ಆದಿತ್ಯನಾಥ್ ಸರಕಾರದ ಸಚಿವನ ಪಾದ ಸ್ಪರ್ಶಿಸಿ ಕ್ಷಮೆ ಕೋರಿದ ಪೊಲೀಸ್ ಸಿಬ್ಬಂದಿ !

Update: 2018-10-22 17:10 GMT

ಲಕ್ನೋ, ಅ. 22: ಉತ್ತರಪ್ರದೇಶದ ಪೊಲೀಸ್ ಸಿಬ್ಬಂದಿಯೋರ್ವರು ಸಾರ್ವಜನಿಕವಾಗಿ ರಾಜ್ಯದ ಹಿರಿಯ ಸಚಿವ ಸತೀಶ್ ಮಹಾನಾ ಅವರ ಪಾದ ಮುಟ್ಟಿ ಕ್ಷಮೆ ಕೋರಿದ ಘಟನೆ ಸೋಮವಾರ ಇಲ್ಲಿ ನಡೆದಿದೆ.

ಜನನಿಬಿಡ ಪ್ರದೇಶದಲ್ಲಿ ದಾರಿ ಮಾಡಿಕೊಂಡು ಮುಂದುವರಿಯುತ್ತಿದ್ದ ಪೊಲೀಸರ ವಾಹನ ಸಚಿವರ ಕಾರಿಗೆ ಲಘು ಢಿಕ್ಕಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಸಚಿವರ ಪಾದ ಸ್ಪರ್ಶಿಸಿ ಕ್ಷಮೆ ಕೋರಿದ್ದಾರೆ.

ಅಲ್ಲಿ ಸ್ಪಲ್ಪವೇ ಸ್ಥಳಾವಕಾಶ ಇತ್ತು. ಅವರ ವಾಹನಕ್ಕೆ ಸ್ಥಳಾವಕಾಶ ಮಾಡಿಕೊಡುವ ಸಂದರ್ಭ ಈ ಘಟನೆ ಸಂಭವಿಸಿತ್ತು ಎಂದು ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ. ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರದಲ್ಲಿ ಸತೀಶ್ ಮಹಾನ ಕೈಗಾರಿಕೆ ಅಭಿವೃದ್ಧಿ ಸಚಿವರಾಗಿದ್ದಾರೆ.

  ಜುಲೈಯಲ್ಲಿ ಪೊಲೀಸ್ ಸಿಬ್ಬಂದಿಯೋರ್ವರು ಸಮವಸ್ತ್ರದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಎದುರು ಮೊಣಕಾಲೂರಿ ಕೈಮುಗಿಯುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಸರ್ಕಲ್ ಅಧಿಕಾರಿ ಪ್ರವೀಣ್ ಸಿಂಗ್ ಅವರು ಆದಿತ್ಯನಾಥ್ ಎದುರು ಮೊಣಕಾಲೂರಿ ಕೈಮುಗಿದ ಚಿತ್ರವನ್ನು ಗೋರಖ್‌ನಾಥ್ ದೇವಾಲಯದಲ್ಲಿ ಸೆರೆ ಹಿಡಿಯಲಾಗಿತ್ತು.

ಆದಾಗ್ಯೂ, ಆದಿತ್ಯನಾಥ್ ಗೋರಖ್‌ನಾಥ್ ಮಠದ ಪೀಠಾಧೀಶ್ವರ ಹಾಗೂ ಮುಖ್ಯ ಅರ್ಚಕರಾಗಿದ್ದುದರಿಂದ ತಾನು ಗೌರವ ನೀಡಿದೆ ಎಂದು ಪೊಲೀಸ್ ಸಿಬ್ಬಂದಿ ಸಮರ್ಥನೆ ನೀಡಿದ್ದರು.

‘‘ಭಕ್ತಿಯಿಂದ ನಾನು ಬೆಲ್ಟ್, ಕ್ಯಾಪ್‌ಗಳನ್ನು ತೆಗೆದೆ ಹಾಗೂ ತಲೆಗೆ ಕರವಸ್ತ್ರ ಕಟ್ಟಿದೆ. ಪೀಠಾಧೀಶ್ವರ ಮಹಾಂತ ಆದಿತ್ಯನಾಥ್ ಅವರಿಂದ ಆಶೀರ್ವಾದ ಪಡೆದೆ’’ ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News