ನನ್ನ ಬಗ್ಗೆ ಮಾತನಾಡಲು ಶೋಭಾ ಕರಂದ್ಲಾಜೆಗೆ ನೈತಿಕತೆ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-10-21 14:51 GMT

ಮೈಸೂರು.ಅ.21: ನನ್ನ ಬಗ್ಗೆ ಮಾತನಾಡಲು ಶೋಭಾ ಕರಂದ್ಲಾಜೆಗೆ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದ ತಮ್ಮ ನಿವಾಸದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಹಲ್ಲಿಲ್ಲದ ಹಾವಿನಂತೆ ಇದ್ದಾರೆ ಎಂದು ಟೀಕಿಸಿದ್ದರು. ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಚುನಾವಣೆಗೆ ನಿಂತು ಒಮ್ಮೆ ಸೋತಿಲ್ಲವೇ, ಅವಳ ಹಲ್ಲುಗಳೇನು ಗಟ್ಟಿಯಾಗಿದಿಯೇ ಎಂದು ಪ್ರಶ್ನಿಸಿದರು.

ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವಳಿಗಿಲ್ಲ ಎಂದು ಏಕವಚನದಲ್ಲೇ ವಾಕ್‍ಪ್ರಹಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿಯವರು ಒಣಜಂಭ ಬಿಡಬೇಕು, ಓಟುಗಳೇನು ಯಡಿಯೂರಪ್ಪನ ಜೇಬಿನಲ್ಲಿ ಇಲ್ಲ. ಚುನಾವಣೆ ಎಂದ ಮೇಲೆ ಸೋಲು ಗೆಲುವುಗಳಿರುತ್ತವೆ. ಮತದಾರರ ತೀರ್ಮಾನಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಹೇಳಿದರು.

ಸರ್ಕಾರ ಸುಭದ್ರ: ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.

ಸಮ್ಮಿಶ್ರ ಸರ್ಕಾರವನ್ನು ಯಾರಿಗೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಈಗಾಗಲೇ ಬಿಜೆಪಿಯವರು ಹಲವಾರು ಬಾರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರು ಹೇಳಿದಾಕ್ಷಣ ಸರ್ಕಾರವೇನು ಬಿದ್ದುಹೋಗುವುದಿಲ್ಲ. ಐದು ವರ್ಷ ಪೂರೈಸಿ ಉತ್ತಮ ಆಡಳಿತ ನೀಡಲಿದೆ. ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

ಜಮಖಂಡಿ, ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, ರಾಮನಗರ, ಮಂಡ್ಯ ಮತ್ತು ಶಿವಮೊಗ್ಗದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ. ನಾನು ಐದು ಕ್ಷೇತ್ರಗಳಲ್ಲಿಯೂ ಚುನಾವಣಾ ಪ್ರಚಾರ ಮಾಡುತ್ತೇನೆ ಎಂದು ತಿಳಸಿದರು.

ಅ.22ಕ್ಕೆ ಬಳ್ಳಾರಿಯಿಂದ ಚುನಾವಣಾ ಪ್ರಚಾರ ಆರಂಭಿಸುತ್ತೇನೆ. ಅ.25 ಕ್ಕೆ ಶಿವಮೊಗ್ಗ, ಅ.26,27 ಜಮಖಂಡಿ, ಅ.28, 29 ಬಳ್ಳಾರಿ, ಅ.30 ಶಿವಮೊಗ್ಗ, ಅ.31 ನ.1 ಜಮಖಂಡಿಯಲ್ಲಿ ಪ್ರಚಾರ ಮಾಡುತ್ತೇನೆ. ಹಾಗೆಯೇ, ಸಮಯಾವಕಾಶ ನೋಡಿಕೊಂಡು ರಾಮನಗರ ಮತ್ತು ಮಂಡ್ಯಕ್ಕೂ ಪ್ರಚಾರಕ್ಕೆ ಹೋಗುವುದಾಗಿ ತಿಳಿಸಿದರು.

ಕೋಮುವಾದಿ ಪಕ್ಷಗಳನ್ನು ಬಗ್ಗು ಬಡಿಯುವ ಸಲುವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮುಂದಿನ ಲೋಕಸಭಾ ಚುನಾವಣೆಗೂ ಮುಂದುವರಿಯಲಿದೆ.

- ಸಿದ್ದರಾಮಯ್ಯ, ಮಾಜಿ ಸಿಎಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News