ತೋಂಟದಾರ್ಯ ಮಠದ ಉತ್ತರಾಧಿಕಾರಿಯಾಗಿ ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮಿ ನೇಮಕ

Update: 2018-10-21 13:29 GMT

ಬೆಂಗಳೂರು, ಅ. 20: ಗದಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ದರಾಮ ಸ್ವಾಮೀಜಿಯವರನ್ನು ಶ್ರೀಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ರವಿವಾರ ತೋಂಟದಾರ್ಯ ಮಠದ ಉತ್ತರಾಧಿಕಾರಿ ನೇಮಕ ಸಂಬಂಧ ಆನಂದಪುರ ಮಲ್ಲಿಕಾರ್ಜುನ ಸ್ವಾಮಿಜಿ ಅಧಿಕೃತವಾಗಿ ಘೋಷಣೆ ಮಾಡಿದರು. ತೋಂಟದ ಸಿದ್ಧಲಿಂಗ ಸ್ವಾಮಿ ಜೀವಂತ ಇರುವ ವೇಳೆಯೇ ಉತ್ತರಾಧಿಕಾರಿ ಬಗ್ಗೆ ಶ್ರೀಗಳು ಉಯಿಲು ಬರೆದಿದ್ದರು. ಹದಿನೈದು ವರ್ಷಗಳ ಹಿಂದೆ, ತೋಂಟದ ಶ್ರೀಗಳು ತಮ್ಮ 60ನೆ ವಯಸ್ಸಿನಲ್ಲಿ ಉತ್ತರಾಧಿಕಾರಿ ಪತ್ರ ಬರೆದಿಟ್ಟಿದ್ದರು ಎನ್ನಲಾಗಿದೆ. ನಾಗನೂರ ಸಿದ್ದರಾಮ ಸ್ವಾಮಿಜಿ ಪ್ರಸ್ತುತ ರುದ್ರಾಕ್ಷಿ ಮಠದ ಸ್ವಾಮೀಜಿಯಾಗಿದ್ದು, ಇವರು ತೋಂಟದಾರ್ಯ ಮಠದ 20ನೆ ಪೀಠಾಧಿಪತಿಯಾಗಲಿದ್ದಾರೆ ಎಂದು ತಿಳಿಸಲಾಗಿದೆ.

ಶ್ರೀಮಠದ ನೂತನ ಪೀಠಾಧಿಪತಿಯಾದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಸಿದ್ದರಾಮ ಶ್ರೀಗಳು, ಉನ್ನತ ಪರಂಪರೆ ಹೊಂದಿರುವ ಗದಗಿನ ತೋಂಟದಾರ್ಯ ಮಠದ ಸಮಸ್ತ ಸದ್ಭಕ್ತರು ಹಾಗೂ ಲಿಂಗೈಕ್ಯರಾದ ಪೂಜ್ಯ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಆಶಯದಂತೆ ಇವತ್ತು ನನನ್ನು ಶ್ರೀಮಠದ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದಾರೆ.

ಮೊದಲಿನಿಂದಲೂ ನಾನು ಶ್ರೀಗಳ ಆಶ್ರಯದಲ್ಲಿ ಬೆಳೆದು ಬಂದಿರುವಂತವನು. ಶ್ರೀಗಳ ಮಾರ್ಗದರ್ಶನದಲ್ಲಿಯೇ ನಡೆದಂತವನು. 30 ವರ್ಷಗಳ ಹಿಂದೆಯೇ ನನ್ನನ್ನ ತೋಂಟದಾರ್ಯ ಶ್ರೀಗಳೇ ನಾಗನೂರು ಮಠದ ಮಠಾಧಿಪತಿಯನ್ನಾಗಿ ನಿಯೋಜನೆ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನನಗೆ ಮಾರ್ಗದರ್ಶನ ಮಾಡುತ್ತಲೇ ಬಂದಿದ್ದರು. ಅವರ ಪ್ರೀತಿ, ವಿಶ್ವಾಸ, ಅಂತಃಕರಣ ಬಹಳ ದೊಡ್ಡದು ಎಂದು ಸ್ಮರಿಸಿದರು.

ಹತ್ತು ವರ್ಷಗಳ ಹಿಂದೆಯೇ ನನ್ನ ಹೆಸರಿನಲ್ಲಿ ಗದಗಿನ ಮಠದ ಉತ್ತಾರಾಧಿಕಾರಿ ಆಗಬೇಕೆಂದು ತೋಂಟದ ಸಿದ್ಧಲಿಂಗ ಸ್ವಾಮೀಜಿ ಇಚ್ಛಾಪತ್ರವನ್ನ ಬರೆದಿಟ್ಟಿದ್ದರು. ಇಂದು ಈ ಮಠದ ಸೇವೆ ಮಾಡಲು ನನಗೆ ಅವಕಾಶ ಕಲ್ಪಿಸಿದ್ದಾರೆಂದು ತೋಂಟದಾರ್ಯ ಮಠದ ನೂತನ ಪೀಠಾಧಿಪತಿ ಸಿದ್ಧರಾಮ ಶ್ರೀಗಳು ತಿಳಿಸಿದರು.

‘ಕರ್ನಾಟಕದ ಸಮಸ್ತ ಪೂಜ್ಯರ ಆಶೀರ್ವಾದ, ಗದಗಿನ ತೋಂಟದಾರ್ಯ ಮಠದ ಸಮಸ್ತ ಸದ್ಭಕ್ತರ ಸಹಾಯ, ಸಹಕಾರದೊಂದಿಗೆ ಈ ಶ್ರೀಮಠದ ಭವ್ಯ ಪರಂಪರೆಯನ್ನ ನಾನು ಮುಂದುವರೆಸಿಕೊಂಡು ಹೋಗುತ್ತೇನೆ’

-ಸಿದ್ದರಾಮ ಸ್ವಾಮೀಜಿ, ತೋಟದಾರ್ಯ ಮಠದ ನೂತನ ಪೀಠಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News