ಮತದಾರರಿಗೆ ದ್ರೋಹವೆಸಗಿದ ಯಡಿಯೂರಪ್ಪ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

Update: 2018-10-21 11:34 GMT

ಸೊರಬ,ಅ.21: ಸಂಸದ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವ ಮೂಲಕ ಐದು ವರ್ಷದ ಅವಧಿಗಾಗಿ ಆಯ್ಕೆಮಾಡಿ ಕಳುಹಿಸಿದ ಜಿಲ್ಲೆಯ ಮತದಾರರಿಗೆ ದ್ರೋಹವೆಸಗಿದ್ದಾರೆ. ಯಡಿಯೂರಪ್ಪನವರ ಮಗನ ಸೋಲು ರಾಜ್ಯದಲ್ಲಿ ಹೊಸ ರಾಜಕಾರಣಕ್ಕೆ ಚಾಲನೆ ನೀಡಿದಂತಾಗುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಪಟ್ಟಣದ ಬಂಗಾರಧಾಮದಲ್ಲಿ ಶನಿವಾರ ಸಂಜೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇಂದು ಬಂಗಾರಪ್ಪನವರು ನಮ್ಮೊಂದಿಗಿಲ್ಲ. ಅವರೊಂದಿಗೆ ರಾಜಕಾರಣ ಮಾಡಿದ ನಾನು ಇನ್ನೂ ಉಳಿದಿದ್ದೇನೆ. ತಂದೆ ಸ್ಥಾನದಲ್ಲಿದ್ದು ಮಧುಗೆ ಆಶೀರ್ವಾದ ಮಾಡುತ್ತಿದ್ದೇನೆ. ಮಧುಬಂಗಾರಪ್ಪನವರನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪನವರಿಗೆ ತಕ್ಕ ಪಾಠ ಕಲಿಸಬೇಕಾಗಿದ್ದು, ಮಧು ಗೆಲುವು ನನ್ನ ಮಗನ ಗೆಲುವಾಗಿದೆ ಎಂದು ನುಡಿದ ಅವರು, ತಾಲೂಕು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಪುಣ್ಯಭೂಮಿಯಾಗಿದ್ದು, ರಾಜ್ಯ ಮತ್ತು ರಾಷ್ಟ್ರನಾಯಕನನ್ನು ನೀಡಿದ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ ಎಂದರು. 

ಜಿಲ್ಲೆಯ ಜನ ಕೇವಲ ನಾಲ್ಕು ತಿಂಗಳ ಅವಧಿಗಾಗಿ ಮತ್ತೊಂದು ಚುನಾವಣೆ ಎದುರುಸುವಂತೆ ಮಾಡಿದ ಯಡಿಯೂರಪ್ಪನವರ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಸದ ಬುಟ್ಟಿಗೆ ಎಸೆಯುವಂತಾಗಿದೆ. ಜಿಲ್ಲೆಯ ಜನ ಗೆಲ್ಲಿಸಿದ್ದು ರಾಜಿನಾಮೆ ನೀಡುವುದಕ್ಕಲ್ಲವೆಂಬುದನ್ನು ನೆನಪಿಟ್ಟುಕೊಳ್ಳಬೇಕಾಗಿದ್ದು, ರಾಷ್ಟ್ರಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇನ್ನೂ 26 ಪ್ರಕರಣಗಳು ಅವರ ವಿರುದ್ಧ ವಿಚಾರಣಾ ಹಂತದಲ್ಲಿದ್ದು, ಯಾವಾಗ ಜೈಲಿಗೆ ಹೋಗುತ್ತಾರೋ ಕಾದು ನೋಡಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ವಿಶ್ವಾಸ ವ್ಯಕ್ತಪಡಿಸಿ, ನಾನು ಕಂದಾಯ ಸಚಿವನಾಗಿದ್ದಾಗ ರಾಜ್ಯದ ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕು-ಪತ್ರ ಕೊಡಿಸಿದ್ದೆ. ಈಗ ಕೆಲವರು ದ್ವೇಷ ರಾಜಕಾರಣದಿಂದ ಅಧಿಕಾರಿಗಳ ಮೂಲಕ ಬಗರ್‍ಹುಕುಂ ಹಕ್ಕು-ಪತ್ರ ಪಡೆದ ರೈತರಿಗೆ ನೋಟಿಸ್ ಕೊಡಿಸುತ್ತಿದ್ದಾರೆ. ಪ್ರಾಣ ಹೋದರೂ ಚಿಂತೆಯಿಲ್ಲ ಬಗರ್ ಹುಕುಂ ರೈತರಿಗೆ ರಕ್ಷಣೆ ನೀಡುತ್ತೇನೆಂದು ಭರವಸೆ ನೀಡಿದರು.

ಸಭೆಯಲ್ಲಿ ಮಧುಬಂಗಾರಪ್ಪ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ತಿ.ನಾ.ಶ್ರೀನಿವಾಸ್, ಸೊರಬ ಬ್ಲಾಕ್ ಅಧ್ಯಕ್ಷ ಜೆ.ಶಿವಾನಂದಪ್ಪ, ಚೌಟಿ ಚಂದ್ರಶೇಖರ ಪಾಟೀಲ್, ಜೆಡಿಎಸ್ ಸೊರಬ ಬ್ಲಾಕ್ ಅಧ್ಯಕ್ಷ ಎಚ್.ಗಣಪತಿ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಕೆ.ಪಿ.ರುದ್ರಗೌಡ, ಮುಖಂಡರಾದ ಕೆ.ಮಂಜುನಾಥ್ ಹಳೇಸೊರಬ, ಹುಲ್ತಿಕೊಪ್ಪ ಶ್ರೀಧರ್, ಎಂ.ಡಿ.ಶೇಖರ್, ಕೆ.ಅಜ್ಜಪ್ಪ, ಹಿರೇಕೌಂಶಿ ರಶೀದ್, ಪ್ರಶಾಂತ್ ಮೇಸ್ತ್ರಿ, ಕೆ.ಜಿ.ಲೋಲಾಕ್ಷಮ್ಮ, ಕರುಣಾಕರ, ಪಕೀರಪ್ಪ ಮಾಕೊಪ್ಪ, ಜಯಶೀಲ ಗೌಡ, ಸುನೀಲ್ ಗೌಡ, ಸುರೇಶ್ ಹಾವಣ್ಣನವರ್, ರಾಜು ಕುಪ್ಪಗಡ್ಡೆ, ಸುಮಾಗಜಾನನ, ರಾಜೇಶ್ವರಿ ಗಣಪತಿ, ವಿರೇಶ್ ಕೊಟಗಿ, ಶಿವಲಿಂಗೇಗೌಡ, ತಾರಾಶಿವಾನಂದ್, ನಾಗರಾಜ್ ಚಂದ್ರಗುತ್ತಿ, ಜಿಕೆರಿಯಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News