ತಂದೆ ಬಂಗಾರಪ್ಪನವರು ಹಿಂಬಾಗಿಲ ರಾಜಕಾರಣವನ್ನು ಎಂದೂ ಕಲಿಸಿಲ್ಲ: ಮಧು ಬಂಗಾರಪ್ಪ

Update: 2018-10-21 11:40 GMT

ಸೊರಬ,ಅ.21: ತಾಲೂಕಿನ ಜನತೆ ನನ್ನನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆ ಮಾಡುತ್ತಿದ್ದರೆ ಇಂದು ಸರ್ಕಾರದ ದೊಡ್ಡ ಸ್ಥಾನದಲ್ಲಿರುತ್ತಿದ್ದೆ. ನಾನು ಸೋತಿದ್ದೇನೆ. ಸೋತ ಕೇವಲ ನಾಲ್ಕೇ ತಿಂಗಳಲ್ಲಿ ಮತ್ತೆ ಸಂಸದನಾಗುವ ಅವಕಾಶ ದೊರೆತಿದೆ. ಅಧಿಕಾರದಿಂದ ಹೋರಾಟಕ್ಕೆ ಶಕ್ತಿ ದೊರೆಯುತ್ತದೆ. ನನ್ನನ್ನು ಗೆಲ್ಲಿಸಿದಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಶಿವಮೊಗ್ಗ ಕ್ಷೇತ್ರ ಲೋಕಸಭಾ ಉಪಚುನಾವಣೆ ಅಭ್ಯರ್ಥಿ ಮಧುಬಂಗಾರಪ್ಪ ಭರವಸೆ ನೀಡಿದರು.

ಪಟ್ಟಣದ ಬಂಗಾರಧಾಮದಲ್ಲಿ ಶನಿವಾರ ಸಂಜೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಯಾರನ್ನೂ ಹೊಣೆಯಾಗಿಸಲು ಇಷ್ಟಪಡುವುದಿಲ್ಲ. ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರಾದಿಯಾಗಿ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದರೂ ಅವರ ಪರವಾಗಿ ದುಡಿಯಲು ಸಿದ್ಧನಾಗಿದ್ದೆ. ಹಿರಿಯರಾದ ಕಾಗೋಡು ತಿಮ್ಮಪ್ಪ ಸೇರಿದಂತೆ ಜಿಲ್ಲೆ, ರಾಜ್ಯ, ರಾಷ್ಟ್ರನಾಯಕರು ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ ಎಂದರು. 

ನಮ್ಮ ತಂದೆ ಬಂಗಾರಪ್ಪನವರು ಹಿಂಬಾಗಿಲ ರಾಜಕಾರಣವನ್ನು ಎಂದೂ ಕಲಿಸಿಲ್ಲ. ನೇರವಾಗಿ ಜನರ ಮಧ್ಯದಲ್ಲಿದ್ದು ರಾಜಕಾರಣ ಮಾಡುವುದನ್ನು ಕಲಿಸಿದ್ದಾರೆ. ತಂದೆಯವರ ಅನುಪಸ್ಥಿತಿಯಲ್ಲಿ ಕಾಗೋಡು ತಿಮ್ಮಪ್ಪನವರ ಮಾರ್ಗದರ್ಶನದಲ್ಲಿ ರಾಜಕಾರಣ ಮಾಡುತ್ತಿದ್ದೇನೆ ಎಂದರು.

ಸಾಗರ ಮಾಜಿ ಶಾಸಕ ಗೊಪಾಲಕೃಷ್ಣ ಬೇಳೂರು ಮಾತನಾಡಿ, ಭ್ರಷ್ಟಾಚಾರದ ಮೂಲಕ ಗಳಿಸಿದ ಹಣದಲ್ಲಿ ಯಡಿಯೂರಪ್ಪ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಈ ಹಿಂದೆ ರಾಘವೇಂದ್ರ ಸಂಸದನಾಗಿ ಕೇವಲ ಬಸ್‍ಸ್ಟಾಂಡ್ ನಿರ್ಮಿಸಿದ್ದು ಬಿಟ್ಟರೇ ಇನ್ನಾವ ಸಾಧನೆಯನ್ನೂ ಮಾಡಿಲ್ಲ. ಹಾಗಾಗಿ ಬಸ್‍ಸ್ಟಾಂಡ್ ರಾಘು ಎಂದೇ ಪ್ರಸಿದ್ಧರು ಎಂದರು.

ತಾಲೂಕಿನ ಜನತೆ ಮುಧು ಬಂಗಾರಪ್ಪನವರನ್ನು ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಲ್ಲಿ ಮಂತ್ರಿಯಾಗಿ ಕುಮಾರಸ್ವಾಮಿಯವರ ನಂತರದ ಸ್ಥಾನದಲ್ಲಿರುತ್ತಿದ್ದರು. ಕಳೆದು ಹೋದ ಬಗ್ಗೆ ಚಿಂತಿಸದೆ ಲೋಕಸಭಾ ಚನಾವಣೆಯಲ್ಲಿ ಗೆಲ್ಲಿಸುವ ಮೂಲಕ ಎಂಟು ವಿಧಾನಸಭಾ ಕ್ಷೇತ್ರಗಳ ಅಧಿಪತಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿ.ನಾ.ಶ್ರೀನಿವಾಸ್, ಸೊರಬ ಬ್ಲಾಕ್ ಅಧ್ಯಕ್ಷ ಜೆ.ಶಿವಾನಂದಪ್ಪ, ಚೌಟಿ ಚಂದ್ರಶೇಖರ ಪಾಟೀಲ್, ಜೆಡಿಎಸ್ ಸೊರಬ ಬ್ಲಾಕ್ ಅಧ್ಯಕ್ಷ ಎಚ್.ಗಣಪತಿ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಕೆ.ಪಿ.ರುದ್ರಗೌಡ, ಮುಖಂಡರಾದ ಕೆ.ಮಂಜುನಾಥ್ ಹಳೇಸೊರಬ, ಹುಲ್ತಿಕೊಪ್ಪ ಶ್ರೀಧರ್, ಎಂ.ಡಿ.ಶೇಖರ್, ಕೆ.ಅಜ್ಜಪ್ಪ, ಹಿರೇಕೌಂಶಿ ರಶೀದ್, ಪ್ರಶಾಂತ್ ಮೇಸ್ತ್ರಿ, ಕೆ.ಜಿ.ಲೋಲಾಕ್ಷಮ್ಮ, ಕರುಣಾಕರ, ಪಕೀರಪ್ಪ ಮಾಕೊಪ್ಪ, ಜಯಶೀಲ ಗೌಡ, ಸುನೀಲ್ ಗೌಡ, ಸುರೇಶ್ ಹಾವಣ್ಣನವರ್, ರಾಜು ಕುಪ್ಪಗಡ್ಡೆ, ಸುಮಾಗಜಾನನ, ರಾಜೇಶ್ವರಿ ಗಣಪತಿ, ವಿರೇಶ್ ಕೊಟಗಿ, ಶಿವಲಿಂಗೇಗೌಡ, ತಾರಾಶಿವಾನಂದ್, ನಾಗರಾಜ್ ಚಂದ್ರಗುತ್ತಿ, ಜಿ.ಕೆರಿಯಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News