್ಲಿ ಹೇಳಿದ್ದಾರೆ. ಈ ಮೊದಲು ಕೂಡಾ ಸಂಪುಟದಲ್ಲಿ ಮಹಿಳೆಯರಿದ್ದರೂ, ಕಡಿಮೆ ಸಂಖ್ಯೆಯಲ್ಲಿದ್ದರು. ಹೊಸ ಸಂಪುಟದಲ್ಲಿ ರಕ್ಷಣೆ ಮತ್ತು ಭದ್ರತೆಯ ಜತೆಗೆ, ವ್ಯಾಪಾರ, ಸಾರಿಗೆ, ಕಾರ್ಮಿಕ, ಸಂಸ್ಕೃತಿ, ವಿಜ್ಞಾನ ಹಾಗೂ ಕಂದಾಯ ಸಚಿವಾಲಯಗಳು ಕೂಡಾ ಮಹಿಳೆಯರ ಪಾಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News