ಉತ್ತಮ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಮಹತ್ತರ: ನ್ಯಾ.ಪಿ.ಎನ್.ದೇಸಾಯಿ

Update: 2018-10-21 12:41 GMT

ಚಿಕ್ಕಮಗಳೂರು, ಅ.21: ಸಮಾಜದ ಶಾಂತಿ ಸೌಹಾರ್ದ ಕಾಯುವ ಕೆಲಸ ಸುಲಭದ ಕೆಲಸವಲ್ಲ. ಇಂತಹ ಕೆಲಸ ಮಾಡುವ ಪೊಲೀಸರು ಸದಾ ಒತ್ತಡದ ಜೀವನ ನಡೆಸುತ್ತಿರುತ್ತಾರೆ. ಸದಾ ಜೀವದ ಹಂಗು ತೊರೆದು ಕೆಲಸ ಮಾಡುವ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುವುದು ಅಪರಾಧ. ಹೀಗೆ ಮಾಡುವುದ ಸಮಾಜಕ್ಕೆ ಮಾಡುವ ದೊಡ್ಡ ಅಪಮಾನ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ.ಎನ್.ದೇಸಾಯಿ ಅಭಿಪ್ರಾಯಿಸಿದ್ದಾರೆ.

ರವಿವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ರಾಮನಹಳ್ಳಿ ಡಿ.ಆರ್.ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ದೇಶದ ಒಳಗಿರುವ ಶತ್ರುಗಳ ವಿರುದ್ಧ ಹೋರಾಡಿ, ಜನತೆಯ ಪ್ರಾಣ, ಆಸ್ತಿ ರಕ್ಷಿಸುವ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಸಾರ್ವಜನಿಕರು ಪೊಲೀಸರ ಸೇವೆಗೆ ಸಹಕಾರ ನೀಡಬೇಕೆಂದು ಕರೆ ನೀಡಿದ ಅವರು, ಪೊಲೀಸರ  ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಬ್ದಾರಿ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ದೇಶಾಭಿಮಾನಿಗಳು, ಕ್ರಾಂತಿಕಾರಿಗಳು ಹುತಾತ್ಮರಾಗಿದ್ದಾರೆ. ಸ್ವಾತಂತ್ರ್ಯಾ ನಂತರವೂ ಹಲವರು ದೇಶಕ್ಕಾಗಿ ಹೋರಾಡಿ ಮೃತಪಟ್ಟಿದ್ದಾರೆ. ಅಂತಹವರುಗಳನ್ನು ನೆನಪಿಸಿಕೊಂಡು ಅವರಿಗೆ ಗೌರವ ಸಲ್ಲಿಸುವುದು ನಾಗರಿಕ ಸಮಾಜದ ಹೊಣೆಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದರಿಂದಾಗಿ ಪ್ರಸಕ್ತ ನಾವೆಲ್ಲರೂ ಶಾಂತಿ ಸಾಹಾರ್ದದಿಂದ ಜೀವನ ನಡೆಸಲು ಸಾಧ್ಯವಾಗಿದೆ. ನಮಗಾಗಿ ಹೋರಾಡಿ ಹುತಾತ್ಮರಾದವರನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

1959ರಲ್ಲಿ ಲಡಾಕ್‍ನಲ್ಲಿ ದೇಶದ ಗಡಿಯಲ್ಲಿ ಕರ್ತವ್ಯ ನಿರತರ ಮೇಲೆ ಚೀನಾ ಸೈನಿಕರು ದಾಳಿ ನಡೆಸಿದರು. ದಾಳಿಯಲ್ಲಿ 10 ಮಂದಿ ಮೃತರಾದರು. 7 ಜನ ಗಾಯಗೊಂಡರು. ಅಂದಿನಿಂದ ಅ.21ರಂದು ದೇಶಾದ್ಯಂತ ಪೊಲೀಸ್ ಹುತಾತ್ಮ ದಿನಾಚಣೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಂದು ಪೊಲೀಸರ ಬಳಿ ಹೆಚ್ಚಿನ ಆಯುಧಗಳಿರಲಿಲ್ಲ, ತಮ್ಮಲ್ಲಿ ಇದ್ದ ಆಯುಧಗಳಿಂದಲೇ ಹೋರಾಟ ನಡಸಿದ ದೇಶಕ್ಕಾಗಿ ಹುತಾತ್ಮರಾದ ಸೈನಿಕರ ತ್ಯಾಗ ಬಲಿದಾನಗಳ ಸ್ಮರಣೆ ಅತ್ಯಗತ್ಯ ಎಂದ ಅವರು, ಪ್ರಸ್ತುತ ಪೊಲೀಸ್ ಇಲಾಖೆ ಸಾಕಷ್ಟು ಸುಧಾರಿಸಿದೆ. ನೂತನ ತಂತ್ರಜ್ಞಾನ ಬಳಸಿಕೊಂಡು ಕಠಿಣ ಪ್ರಕರಣಗಳನ್ನು ಭೇದಿಸುವಲ್ಲಿ ಇಲಾಖೆ ಯಶ ಕಾಣುತ್ತಿದೆ. ಎಷ್ಟೇ ಸೌಲಭ್ಯಗಳಿದ್ದರೂ ಸಹ ಪೊಲೀಸರು ಪ್ರತಿನಿತ್ಯ ಒತ್ತಡದಲ್ಲಿಯೇ ಕೆಲಸ ನಿರ್ವಹಿಸಬೇಕಾಗಿರುವುದರಿಂದ ಜನತೆಯ ಸಹಕಾರ ದೊರೆತಲ್ಲಿ ಅವರ ಕೆಲಸವೂ ಸುಲಭವಾಗುತ್ತದೆ ಎಂದರು.

ಈ ವರ್ಷ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರ ಪಟ್ಟಿಯನ್ನು ಓದಿದ ನೂತನ ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ, ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ 414 ಪೊಲೀಸರು ಹುತಾತ್ಮರಾಗಿದ್ದಾರೆ. ಅವರಲ್ಲಿ ರಾಜ್ಯದ 16 ಜನ ಸೇರಿದ್ದಾರೆ. ಇಂತಹ ಹುತಾತ್ಮರ ತ್ಯಾಗದಿಂದಾಗಿ ಉತ್ತಮ ನಾಗರಿಕ ಸಮಾಜ ನಿರ್ಮಾಣವಾಗಿದೆ ಎಂದರು.

ಕಾಯಕ್ರಮದಲ್ಲಿ ಶಾಸಕ ಸಿ.ಟಿ.ರವಿ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಹಾಸನ ಶಾಸಕ ಪ್ರೀತಂ ಗೌಡ, ವಿಧಾನಪರಿಷತ್ ಶಾಸಕ ಎಸ್.ಎಲ್.ಬೋಜೇಗೌಡ, ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಅಣ್ಣಪ್ಪ ನಾಯಕ್, ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಎಐಟಿ ವಿ.ವಿ. ಕುಲಪತಿ ಡಾ.ಸಿ.ಕೆ.ಸುಬ್ರಾಯ, ಬಿ.ಎಚ್.ನರೇಂದ್ರ ಪೈ, ಪುಷ್ಪನಮನ ಸಲ್ಲಿಸಿದರು. ಮೂರು ಬಾರಿ ಕುಶಾಲತೋಪುಗಳನ್ನು ಸಿಡಿಸುವ ಮೂಲಕ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News