ಪ್ರವಾಸಿಗರ ಸ್ವರ್ಗ ಕಾಫಿನಾಡಿನಲ್ಲಿ ಜನಜಂಗುಳಿ: ಹೋಂ ಸ್ಟೇ, ರೆಸಾರ್ಟ್‌ಗಳು ಭರ್ತಿ

Update: 2018-10-21 18:11 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಅ.21: ಕಾಫಿನಾಡು ಪ್ರವಾಸಿಗರ ಪಾಲಿನ ಸ್ವರ್ಗ ಎಂದರೆ ತಪ್ಪಾಗಲಾರದು. ಹಸಿರು ಹೊದ್ದು ಮಲಗಿರುವ ಹಚ್ಚ ಹಸಿರಿನ ಗಿರಿಶ್ರೇಣಿಗಳು, ರಸ್ತೆಗಳ ಇಕ್ಕೆಲಗಳಲ್ಲಿರುವ ಕಾಫಿ, ಟೀ, ಅಡಿಕೆ ತೋಟಗಳು, ತುಂಬಿ ಹರಿಯುತ್ತಿರುವ ನದಿ, ತೊರೆ, ಜಲಪಾತಗಳು ಪ್ರಸಕ್ತ ಜೀವಕಳೆಯಿಂದ ಕಣ್ಮನಸೆಳೆಯುತ್ತಿದ್ದು, ದೂರದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹಬ್ಬಗಳ ನೆಪದಲ್ಲಿ ಸಿಕ್ಕ ಸಾಲು ಸಾಲು ರಜೆಗಳ ಮಜಾ ಸವಿಯಲು ದೂರದ ಪ್ರವಾಸಿಗರು, ಯಾತ್ರಾರ್ಥಿಗಳು ಕಾಫಿನಾಡಿನ ಎಲ್ಲೆಡೆ ಕಂಡು ಬರುತ್ತಿದ್ದು, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೀಗ ಎತ್ತ ನೋಡಿದರತ್ತ ಪ್ರವಾಸಿಗರೇ ತುಂಬಿ ತುಳುಕುತ್ತಿದ್ದಾರೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸ್ವಚ್ಛಂದದ, ರುದ್ರ ರಮಣೀಯ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದೆ. ನಾಡಿನ ಹೆಸರಾಂತ ಯಾತ್ರಾಸ್ಥಳಗಾದ ಶೃಂಗೇರಿ, ಹೊರನಾಡು, ಬಾಬಾಬುಡನ್‌ಗಿರಿಯಂತಹ ಯಾತ್ರಾ ತಾಣಗಳು ಜಿಲ್ಲೆಯ ಪ್ರವಾಸೋದ್ಯಮಕ್ಕೆ ನೀಡಿರುವ ಕೊಡುಗೆ ಅಪಾರ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಪ್ರವಾಸಿಗರ ಕಲರವ ಸಾಮಾನ್ಯ. ಮಳೆಗಾಲವಾದರೂ ಇಲ್ಲಿನ ಪ್ರಾಕೃತಿಕ ಸೌಂದರ್ಯ ಸವಿಯಲು ದೂರದ ಪ್ರವಾಸಿಗರು ದಿಂಡಿಯಾಗಿ ಆಗಮಿಸುತ್ತಿದ್ದುದು ವಾಡಿಕೆಯಾಗಿತ್ತು. ಆದರೆ, ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳ ಹಿಂದೆ ಭಾರೀ ಮಳೆ ಸುರಿದು ಉಂಟಾದ ಅತೀವೃಷ್ಟಿಯಿಂದಾಗಿ ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸಾಕಷ್ಟು ಜೀವಹಾನಿ ಸೇರಿದಂತೆ ಅಪಾರ ಆಸ್ತಿಪಾಸ್ತಿ ಹಾನಿಗೀಡಾಗಿ ನದಿಗಳು ತುಂಬಿ ಹರಿದು ರಸ್ತೆ, ಸೇತುವೆಗಳೂ ಕೊಚ್ಚಿ ಹೋಗಿದ್ದವು. ಇದರ ಪರಿಣಾಮ ಜಿಲ್ಲೆಯ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಿತ್ತು. ಈ ಅವಧಿಯಲ್ಲಿ ಪ್ರವಾಸಿ ಕೇಂದ್ರಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದ್ದವು. ಶೃಂಗೇರಿ, ಹೊರನಾಡುಗಳಲ್ಲಿ ಪ್ರವಾಸಿಗರೂ ನಾಪತ್ತೆಯಾಗಿದ್ದರು. ಈ ಸ್ಥಳಗಳಲ್ಲಿ ಪ್ರವಾಸಿಗರನ್ನೇ ನಂಬಿಕೊಂಡಿದ್ದ ಬಾಡಿಗೆ ವಾಹನಗಳ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಹೋಂಸ್ಟೇ, ರೆಸಾರ್ಟ್‌ಗಳು ವ್ಯಾಪಾರವಿಲ್ಲದೇ ಭಣಗುಡುತ್ತಿದ್ದವು. ಪರಿಣಾಮ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮಂಕು ಕವಿದಂತಾಗಿತ್ತು.

ಜಿಲ್ಲೆಯ ಯಾತ್ರಾ ಸ್ಥಳಗಳೂ ಸೇರಿದಂತೆ ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿಯಂತಹ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಏರ್ಪಟ್ಟಿದೆ. ಇನ್ನು ಕುದುರೆಮುಖ, ಕಳಸ, ಚಾರ್ಮಾಡಿಘಾಟ್ ಭಾಗದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು, ಇಲ್ಲಿನ ಹೆದ್ದಾರಿಗಳಲ್ಲಿ ಪ್ರವಾಸಿಗರ ವಾಹಗಳ ಧಟ್ಟಣೆಯೂ ದ್ವಿಗುಣಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗದ ಜಯಪುರ, ಕೆಳಗೂರು, ಸಂಸೆ ಭಾಗಗಳಲಿರುವ ಟೀ ಎಸ್ಟೇಟ್‌ಗಳ ಮಧ್ಯೆ ಹಾದು ಹೋಗಿರುವ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸುವ ಪ್ರವಾಸಿಗರು ಟೀ ತೋಟಗಳ ಮಧ್ಯೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಪ್ರವಾಸಿಗರು ಮಲೆನಾಡಿನ ಜನಜೀವನ, ವಿಶಿಷ್ಟ ಆಹಾರ ಸೇರಿದಂತೆ ಅಪರೂಪದ ಪ್ರಾಕೃತಿಕ ಸೌಂದರ್ಯ ಕಂಡು ಬೆರಗಾಗುತ್ತಿದ್ದಾರೆ. ಕಳೆದ ಗುರುವಾರದಿಂದ ಚಿಕ್ಕಮಗಳೂರು ನಗರದ ಬಹುತೇಕ ಲಾಡ್ಜ್‌ಗಳ ಭರ್ತಿಯಾಗಿದ್ದು, ಐಜಿ ರಸ್ತೆಯಂತೂ ಪ್ರವಾಸಿಗರ ವಾಹನಗಳಿಂದಲೇ ಕಿಕ್ಕಿರಿದು ತುಂಬಿತ್ತು.

ಸಂಬಾರ ಪದಾರ್ಥಗಳ ಖರೀದಿ ಜೋರು
ರಸ್ತೆ ಬದಿಗಳಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಭರ್ಜರಿ ವ್ಯಾಪಾರ ಕುದುರುತ್ತಿದೆ. ಮಲೆನಾಡು ಭಾಗದಲ್ಲಿ ಹೆದ್ದಾರಿಗಳ ಬದಿಯಲ್ಲೇ ಇರುವ ಕಾಫಿ, ಟೀ ಪುಡಿ ಮಾರಾಟದ ಅಂಗಡಿಗಳ ಮುಂದೆಯಂತೂ ಜನಜಾತ್ರೆ ನೆರೆಯುತ್ತಿದ್ದು, ಸ್ಥಳೀಯವಾಗಿ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಕಾಫಿ, ಟೀ ಪುಡಿ ಸೇರಿದಂತೆ ಮಲೆನಾಡಿನ ಸಂಬಾರ ಪದಾರ್ಥಗಳ ಖರೀದಿ ಜೋರಾಗಿದೆ.

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News