ಸಕಲ ಸರಕಾರಿ ಗೌರವಗಳೊಂದಿಗೆ ಡಾ.ತೋಂಟದ ಸಿದ್ಧಲಿಂಗ ಶ್ರೀ ಅಂತ್ಯಕ್ರಿಯೆ

Update: 2018-10-21 13:11 GMT

ಗದಗ/ಬೆಂಗಳೂರು, ಅ. 21: ಹೃದಯಾಘಾತದಿಂದ ಶನಿವಾರ ಲಿಂಗೈಕ್ಯರಾದ ಗದಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅಂತ್ಯಕ್ರಿಯೆಯನ್ನು ರವಿವಾರ ಸಂಜೆ ಶ್ರೀಮಠದ ಆವರಣದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ತೋಂಟದ ಮಠದ ಆವರಣದಲ್ಲಿನ ಅನುಭವ ಮಂಟಪದ ಎದುರಿನ ಸ್ಥಳದಲ್ಲಿ ಶಿವಮೊಗ್ಗದ ಆನಂದಪುರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮಿ, ಶ್ರೀನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಇನ್ನಿತರ ಶ್ರೀಗಳ ನೇತೃತ್ವದಲ್ಲಿ ಲಿಂಗಾಯತ ವಿಧಿ-ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆಡೆಯಿತು.

ಮೊದಲಿಗೆ ನಾಡಗೀತೆಯೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸಕಲ ಸರಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಸ್ವಾಮೀಜಿ ಕ್ರಿಯಾ ಸಮಾಧಿ ಬಳಿ ಅವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ, ನೂತನ ಉತ್ತರಾಧಿಕಾರಿ ಸಿದ್ದರಾಮ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಯಲ್ಲಿ ಸಚಿವರು, ಶಾಸಕರು, ಹಲವು ಗಣ್ಯರು, ಮಠಾಧೀಶರು ಸೇರಿದಂತೆ ಅಪಾರ ಭಕ್ತ ಸಮೂಹ ಭಾಗವಹಿಸಿತ್ತು. ತೋಂಟದ ಸಿದ್ದಲಿಂಗ ಸ್ವಾಮೀಜಿಯನ್ನು ನೆನೆದು ಅಪಾರ ಭಕ್ತವೃಂದ ಶ್ರೀಗಳಿಗೆ ಕಣ್ಣೀರಿನ ವಿದಾಯ ಹೇಳಿದರು.

ಮೆರವಣಿಗೆ ರದ್ದು: ತೋಂಟದ ಸಿದ್ಧಲಿಂಗ ಸ್ವಾಮಿ ಪಾರ್ಥೀವ ಶರೀರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ, ಬಳಿಕ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಶನಿವಾರ ನಸುಕಿನಲ್ಲೇ ಶ್ರೀಗಳು ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ಅವರ ಮೃತದೇಹವನ್ನು ಹೆಚ್ಚುಕಾಲ ಇಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಮಠದ ಆಡಳಿತ ಮಂಡಳಿ ಬಂದು, ಸಾರ್ವಜನಿಕ ಮೆರವಣಿಗೆ ರದ್ದುಪಡಿಸಲಾಯಿತು.

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಬದಲು, ಮಠದ ಆವರಣದಿಂದ ಪಾದಗಟ್ಟೆವರೆಗೆ ತೋಂಟದಾರ್ಯ ರಥಬೀದಿಯಲ್ಲಿ ಸಾಂಕೇತಿಕವಾಗಿ ಮೆರವಣಿಗೆ ನಡೆಯಿತು. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಸಚಿವ ಶಿವಾನಂದ ಪಾಟೀಲ್, ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ ಎಚ್.ಕೆ.ಪಾಟೀಲ್, ಮಾಜಿ ಶಾಸಕ ಕೋನರೆಡ್ಡಿ ಸೇರಿದಂತೆ ಹಲವು ಗಣ್ಯರು ಶ್ರೀಗಳ ಪಾರ್ಥಿವ ಶರೀದರ ಅಂತಿಮ ದರ್ಶನ ಪಡೆದರು.

ವಿವಿಗೆ ಸ್ವಾಮೀಜಿ ಹೆಸರಿಡಲು ಚಿಂತನೆ

‘ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನಾಡು, ನುಡಿಗೆ ಸಲ್ಲಿಸಿರುವ ಸೇವೆ ಪರಿಗಣಿಸಿ, ಗದುಗಿನ ಗ್ರಾಮೀಣಾಭಿವೃದ್ಧಿ ವಿಶ್ವ ವಿದ್ಯಾಲಯಕ್ಕೆ ಅವರ ಹೆಸರಿಡಬೇಕೆಂದು ಮಠದ ಭಕ್ತರು ಮನವಿ ಸಲ್ಲಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News