ಟೀಕೆ, ಆರೋಪ ಬಿಟ್ಟು ಅಭಿವೃದ್ಧಿಗೆ ಸಹಕರಿಸಿ: ಶಾಸಕ ಶಿವಶಂಕರಪ್ಪರಿಗೆ ಸಂಸದ ಸಿದ್ದೇಶ್ವರ್ ಸಲಹೆ

Update: 2018-10-22 17:25 GMT

ದಾವಣಗೆರೆ,ಅ.22: ಅನಗತ್ಯ ಟೀಕೆ, ಆರೋಪ ಮಾಡುವುದನ್ನು ಬಿಟ್ಟು, ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಲಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಹಿರಿಯ ರಾಜಕಾರಣಿ, ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಲಹೆ ನೀಡಿದರು.

ಸೋಮವಾರ ನಗರದ ಅರುಣ ವೃತ್ತದ ಬಳಿ ಬಿಜೆಪಿ ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರಾಗಿ ಅಭಿವೃದ್ಧಿಯ ದೃಷ್ಟಿಯಿಂದ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಆದರೆ, ಶಾಸಕ ಶಾಮನೂರು ಶಿವಶಂಕರಪ್ಪ ನನ್ನ ಮತ್ತು ಬಿಜೆಪಿ ವಿರುದ್ಧ ಅನಗತ್ಯ ಟೀಕೆ, ಆರೋಪ ಮಾಡುತ್ತಿರುವುದು ಒಳ್ಳೆಯದಲ್ಲ. ಇವುಗಳನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಲಿ ಎಂದ ಅವರು, ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಇಂದು ಲೋಕಸಭಾ ಚುನಾವಣಾ ಕಾರ್ಯಾಲಯ ಮತ್ತು ಕಾಲ್ ಸೆಂಟರ್ ಆರಂಭಿಸಿ, ಮೋದಿ ಸರ್ಕಾರದ 4 ವರ್ಷದ ಯೋಜನೆ ಗ್ರಾಮೀಣದ ಪ್ರದೇಶದ ಬೂತ್ ಮಟ್ಟಕ್ಕೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ನಮ್ಮ ಪಕ್ಷದಲ್ಲಿ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೋ, ಅವರೇ ಲೋಕಸಭಾ ಅಭ್ಯರ್ಥಿಯಾಗಲಿದ್ದಾರೆ. ಆದರೆ, ಅವರ ಕಾಂಗ್ರೆಸ್ ಪಕ್ಷಕ್ಕೆ ಶಾಮನೂರು ಶಿವಶಂಕರಪ್ಪನವರೇ ಹೈಕಮಾಂಡ್ ಆಗಿರಬಹುದು. ಅದಕ್ಕೆ ಅವರ ಟಿಕೆಟ್ ಅವರೇ ಘೋಷಿಸಿಕೊಂಡಿರಬಹುದು ಎಂದು ಲೇವಡಿ ಮಾಡಿದ ಅವರು, ಈ ಬಾರಿಯ ಲೋಕಸಭೆಯಲ್ಲಿ ಬಿಜೆಪಿ ಸುಮಾರು 1.5 ಲಕ್ಷ ಮತಗಳ ಅಂತರದಲ್ಲಿ ಗೆಲವು ಸಾಧಿಸಲಿದೆ ಎಂದರು.

ಮೋದಿ ಮತ್ತೆ ಪ್ರಧಾನಿ: ಮೋದಿ ಅವರನ್ನು ದೇಶದ ಪ್ರಧಾನಿ ಮಾಡಬೇಕೆಂಬ ತೀರ್ಮಾನ ಜನತೆ ಮಾಡಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 25ರಿಂದ 26 ಜನ ಬಿಜೆಪಿ ಸಂಸದರು ಸಂಸತ್ತು ಪ್ರವೇಶ ಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಜಯಗಳಿಸಲಿದ್ದಾರೆ. ಪಂಚ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.

ಗೋಷ್ಠಿಯಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಎನ್. ಲಿಂಗಣ್ಣ, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಬಿ.ರಮೇಶ ನಾಯ್ಕ, ಮುಖಂಡರಾದ ಪ್ರೊ.ನರಸಿಂಹಪ್ಪ, ಹೇಮಂತಕುಮಾರ್, ಶಿವರಾಜ ಪಾಟೀಲ್, ಪ್ರಕಾಶ್, ಪಾಲಿಕೆ ಸದಸ್ಯ ಡಿ.ಕೆ.ಕುಮಾರ್ ಹಾಜರಿದ್ದರು.

ಖರೀದಿ ಕೇಂದ್ರ ಆರಂಭಿಸದಿದ್ದರೆ ಹೋರಾಟ
ಮುಂದಿನ 10-12 ದಿನಗಳಲ್ಲಿ ಜಿಲ್ಲೆಯಲ್ಲಿ ಭತ್ತ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆರಂಭಿಸದಿದ್ದರೆ ಬಿಜೆಪಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಸಿಗದೆ ಪರಿತಪಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಖರೀದಿ ಕೇಂದ್ರವನ್ನು ರಾಜ್ಯ ಸರ್ಕಾರ ಆರಂಭಿಸಬೇಕೆಂದು ಅವರು ಆಗ್ರಹಿಸಿದರು.

ಬರಪೀಡಿತ ಜಿಲ್ಲೆಯೆಂದು ಘೋಷಿಸಿ
ಜಿಲ್ಲೆಯ 7 ತಾಲೂಕುಗಳಲ್ಲಿ ಈಗಾಗಲೇ 4 ತಾಲೂಕುಗಳನ್ನು ಬರಪೀಡಿತ ತಾಲೂಕೆಂದು ಘೋಷಿಸಿದೆ. ಆದರೆ, ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿಯನ್ನು ಘೋಷಿಸಿಲ್ಲ. ಆದ್ದರಿಂದ ಸರ್ಕಾರ ಈ ಕೂಡಲೇ ಈ ಕುರಿತು ವರದಿ ಪಡೆದು ಪರಿಶೀಲಿಸಿ, ಅವುಗಳನ್ನು ಸಹ ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕೆಂದು ಅವರು ಆಗ್ರಹಿಸಿದರು.

ಒತ್ತುವರಿ ಮಾಡುವುದೇ ಎಸ್ಸೆಸ್ ಕೆಲಸ
2013-14ರ ಬಜೆಟ್‍ನಲ್ಲಿ ಗಾಜಿನ ಮನೆ ನಿರ್ಮಾಣಕ್ಕೆ ಅನುದಾನ ಇಡಿಸಿದ್ದೆ. ಈ ಗಾಜಿನ ಮನೆ ಶಿರಮಗೊಂಡನಹಳ್ಳಿಯಲ್ಲಿ ನಿರ್ಮಾಣ ಆಗಬೇಕಿತ್ತು. ಆದರೆ, ನಂತರ ಬಂದ ಶಾಸಕರು ಅದನ್ನು ಕುಂದುವಾಡ ಕೆರೆಯ ಹತ್ತಿರ ಸ್ಥಳಾಂತರಿಸಿದರು. ಇದು ಅವರ ಜಾಗದಲ್ಲಿ ಇದೆಯೋ, ಸರ್ಕಾರಿ ಜಾಗದಲ್ಲಿ ಇದೆಯೋ ಗೊತ್ತಿಲ್ಲ. ಒತ್ತುವರಿ ಮಾಡುವುದೇ ಅವರ ಕೆಲಸ ಎಂದು ಶಾಸಕ ಎಸ್.ಎ.ರವೀಂದ್ರನಾಥ್,  ಶಾಮನೂರು ಶಿವಶಂಕರಪ್ಪನವರ ಹೆಸರು ಪ್ರಸ್ತಾಪ ಮಾಡದೆಯೇ ಉತ್ತರಿಸಿದರು.

ಎಸ್ಸೆಸ್ ನುಡಿದಂತೆ ನಡೆದುಕೊಳ್ಳಲಿ:
ಶಾಮನೂರು ಶಿವಶಂಕರಪ್ಪ ಇತ್ತೀಚೆಗೆ ಬಿಜೆಪಿ ಗಾಜಿನ ಮನೆ ನಿರ್ಮಾಣಕ್ಕೆ ಪ್ರಯತ್ನಿಸಿರುವುದು ಸಾಬೀತುಪಡಿಸಿದರೆ, ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ತೋಟಗಾರಿಕಾ ಸಚಿವರಾಗಿದ್ದ ಎಸ್.ಎ.ರವೀಂದ್ರನಾಥ್ ಅವರು ತಮಕೂರು ಮತ್ತು ದಾವಣಗೆರೆಯಲ್ಲಿ ಗಾಜಿನ ಮನೆ ನಿರ್ಮಾಣಕ್ಕೆ 2013-14ನೇ ಸಾಲಿನ ಆಯವ್ಯಯದಲ್ಲಿಯೇ ಅನುದಾನ ಮೀಸಲಿರಿಸಿದ್ದರು ಎಂಬುದಾಗಿ ಹೇಳಿ ಬಜೆಟ್ ಕಾಪಿ ಹಾಜರು ಪಡಿಸಿ, ಶಾಮನೂರು ಶಿವಶಂಕರಪ್ಪ ನುಡಿದಂತೆ ನಡೆದುಕೊಳ್ಳಲಿ ಎಂದು ಸವಾಲು ಎಸೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News