ರೈಲ್ವೆ ಇಲಾಖೆಯಿಂದ ಅನ್ಯಾಯ ಆರೋಪ: ವಿಕಲಾಂಗನಿಂದ ನಡುಬೀದಿಯಲ್ಲಿ ಪ್ರತಿಭಟನೆ

Update: 2018-10-21 17:54 GMT

ದಾವಣಗೆರೆ,ಅ.21: ರೈಲು ಅಪಘಾತದಲ್ಲಿ ತನ್ನ ಕೈ ಹಾಗೂ ಪತ್ನಿಯನ್ನು ಕಳೆದು ಕೊಂಡಿದ್ದು, ಪರಿಹಾರ ನೀಡಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನಡು ಬೀದಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಗರದ ಗಾಂಧಿ ವೃತ್ತದ ಬಳಿ ರವಿವಾರ ನಡೆದಿದೆ.

ತಾಲೂಕಿನ ಈಚಘಟ್ಟ ಗ್ರಾಮದ ನಿವಾಸಿ ತಿಮ್ಮೇಶ್ ತನ್ನ ಮಕ್ಕಳಾದ ದಿನೇಶ್ ಹಾಗೂ ದಿವ್ಯಾ ಅವರೊಂದಿಗೆ ಪ್ರತಿಭಟನೆ ನಡೆಸಿದರು. 2013ರಲ್ಲಿ ತನ್ನ ಪತ್ನಿ ತಿಮ್ಮಕ್ಕ ರೈಲು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಅಲ್ಲದೆ, ತಾನು 2016ರ ನವೆಂಬರ್ 30ರಂದು ಉಡುಪಿಯಿಂದ ಕೆಲಸ ಮುಗಿಸಿಕೊಂಡು ಪ್ಯಾಸೆಂಜರ್ ರೈಲಿನಲ್ಲಿ ಬಂದು ಕೊಡಗನೂರು ರೈಲು ನಿಲ್ದಾಣದ ಎರಡನೇ ಪ್ಲಾಟ್ ಫಾರಂನಲ್ಲಿ ಇಳಿಯುವಾಗ ನೂಕಾಟ ನಡೆದು ರೈಲಿನಿಂದ ಕೆಳಗೆ ಬಿದ್ದು ಕೈ ಕಳೆದುಕೊಂಡಿದ್ದೇನೆ. ನನ್ನ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಆಗಿರುವ ಅನ್ಯಾಯಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಕೇಂದ್ರ ರೈಲ್ವೆ ಮಂತ್ರಿಗೆ, ರಾಜ್ಯದ ಮುಖ್ಯಮಂತ್ರಿಗೆ, ರಾಜ್ಯಪಾಲರಿಗೆ ಹಲವು ಬಾರಿ ಪತ್ರ ಬರೆದು, ಏಕಾಂಗಿ ಹೋರಾಟ ನಡೆಸಿ ಮನವಿ ಸಲ್ಲಿಸಿದ್ದೇನೆ. ಆದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಆಶ್ರಯ ಯೋಜನೆಯಡಿಯಲ್ಲಿ ನನಗೊಂದು ಮನೆ ಮಂಜೂರು ಮಾಡಲಾಗಿತ್ತು. ಆರಂಭದಲ್ಲಿ ಸಾಲ ಮಾಡಿ ಮನೆಗೆ ಪಂಚಾಂಗ ಹಾಕಿದ್ದೆ. ಬಳಿಕ ಸರಕಾರ ನೀಡಿದ ಸಹಾಯಧನವನ್ನು ದುಡ್ಡು ಕೊಟ್ಟವರು ಸಾಲ ವಾಪಾಸ್ ಪಡೆದರು. ಆದ್ದರಿಂದ ಮತ್ತೆ ಬರಿಗೈ ಆಯಿತು. ಮುಂದೆ ಮನೆ ಕಟ್ಟಿಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ ಎಂದರು.

ಕೈ ಚೆನ್ನಾಗಿ ಇದ್ದಾಗ ಕೂಲಿ-ನಾಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದೆ. ಆದರೆ, ಅಪಘಾತದಲ್ಲಿ ಕೈ ಕಳೆದುಕೊಂಡಿರುವುದರಿಂದ ಯಾರೂ ಕೆಲಸ ನೀಡುತ್ತಿಲ್ಲ. ಹೀಗಾಗಿ ಮಕ್ಕಳು ಪ್ರತೀ ದಿನ ಅರೆ ಹೊಟ್ಟೆಯಲ್ಲೇ ಮಲಗುತ್ತಿದ್ದಾರೆ. ಒಂದು ಹೊತ್ತಿನ ತುತ್ತಿಗೂ ಕಷ್ಟ ಪಡುತ್ತಿರುವ ನಾನು ಮನೆ ಕಟ್ಟುವುದು ಅಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸರಕಾರವೇ ತನಗೆ ಮನೆ ಕಟ್ಟಿಸಿಕೊಡಬೇಕು. ತನ್ನ ಪತ್ನಿಯ ಸಾವಿಗೆ ಹಾಗೂ ನನ್ನ ಕೈ ಊನ ಆಗಲು ರೈಲ್ವೆ ಇಲಾಖೆ ಮುಖ್ಯ ಕಾರಣ. ಹೀಗಾಗಿ ಜೀವನ ಸಾಗಿಸಲು ಹೈನುಗಾರಿಕೆ ನಡೆಸಲು ಯಾವುದಾದರೂ ಯೋಜನೆಯಡಿಯಲ್ಲಿ ಹಸು ಇಲ್ಲವೇ ಕುರಿ ಕೊಡಿಸಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News