ಬಿಜೆಪಿ ವಿರುದ್ಧ ಶಾಸಕ ಸುರೇಶ್‍ ಗೌಡ ವಾಗ್ದಾಳಿ: ಶಿವರಾಮೇಗೌಡ ಗೆಲುವಿಗೆ ಕರೆ

Update: 2018-10-21 18:23 GMT

ಮಂಡ್ಯ, ಅ.21: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ಎಲ್ಲಾ ಕ್ಷೇತ್ರಗಳಲ್ಲಿಯೂ ವೈಫಲ್ಯದ ಹಾದಿ ಹಿಡಿದಿದ್ದು, ದೇಶದ ಆರ್ಥಿಕ ವ್ಯವಸ್ಥೆ ಇಳಿಮುಖವಾಗಿ ಜನಜೀವನ ದುಸ್ತರವಾಗಿದೆ ಎಂದು ಶಾಸಕ ಕೆ.ಸುರೇಶ್‍ಗೌಡ ಟೀಕಿಸಿದ್ದಾರೆ.

ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಖಾಸಗಿ ಸಮುದಾಯ ಭವನದಲ್ಲಿ ಮಂಡ್ಯಲೋಕಸಭಾ ಉಪಚುನಾವಣೆ ಸಂಬಂಧ ರವಿವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡಿಸೇಲ್, ಪೆಟ್ರೋಲ್ ಬೆಲೆ ಸೇರಿದಂತೆ ಅಗತ್ಯವಸ್ತುಗಳ ಬೆಲೆಗಳ ಮೇಲಿನ ನಿಯಂತ್ರಣ ತಪ್ಪಿ ಮಧ್ಯಮ ವರ್ಗದವರೂ ಸೇರಿದಂತೆ ದೇಶದ ನಾಗರಿಕರು ಪರಿತಪಿಸುತ್ತಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ದೇಶದೆಲ್ಲೆಡೆ ಆತಂಕ ಮನೆ ಮಾಡಿದೆ ಎಂದು ಅವರು ಹೇಳಿದರು.

ಬಿಜೆಪಿ ನಾಯಕರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಕಾಲಹರಣ ಮಾಡುತ್ತಿದ್ದು, ಕೇಂದ್ರ ಸರಕಾರದ ತನ್ನದೇ ಪಕ್ಷದ ಪ್ರಧಾನಿ ವಿರುದ್ಧ ಈವರೆಗೂ ಚಕಾರವೆತ್ತುತ್ತಿಲ್ಲ ಎಂದು ಅವರು ಖಂಡಿಸಿದರು.

ಪಕ್ಷದ ಕಾರ್ಯಕರ್ತರು ಅನಿರೀಕ್ಷಿತವಾಗಿ ಎದುರಾಗಿರುವ ಮಂಡ್ಯ ಲೋಕಸಭಾ ಉಪಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷದ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡರ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಪ್ರಸಕ್ತ ನಡೆಯುತ್ತಿರುವ ಚುನಾವಣೆಯು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಎರಡೂ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವಂತೆ ಮನವಿ ಮಾಡಿದರು.
ತಾಪಂ ಮಾಜಿ ಉಪಾಧ್ಯಕ್ಷ ರಾಮಚಂದ್ರು, ಸದಸ್ಯ ಮನೋಹರ್ ಮುಖಂಡರಾದ ಚಿಕ್ಕೋನಹಳ್ಳಿ ತಮ್ಮಯ್ಯ, ಮೂಡ್ಯಚಂದ್ರು, ವೆಂಕಟೇಶ್, ಪುಟ್ಟಸ್ವಾಮಿ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News