ಅಮೃತಸರ ಮಾರಣಹೋಮ ಎಂಬ ಸ್ವಯಂಕೃತಾಪರಾಧ

Update: 2018-10-21 18:40 GMT

ರಾಮಲೀಲಾ ವೀಕ್ಷಣೆಯ ಹೆಸರಿನಲ್ಲಿ ಅಮೃತಸರ ಮೃತ ಸರಮಾಲೆಗಳಿಗೆ ಸಾಕ್ಷಿಯಾಯಿತು. ರಾವಣನನ್ನು ಸುಡಲು ಹೊರಟವರು ತಮ್ಮನ್ನು ತಾವೇ ಸುಟ್ಟುಕೊಂಡರು. ದಸರಾ ಸಂದರ್ಭದಲ್ಲಿ ರಾವಣನನ್ನು ಸುಡುವ ಸಂಪ್ರದಾಯ ಉತ್ತರಭಾರತದಲ್ಲಿದೆ. ರಾವಣನನ್ನು ದುಷ್ಟತನದ ಸಂಕೇತವಾಗಿ ಬಿಂಬಿಸಲಾಗುತ್ತದೆ. ರಾಮ ರಾವಣನನ್ನು ಯುದ್ಧದಲ್ಲಿ ಸೋಲಿಸುವ ಮೂಲಕ ಕೆಡುಕನ್ನು ನಾಶ ಮಾಡಿ, ಒಳಿತನ್ನು ಗೆಲ್ಲಿಸಿದ ಎಂಬ ಹಿನ್ನೆಲೆಯನ್ನಿಟ್ಟುಕೊಂಡು ಉತ್ತರ ಭಾರತದ ಜನರು ರಾಮಲೀಲಾ ಕಾರ್ಯಕ್ರಮ ಏರ್ಪಡಿಸಿ ರಾವಣನನ್ನು ಸುಡುತ್ತಾರೆ. ಇದು ಭಾರೀ ವಿಜೃಂಭಣೆಯಲ್ಲಿ ನಡೆಯುತ್ತದೆ. ಉತ್ತರ ಭಾರತದಲ್ಲಿ ಇದಕ್ಕೆ ರಾಜಕೀಯ ಆಯಾಮಗಳಿವೆ. ರಾಜಕಾರಣಿಗಳು, ಧಾರ್ಮಿಕ ಮುಖಂಡರೂ ಇದರಲ್ಲಿ ಭಾಗವಹಿಸುತ್ತಾರೆ. ರಾವಣನ ಪ್ರತಿಮೆ ಒಂದು ಸಂಕೇತವಷ್ಟೇ. ಕೆಡುಕು ನಮ್ಮ ಒಳಗಿದೆ. ನಮ್ಮೊಳಗಿನ ಕೆಡುಕು, ಬೇಜವಾಬ್ದಾರಿಗಳನ್ನು ಒಳಗಿಟ್ಟುಕೊಂಡು ರಾವಣನ ಪ್ರತಿಕೃತಿಯನ್ನು ಸುಟ್ಟರೆ ಯಾವ ಫಲವೂ ಇಲ್ಲ ಎನ್ನುವ ಸಂದೇಶವನ್ನು ಜನರಿಗೆ ತಲುಪಿಸುವಂತಿದೆ ಅಮೃತಸರ ದುರಂತ.

ಕೆಡುಕು ನಮ್ಮಾಳಗೇ ಇದ್ದರೆ, ಕೆಡುಕೆಗೆಂದು ಬಿಟ್ಟ ಬಾಣ, ನಮ್ಮನ್ನೇ ಹಿಂಬಾಲಿಸುತ್ತದೆ ಎಂಬ ನೀತಿಯನ್ನು ದೇಶಕ್ಕೆ ಸಾರಿ ಸಾರಿ ಹೇಳುವಂತಿದೆ ಅಮೃತ ಸರ ದುರಂತ. ರಾಮಲೀಲಾ ವೀಕ್ಷಣೆಯ ಸಂದರ್ಭದಲ್ಲಿ ರೈಲು ಹಳಿಯ ಮೇಲೆ ನೆರೆದಿದ್ದ ನೂರಾರು ಜನರ ಮೇಲೆಯೇ ರೈಲೊಂದು ಹರಿದು ಹೋಯಿತು. 60ಕ್ಕೂ ಅಧಿಕ ಮಂದಿ ಮೃತಪಟ್ಟರು. ತಮ್ಮ ಮೂರ್ಖತನ, ಬೇಜವಾಬ್ದಾರಿಗೆ ಜನರು ತೆತ್ತ ಬೆಲೆಯನ್ನು ಕಂಡು ರಾವಣನ ಪ್ರತಿಕೃತಿಯೂ ಕಣ್ಣೀರು ಹಾಕಿರಬೇಕು. ಈ ಸಾವುನೋವುಗಳ ಬಳಿಕ, ದುರಂತಕ್ಕೆ ಕಾರಣರು ಯಾರು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ರಾಜಕಾರಣಿಗಳನ್ನು ಹೊಣೆ ಮಾಡುತ್ತಿದ್ದಾರೆ. ಹಲವರು ರೈಲ್ವೆ ಇಲಾಖೆಯ ತಪ್ಪನ್ನು ಎತ್ತಿ ಹಿಡಿಯುತ್ತಿದ್ದಾರೆ. ಮತ್ತೆ ಹಲವರು ರೈಲಿನ ಚಾಲಕನ ಮೇಲೆ ಗೂಬೆಕೂರಿಸುತ್ತಿದ್ದಾರೆ. ಭಾರತ ಅತಿ ದೊಡ್ಡ ರೈಲ್ವೆ ಜಾಲವನ್ನು ಹೊಂದಿದ ವಿಶ್ವದ ನಾಲ್ಕನೇ ದೇಶವಾಗಿದೆ. ಇದೇ ಸಂದರ್ಭದಲ್ಲಿ ರೈಲು ದುರಂತಗಳಿಗೂ ಭಾರತ ಜಗತ್ತಿನಲ್ಲೇ ಕುಖ್ಯಾತವಾಗಿದೆ. ಕಳೆದ ಆರು ವರ್ಷಗಳಲ್ಲಿ 600ಕ್ಕೂ ಅಧಿಕ ರೈಲು ದುರಂತಗಳು ಸಂಭವಿಸಿವೆ. ಅವುಗಳಲ್ಲಿ ಶೇ. 60ಕ್ಕೂ ಅಧಿಕ ಅಪಘಾತಗಳು ಸಂಭವಿಸಿರುವುದು ದುರ್ಬಲ ರೈಲು ಹಳಿಗಳಿಂದಾಗಿ.

ಮೂಲಭೂತ ಸೌಕರ್ಯಗಳ ಕೊರಕೆ ಭಾರತದಲ್ಲಿ ರೈಲು ದುರಂತಗಳಿಗೆ ಪ್ರಮುಖ ಕಾರಣವಾಗಿದೆೆ. ಇಂದು ಸರಕಾರ ‘ಬುಲೆಟ್ ಟ್ರೈನ್’ ಕುರಿತಂತೆ ಮಾತನಾಡುತ್ತಿದೆ. ಆದರೆ, ಜನಸಾಮಾನ್ಯರ ದೈನಂದಿನ ಬಳಕೆಯ ರೈಲುಗಳು ಎಷ್ಟು ಸುರಕ್ಷಿತವಾಗಿವೆ? ಅವುಗಳ ಆಧುನೀಕರಣಕ್ಕೆ ಸರಕಾರದ ಹೊಣೆಗಾರಿಕೆಗಳೇನು ಎನ್ನುವ ಪ್ರಶ್ನೆಗಳು ಉತ್ತರವಿಲ್ಲದೆ ಬಿದ್ದುಕೊಂಡಿವೆ. ಪ್ರತಿಷ್ಠೆಗಾಗಿ ಬುಲೆಟ್ ಟ್ರೈನ್ ಹೊರಡಿಸುವ ಸರಕಾರ, ಜನಸಾಮಾನ್ಯರ ಮೂಲಭೂತ ಅವಶ್ಯವಾಗಿರುವ ರೈಲುಗಾಡಿಗಳ ಕುರಿತಂತೆ ತುಟಿ ಬಿಚ್ಚುತ್ತಿಲ್ಲ. ದೇಶದ ಭಾಗಶಃ ರೈಲು ಹಳಿಗಳು ಬ್ರಿಟಿಷರ ಕಾಲದವುಗಳು. ಅವುಗಳ ನವೀಕರಣಕ್ಕೆ ರೈಲ್ವೆ ಇಲಾಖೆ ಉತ್ಸಾಹ ತೋರಿಸುತ್ತಿಲ್ಲ. ರೈಲು ಹಳಿ ತಪ್ಪುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ರೈಲು ಚಾಲಕರು ನಿರ್ಣಾಯಕ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಫಲರಾಗುವುದು ಕೂಡ ದುರಂತಗಳಿಗೆ ಮುಖ್ಯ ಕಾರಣವಾಗಿದೆ.

ಇದಕ್ಕೆ ಉತ್ತಮ ಉದಾಹರಣೆ 1981ರಲ್ಲಿ ನಡೆದ ಭಾಗಮತಿ ನದಿ ಸೇತುವೆಯ ಮೇಲೆ ನಡೆದ ರೈಲು ದುರಂತ. ಇದು ಭಾರತೀಯ ರೈಲು ದುರಂತದ ಇತಿಹಾಸದಲ್ಲೇ ಮರೆಯಲಾಗದ ದುರಂತವೂ ಹೌದು. ಈ ಅಪಘಾತದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟರು. ರೈಲು ಚಾಲಕನ ಬೇಜವಾಬ್ದಾರಿಯೇ ಈ ದುರಂತಕ್ಕೆ ಕಾರಣವೆನ್ನಲಾಗಿದೆ. ರೈಲು ಗಾಡಿಗೆ ಒಂದು ಗೋವು ಅಡ್ಡ ಬಂದಿತ್ತು. ಗೋಮಾತೆಯ ಕುರಿತಂತೆ ಅಗಾಧ ಭಕ್ತಿಯಿದ್ದ ಚಾಲಕ, ವೇಗವಾಗಿ ಹೋಗುತ್ತಿದ್ದ ರೈಲನ್ನು ನಿಲ್ಲಿಸಲು ಯತ್ನಿಸಿದ್ದೇ ದುರಂತಕ್ಕೆ ಕಾರಣವಾಯಿತು. ರೈಲು ನದಿ ಪಾಲಾಯಿತು. ಗೋವು ಬದುಕಿತು. ಆದರೆ ಸಾವಿರಾರು ಜನರು ಮೃತಪಟ್ಟರು. ನೂರಾರು ಮಂದಿ ನದಿಯಲ್ಲಿ ಕಾಣೆಯಾದರು. ಹಾಗೆಯೇ ವಿಶಾಲ ಫ್ಲಾಟ್‌ಫಾರ್ಮ್‌ಗಳ ಕೊರತೆಯೂ ನೂರಾರು ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ, ರೈಲ್ವೆ ನಿಯಮಗಳ ಬಗ್ಗೆ ಜನಸಾಮಾನ್ಯರ ಬೇಜವಾಬ್ದಾರಿ, ಅಜಾಗರೂಕತೆಯೂ ಸಾಕಷ್ಟು ದುರಂತಗಳನ್ನು ಆಹ್ವಾನಿಸಿದೆ. ರಸ್ತೆ ಅಪಘಾತಗಳಿಗೆ ಕಾರಣವಾಗುವ ಅಂಶಗಳು ರೈಲು ಅಪಘಾತಗಳಿಗೂ ಅನ್ವಯಿಸುತ್ತವೆ. ರಸ್ತೆ ಮತ್ತು ರೈಲು ಹಳಿಗಳು ಮುಖಾಮುಖಿಯಾಗುವಲ್ಲಿ ಪ್ರತಿ ದಿನ ಸಣ್ಣ ಪುಟ್ಟ ಅವಘಡಗಳು ನಡೆಯುತ್ತಲೇ ಇವೆ. ಆದರೆ ಜನರಾಗಲಿ, ರೈಲ್ವೆ ಇಲಾಖೆಯಾಗಲಿ ಇದರಿಂದ ಪಾಠ ಕಲಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಅಮೃತ ಸರದ ದುರಂತದಲ್ಲಿ ಒಂದಂತೂ ಸ್ಪಷ್ಟವಾಗಿದೆ. ರೈಲು ತನ್ನ ಹಳಿಯಲ್ಲೇ ಚಲಿಸಿದೆ.

ಅದು ಹಳಿತಪ್ಪಿ ಸಾರ್ವಜನಿಕ ಸಮಾರಂಭ ನಡೆಯುವ ಸ್ಥಳಕ್ಕೆ ಮಗುಚಿ ಬಿದ್ದು ದುರಂತ ಸಂಭವಿಸಿದ್ದೇ ಆಗಿದ್ದರೆ ರೈಲ್ವೆ ಇಲಾಖೆಯನ್ನೂ ದುರಂತದಲ್ಲಿ ಭಾಗೀದಾರ ಮಾಡಬಹುದಾಗಿತ್ತೇನೋ. ರಾಮಲೀಲಾ ಉತ್ಸವ ನಡೆಸಿರುವುದು ರೈಲ್ವೇ ಇಲಾಖೆಯಲ್ಲ. ರಾಮಲೀಲಾ ಕಾರಣಕ್ಕಾಗಿ ರೈಲು ಹಳಿಗಳಲ್ಲಿ ರೈಲು ಚಲಿಸಬಾರದು ಎಂದು ಬಯಸುವುದಕ್ಕಾಗುವುದಿಲ್ಲ. ರಾಮಲೀಲಾದಂತಹ ಉತ್ಸವಗಳನ್ನು ರೈಲು ಹಳಿಗಳ ಪಕ್ಕ ಹಮ್ಮಿಕೊಳ್ಳುವುದು ಅಪಘಾತಗಳನ್ನು ಆಹ್ವಾನಿಸಿಕೊಂಡಂತೆಯೇ ಸರಿ. ಒಂದು ವೇಳೆ ಹಮ್ಮಿಕೊಂಡರೂ, ಹಳಿಗಳ ಆಸುಪಾಸುಗಳಲ್ಲಿ ಜನರು ಓಡಾಡದಂತೆ ಅಥವಾ ಅಲ್ಲಿ ನೆರೆಯದಂತೆ ಸಮಾರಂಭದ ಆಯೋಜಕರೇ ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕು. ರೈಲು ಹಳಿಯ ಮೇಲೆ ಜನರು ನೆರೆಯುವುದೇ ಸ್ಪಷ್ಟವಾಗಿ ಕಾನೂನು ಉಲ್ಲಂಘನೆ. ಆ ಕಾರಣಕ್ಕಾಗಿಯೇ ಮೊಕದ್ದಮೆ ದಾಖಲಿಸಬಹುದು. ರೈಲು ಹಳಿಗಳ ಮೇಲೆ ನೆರೆದು ಉತ್ಸವ ವೀಕ್ಷಿಸುವುದು ಆತ್ಮಹತ್ಯೆಯ ಇನ್ನೊಂದು ರೂಪವೇ ಸರಿ. ಈ ನಿಟ್ಟಿನಲ್ಲಿ ಕಾರ್ಯಕ್ರಮದ ಆಯೋಜಕರೇ ಈ ಮಾರಣ ಹೋಮದ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಉಳಿದಂತೆ ಕನಿಷ್ಠ ರೈಲು ಚಾಲಕನಿಗೆ ಅಪಘಾತವನ್ನು ತಪ್ಪಿಸುವ ಅವಕಾಶವಿತ್ತೆ ಎನ್ನುವುದು.

ಗ್ರೀನ್ ಸಿಗ್ನಲ್‌ನ್ನು ನೀಡಲಾಗಿತ್ತಾದರೂ, ಅದು ಚಾಲಕನನ್ನು ತಲುಪುವ ಯಾವ ಸಾಧ್ಯತೆಗಳೂ ಇರಲಿಲ್ಲ. ರಾವಣನ ಪ್ರತಿಕೃತಿಯಿಂದ ಎದ್ದ ಹೊಗೆ, ನೆರೆದ ಜನ, ಪಟಾಕಿ ಸದ್ದುಗಳು ಇವೆಲ್ಲವೂ ಸೂಚನೆಗಳನ್ನು ಚಾಲಕನಿಗೆ ತಲುಪದಂತೆ ಮಾಡಿದವು. ಇದಕ್ಕೆ ಯಾರು ಹೊಣೆಗಾರರು? ಹಳಿ ಪಕ್ಕದ ಮೈದಾನದಲ್ಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡದ್ದೇ ಮೊದಲ ತಪ್ಪು. ಒಂದು ವೇಳೆ ಈ ಪಟಾಕಿ, ರಾವಣ ದಹನದ ಬೆಂಕಿಯಿಂದ ರೈಲಿಗೆ ಬೆಂಕಿ ಹತ್ತಿಕೊಂಡಿದ್ದರೆ ಅದಕ್ಕಿಂತಲೂ ಭೀಕರವಾದ ಅನಾಹುತ ನಡೆಯುತ್ತಿತ್ತು. ಯಾವ ದಿಕ್ಕಿನಿಂದ ನೋಡಿದರೂ ಈ ಪ್ರಕರಣದಲ್ಲಿ ರೈಲ್ವೆ ಇಲಾಖೆಯನ್ನು ಹೊಣೆ ಮಾಡುವಂತಿಲ್ಲ. ಕಾರ್ಯಕ್ರಮದಲ್ಲಿ ರಾಜಕಾರಣಿಗಳೂ ಭಾಗವಹಿಸಿದ್ದರು.

ಕನಿಷ್ಠ ಅವರಾದರೂ ಜವಾಬ್ದಾರಿಯಿಂದ ವರ್ತಿಸಿದ್ದರೆ ಈ ದುರಂತ ತಪ್ಪಿಸಬಹುದಿತ್ತೇನೋ. ಸಾವಿರಾರು ಜನರು ಕಿಕ್ಕಿರಿದು ನೆರೆಯುವ ಧಾರ್ಮಿಕ ಉತ್ಸವದ ಪೂರ್ವಾಪರವನ್ನು ವಿಚಾರಿ ಸುವುದು, ಜಿಲ್ಲಾಡಳಿತಕ್ಕೆ ಸಲಹೆ ಸೂಚನೆಗಳನ್ನು ರಾಜಕಾರಣಿಗಳ ಹೊಣೆಯಾಗಿದೆ. ರೈಲು ಹಳಿಗಳ ಸಮೀಪ ಸಮಾರಂಭ ನಡೆಯುವುದು ಗೊತ್ತಾದಾಗ, ಈ ಬಗ್ಗೆ ರೈಲ್ವೇ ಇಲಾಖೆಯಿಂದಲಾದರೂ ಮಾಹಿತಿಯನ್ನು ಪಡೆಯಬಹುದಿತ್ತು. ರಾಜಕಾರಣಿಗಳು ಭಾಗವಹಿಸುವ ಕಾರ್ಯಕ್ರಮ ಇದಾಗಿರುವುದರಿಂದ ಇಲಾಖೆಯೂ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದಿತ್ತು. ಕನಿಷ್ಠ ರೈಲು ಹಳಿಗಳ ಮೇಲೆ ಜನರು ನೆರೆಯದಂತೆ ಮುಂಜಾಗ್ರತೆ ತೆಗೆದುಕೊಳ್ಳುವ ಹೊಣೆಗಾರಿಕೆ ಜಿಲ್ಲಾಡಳಿತಕ್ಕೆ ಸೇರಿತ್ತು. ಅಮೃತಸರ ದುರಂತ ಅಪಘಾತ ಅಲ್ಲವೇ ಅಲ್ಲ. ಅದೊಂದು ಸ್ವಯಂಕೃತಾಪರಾಧ. ಎಲ್ಲರೂ ಜೊತೆ ಸೇರಿ ಪ್ರಾಯೋಜಿಸಿದ ಒಂದು ಬರ್ಬರ ದುರಂತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News