ಮಂಡ್ಯ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Update: 2018-10-21 18:17 GMT

ಮಂಡ್ಯ, ಅ.21: ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ನೇಣುಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಗ್ರಾಮದ ಕುಳ್ಳೇಗೌಡ ಮಗ ಚಂದ್ರಶೇಖರ್(33) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಕೃಷಿ ಚಟುವಟಿಕೆ ಜತೆಗೆ ಆಟೋ ರಿಕ್ಷಾ ಚಾಲಕರೂ ಆಗಿದ್ದರು ಎನ್ನಲಾಗಿದೆ. ಬೇರೆಯವರ ಜಮೀನಿನನ್ನು ಭೋಗ್ಯ ಮಾಡಿಕೊಂಡು ಕೃಷಿ ನಡೆಸುತ್ತಿದ್ದ ಚಂದ್ರಶೇಖರ್, ಖಾಸಗಿ ವ್ಯಕ್ತಿಗಳಿಂದ ಸುಮಾರು 6 ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ರವಿವಾರ ಮುಂಜಾನೆ ತನ್ನ ಮನೆ ಮುಂದೆ ನಿಲ್ಲಿಸಿದ್ದ ಆಟೋದ ಕಬ್ಬಿಣದ ಸರಳಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಹಾಗೂ ಮೇಲುಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ಚಂದ್ರಶೇಖರ್ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. 

ಆಸ್ಪತ್ರೆಗೆ ಭೇಟಿ ಮೃತ ರೈತ ಕುಟುಂಬದವರಿಗೆ ಸಾಂತ್ವನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸರಕಾರದಿಂದ ದೊರೆಯುವ ಸೌಲಭ್ಯ ದೊರಕಿಸಿಕೊಡುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು. ಮಾಜಿ ಶಾಶಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯನವರ ಪತ್ನಿ ಸುನೀತ ಪುಟ್ಟಣ್ಣಯ್ಯ ಸೇರಿದಂತೆ ಅನೇಕ ಗಣ್ಯರು ಸ್ಥಳಕ್ಕೆ ಭೇಟಿ ಮೃತ ರೈತನ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಮೃತ ಚಂದ್ರಶೇಖರ್ ಪತ್ನಿ ನೀಡಿದ ದೂರಿನ ಮೇರೆಗೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News