ಅರ್ಜುನ್ ಸರ್ಜಾ ಕ್ಷಮೆ ಯಾಚಿಸಬೇಕು: ಪ್ರಕಾಶ್ ರೈ

Update: 2018-10-21 14:51 GMT

ಬೆಂಗಳೂರು, ಅ.21: ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್‌ಗೆ ಸಿನಿಮಾ ರಂಗದ ನಟ, ನಟಿಯರು ಹಾಗೂ ನಿರ್ದೇಶಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಫೀಲಂ ಇಂಡಸ್ಟ್ರೀ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ(ಫೈರ್) ಬೆಂಬಲದೊಂದಿಗೆ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್, ರೂಪ ಅಯ್ಯರ್, ನಟ ಚೇತನ್, ಸಾಮಾಜಿಕ ಕಾರ್ಯಕರ್ತ ಅನಿಲ್ ಶೆಟ್ಟಿ, ಗುಬ್ಬಿ ವೀರಣ್ಣ ಮೊಮ್ಮಗಳು ಕಲಾವಿದೆ ಪಂಚಮಿ, ಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಹಲವರು ನಟಿ ಶ್ರುತಿ ಹರಿಹರನ್‌ಗೆ ಬೆಂಬಲ ಸೂಚಿಸಿ ಮಾತನಾಡಿದರು.

ಅದೇ ರೀತಿ, ಬಹುಭಾಷ ನಟ, ಚಿಂತಕ ಪ್ರಕಾಶ್ ರೈ, ತಮ್ಮ ಟ್ವಿಟ್ ಮೂಲಕ ಪ್ರತಿಕ್ರಿಯಿಸಿ, 'ಅರ್ಜುನ್ ಸರ್ಜಾ ಕನ್ನಡ ಹೆಮ್ಮೆ, ಹಿರಿಯ ನಟರು ಎನ್ನುವುದನ್ನು ಮರೆಯಬಾರದು. ಹೆಣ್ಣಿನ ಅಸಹಾಯಕತೆ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಹೆಣ್ಣಿನ ಬೇಕು-ಬೇಡಗಳ ಕುರಿತು ಸೂಕ್ಷ್ಮತೆ ಕಳೆದುಕೊಂಡಿದ್ದು ನಿಜ. ಅರ್ಜುನ್ ಸರ್ಜಾ ಕ್ಷಮೆ ಯಾಚಿಸಲು ಇದು ಸಕಾಲ. ಅಲ್ಲದೆ, ಮೀ ಟೂ ಅಭಿಯಾನದಲ್ಲಾದರೂ ಹೆಣ್ಣಿನ ನೋವು ಕಡಿಮೆಯಾಗಲಿ ಎಂದು ಬಹುಭಾಷಾ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಶ್ರುತಿ ಹರಿಹರನ್‌ಗೆ ಬೆಂಬಲ ಸೂಚಿಸಿದ್ದು, ನಟ ಅರ್ಜುನ್ ಸರ್ಜಾ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಹೇಳಿದ್ದಾರೆ.

ಆರೋಪ ಕುರಿತಂತೆ ಮಾತನಾಡಿದ ಶ್ರುತಿ ಹರಿಹರನ್, ನಾನು ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪಕ್ಕೆ ಬದ್ಧವಾಗಿದ್ದೇನೆ. ಹಿಂದೆ ಘಟನೆ ನಡೆದ ಸಂದರ್ಭದಲ್ಲಿ ನನಗೆ ಹೇಳಿಕೊಳ್ಳುವಷ್ಟು ಧೈರ್ಯ ಇರಲಿಲ್ಲ. ಈಗ ಧೈರ್ಯ ಬಂದಿದೆ. ಹೀಗಾಗಿ, ನಾನು ಮಾಧ್ಯಮದ ಮುಂದೆ ಬಂದಿದ್ದೇನೆ. ಆದರೆ, ನಾನು ಈ ಆರೋಪವನ್ನು ಯಾವುದೇ ಪ್ರಚಾರಕ್ಕಾಗಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನನಗೆ ಹೇಳಲು ಏನು ಇಲ್ಲ. ಈಗಾಗಲೇ ಸಾಕಷ್ಟು ಹೇಳಿದ್ದೀನಿ. ಈ ಘಟನೆ ನಡೆದ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತಿಳಿದಿರಲಿಲ್ಲ. ಹೀಗಾಗಿ, ನೇರವಾಗಿ ನಿರ್ದೇಶಕರ ಬಳಿ ಹೇಳಿ, ರಿಹರ್ಸಲ್‌ಗೆ ಬರಲು ಸಾಧ್ಯವಿಲ್ಲ ಎಂದಿದ್ದೆ. ಅವರು ನನ್ನನ್ನು ಪದೇ ಪದೇ ರಾತ್ರಿ ಊಟಕ್ಕೆ (ಡಿನ್ನರ್) ಆಹ್ವಾನಿಸುತ್ತಿದ್ದರು. ನಾನು ನಿರಾಕರಿಸಿದ್ದೆ. ಆ ಸಮಯದಲ್ಲಿ ‘ಫೈರ್’ ಸ್ಥಾಪನೆಯಾಗಿರಲಿಲ್ಲ. ಈಗ ಅದು ನನ್ನ ಬೆಂಬಲಕ್ಕೆ ನಿಂತಿದೆ. ಅಲ್ಲದೆ, ನಾನು ದರ್ಶನ್, ಸುದೀಪ್‌ರಂತಹ ದೊಡ್ಡ ನಟರ ಜತೆಗೆ ನಟಿಸಿದ್ದೇನೆ. ಅವರು ಎಂದೂ ಈ ರೀತಿ ನಡೆದುಕೊಂಡಿರಲಿಲ್ಲ ಎಂದು ಅವರು ನುಡಿದರು.

ನಾನು ಲೈಂಗಿಕತೆ ಬಗ್ಗೆ ಮಾತನಾಡಿದ್ದು ತಪ್ಪು ಆಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ, ವ್ಯಕ್ತಿ ಹೆಸರು ಬದಲಾಗಿ, ಆ ವ್ಯಕ್ತಿ ಮಾಡಿರುವ ಬಗ್ಗೆ ಮಾತನಾಡಿದ್ದೇನೆ. ಅರ್ಜುನ್ ಸರ್ಜಾ ಅವರ ಬಗ್ಗೆ ನನ್ನನ್ನು ಬಿಟ್ಟು ಇತರೆ ಮಹಿಳೆಯರೂ ಆರೋಪಿಸಿದ್ದಾರೆ. ಅದಕ್ಕಾಗಿ ನಾನು ಇವತ್ತು ಮಾತನಾಡುತ್ತಿದ್ದೇನೆ. ಸದ್ಯ ನಾನು ಕಾನೂನಾತ್ಮಕವಾಗಿ ಹೋಗುತ್ತಿದ್ದೇನೆ. ಈ ಪ್ರಕರಣದ ನಂತರವೂ ನಾನು ಕನ್ನಡ ಚಿತ್ರರಂಗದಲ್ಲಿಯೇ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನಿರ್ದೇಶಕಿ ಹಾಗೂ ಐಸಿಸಿ ಮುಖ್ಯಸ್ಥೆ ಕವಿತಾ ಲಂಕೇಶ್ ಮಾತನಾಡಿ, ಇದುವರೆಗೂ ಹಲವಾರು ಇಂತಹ ಪ್ರಕರಣಗಳು ನಡೆದಿದೆ. ಆದರೆ, ಯಾವುದೂ ಹೊರಗೆ ಬಂದಿಲ್ಲ. ನಮ್ಮ ಚಿತ್ರರಂಗದಲ್ಲಿ ಮಹಿಳೆಯರಿಗೆ ಕಿರುಕುಳ ಆಗಿದೆ. ವಾರದ ಹಿಂದೆ ಶ್ರುತಿ ಹರಿಹರನ್ ಕರೆ ಮಾಡಿ ಈ ವಿಚಾರದ ಬಗ್ಗೆ ಹಂಚಿಕೊಂಡಿದ್ದರು. ಈಗ ಅದನ್ನು ಎಲ್ಲರ ಎದುರಿಗೆ ಹೇಳುತ್ತಿದ್ದಾರೆ. ಘಟನೆ ನಡೆದ ಕೂಡಲೇ ಎಲ್ಲವನ್ನು ಹೇಳಬೇಕು ಎಂದೇನಿಲ್ಲ. ಅವರಿಗೆ ಮಾನಸಿಕ ಹಿಂಸೆಯಾಗಿರುತ್ತೆ. ಅದರಿಂದಾಗಿ ಹೊರ ಬಂದು ಮಾತನಾಡಲು ಸಮಯ ಬೇಕು ಎಂದು ತಿಳಿಸಿದರು.

ನನಗೆ ಅರ್ಜುನ್ ಸರ್ಜಾ ಫ್ಯಾನ್ಸ್ ಕ್ಲಬ್‌ನಿಂದ ಹಲವಾರು ರೀತಿಯ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ಅರ್ಜುನ್ ಅವರ ಕುಟುಂಬದವರಿಂದ ಯಾವುದೇ ಕರೆಗಳು ಬಂದಿಲ್ಲ.

-ಶ್ರುತಿ ಹರಿಹರನ್, ನಟಿ

ಲೈಂಗಿಕ ಕಿರುಕುಳ ಎನ್ನುವುದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇಡೀ ಚಿತ್ರರಂಗಕ್ಕೆ ಇದೊಂದು ಖಾಯಿಲೆ. ಈ ಖಾಯಿಲೆಯನ್ನು ನಿರ್ಮೂಲನೆ ಮಾಡುವ ಅವಶ್ಯಕತೆ ಇದೆ. ನಾಲ್ಕು ವರ್ಷಗಳ ಹಿಂದೆಯೇ ನಿರ್ದೇಶಕರು ಮತ್ತು ಮಹಿಳೆಯರ ನಡುವೆ ನಡೆದ ಲೈಂಗಿಕ ಕಿರುಕಳ ಪ್ರಕರಣವನ್ನು ಮಾಧ್ಯಮ ಬಯಲಿಗೆಳೆದಿತ್ತು. ಆಗಲೇ ಅದಕ್ಕೊಂದು ರಚನಾತ್ಮಕ ಪರಿಹಾರ ಬೇಕೆಂದು ನಾನು ಲೇಖನ ಬರೆದು ಪ್ರಯತ್ನಿಸಿದ್ದೆ. ಆದರೆ ಯಾರೂ ನನಗೆ ಬೆಂಬಲ ಕೊಟ್ಟಿರಲಿಲ್ಲ. ಇದಕ್ಕಾಗಿ ಸಂಘಟನೆಯ ಅವಶ್ಯಕತೆ ಬಹಳ ಇದೆ.

-ಚೇತನ್, ಚಲನಚಿತ್ರ ನಟ

ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿದ್ದ ಮೀಟೂ ಆರೋಪವನ್ನು ಒಪ್ಪಲು ಹಿರಿಯ ನಟಿ ತಾರಾ ನಿರಾಕರಿಸಿದ್ದು, ಸರ್ಜಾ ಏನು ಎನ್ನುವುದು ನನಗೆ ಗೊತ್ತು. ಅವರ ಜತೆ ಪ್ರೇಮಾಗ್ನಿ ಸಿನಿಮಾದಲ್ಲಿ ನಟಿಸಿದ್ದೇನೆ. ಅವರು ತುಂಬ ಒಳ್ಳೆಯ, ಸಭ್ಯ ಮನುಷ್ಯ. ಮೊದಲು ಹೀಗೆಲ್ಲ ಇರಲಿಲ್ಲ. ನಾವು ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದೆವು. ನಾನಂತೂ ಹಲವು ಅತ್ಯಾಚಾರದ ದೃಶ್ಯಗಳಲ್ಲಿ ನಟಿಸಿದ್ದೇನೆ. ಒಂದು ದಿನವೂ ಕೆಟ್ಟ ಅನುಭವ ಆಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News