ಕಮ್ಮರಡಿ: ದುಷ್ಕರ್ಮಿಗಳಿಂದ ಮಸೀದಿಗೆ ಹಾನಿ; ಆರೋಪ

Update: 2018-10-21 08:04 GMT

ಚಿಕ್ಕಮಗಳೂರು, ಅ. 21: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿಯ ಮುಹಿಯ್ಯುದ್ದೀನ್ ಜುಮಾ ಮಸೀದಿಗೆ ದಸರಾ ಮೆರವಣಿಗೆಯಲ್ಲಿ ಸಾಗಿ ಬಂದ ದುಷ್ಕರ್ಮಿಗಳ ತಂಡ ಹಾನಿಗೈದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. 

ಅಂದು ರಾತ್ರಿ ಸುಮಾರು 1.30ರ ವೇಳೆಗೆ "ಅಮ್ಮನವರು" ವಿಗ್ರಹವನ್ನು ಹೇರಿಕೊಂಡು ಬಂದ ದುಷ್ಕರ್ಮಿಗಳು ಮಸೀದಿಯ ಗೇಟನ್ನು ಬಲವಂತದಿಂದ ಮುರಿದು ಮುನ್ನುಗ್ಗಿದ್ದಾರೆ. ಬಳಿಕ ಮಸೀದಿಯ ಬಾಗಿಲನ್ನು ಬಡಿದಿದ್ದಾರೆ. ಹಾಗೇ ಮಸೀದಿಯೊಳಗೆ ಮಲಗಿದ್ದ ಮೂವರು ಮೌಲವಿಗಳನ್ನು ಕರೆದು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

"ಅಮ್ಮನವರು" ವಿಗ್ರಹ ಹೋದಲ್ಲಿ ಅದನ್ನು ಹೇರಿಕೊಂಡು ಹೋದವರೂ ಕೂಡಾ ಹೋಗುತ್ತಾರೆ ಎಂಬ ಪ್ರತೀತಿ ಇದೆಯಾದರೂ ಈ ಕೃತ್ಯದ ಹಿಂದೆ ಮತೀಯ ಗಲಭೆ ನಡೆಸುವ ಸಂಚು ಇತ್ತೆಂಬ ಆರೋಪ ಕೇಳಿ ಬಂದಿದೆ. ಉಪ ಚುನಾವಣೆಯ ಸಂದರ್ಭ ಈ ಕೃತ್ಯ ನಡೆದಿರುವುದು ಕೂಡಾ ಈ ಆರೋಪಕ್ಕೆ ಪುಷ್ಠಿ ನೀಡಿದೆ. ಘಟನೆಗೆ ಸಂಬಂಧಿಸಿದಂತೆ ಮಸೀದಿಯವರು ಹರಿಹರಪುರ ಠಾಣೆಗೆ ದೂರು ನೀಡಿದ್ದರೂ ಸ್ಥಳೀಯ ದೇವಸ್ಥಾನದ ಮುಖಂಡರ ಮಧ್ಯಸ್ಥಿಕೆಯ ಫಲವಾಗಿ ಪ್ರಕರಣವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಕೃತ್ಯ ಎಸಗಿದ ದುಷ್ಕರ್ಮಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ದುಷ್ಕರ್ಮಿಗಳೇ ತಾವೆಸೆಗಿದ ಕೃತ್ಯವನ್ನು ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಅದೀಗ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News