ಕೊಡಗು: ಮೊಗೇರ ಸಮುದಾಯದ 35 ಸಂತ್ರಸ್ತ ಕುಟುಂಬಗಳಿಗೆ ಸಹಾಯಧನ ವಿತರಣೆ

Update: 2018-10-22 17:39 GMT

ಮಡಿಕೇರಿ, ಅ. 22 : ಇತ್ತೀಚಿಗೆ ಸಂಭವಿಸಿದ ಪಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡು ಹಾಗೂ ಭಾಗಶಃ ಮನೆ ಹಾನಿಗೊಳಗಾದ ಮೊಗೇರ ಸಮುದಾಯದ 35 ಸಂತ್ರಸ್ತ ಕುಟುಂಬಗಳಿಗೆ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘದ ಸಹಕಾರದಿಂದ ಸಹಾಯಧನ ವಿತರಿಸಲಾಯಿತು.

ನಗರದ ದೇವರಾಜು ಅರಸು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಕೃಷ್ಣಪ್ಪ ದೇರೆಬೈಲು ಕೊಡಗು ಜಿಲ್ಲೆಯಲ್ಲಿ ಮೊಗೇರ ಸಮುದಾಯ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗುತ್ತಿರುವ ಹೊತ್ತಿನಲ್ಲೇ ಪ್ರಕೃತಿ ವಿಕೋಪದಿಂದ ದೊಡ್ಡ ದುರಂತ ಸಂಭವಿಸಿದೆ. ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿರುವುದು ತುಂಬಾ ನೋವಿನ ವಿಚಾರವಾಗಿದೆ ಎಂದು ಬೇಸರ  ವ್ಯಕ್ತಪಡಿಸಿದರು.

ಸಂತ್ರಸ್ತರಾದವರು ಯಾವುದೇ ಕ್ಷಣದಲ್ಲೂ ಜೀವನೋತ್ಸಾಹವನ್ನು ಕಳೆದುಕೊಳ್ಳದೆ ಆತ್ಮಸ್ಥೈರ್ಯದಿಂದ ಹೊಸ ಬದುಕು ಕಟ್ಟಿಕೊಳ್ಳಬೇಕಿದೆ. ನೊಂದವರ ಜೊತೆಯಲ್ಲಿ ಸಂಘ ಇರಲಿದೆ ಎಂದು ಧೈರ್ಯ ತುಂಬಿದರು. ಸರಕಾರ ಮನೆ ನಿರ್ಮಿಸಿಕೊಡುತ್ತಿದ್ದು, ಅಗತ್ಯ ದಾಖಲೆ ಮತ್ತು ಮಾಹಿತಿ ನೀಡಿ ಪರಿಹಾರ ಪಡೆದುಕೊಳ್ಳುವಂತೆ ಕೃಷ್ಣಪ್ಪ ಸಲಹೆ ನೀಡಿದರು.

ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಜಾಡಿ ಮಾತನಾಡಿ, ಪ್ರಕೃತಿ ವಿಕೋಪದಿಂದ ಬದುಕು ಮುಗಿಯಿತು ಎಂದು ತಿಳಿದುಕೊಳ್ಳುವುದು ತಪ್ಪು. ಸರಕಾರ ಹಾಗೂ ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲವೆಂದರು.

ದಕ್ಷಿಣ ಕನ್ನಡ ಮೊಗೇರ ಸಂಘದ ಜಿಲ್ಲಾ ನಿರ್ದೇಶಕ ಡಾ.ಶಿವಪ್ರಸಾದ್ ಕಬಕ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಸಂತ್ರಸ್ತರು ನಿರಾಶರಾಗದೆ, ಬದುಕುವ ಛಲ ಮೂಡಿಸಿಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲಾ ಮೋಗೆರ ಸಮಾಜದಿಂದ ಮುಂದೆಯು ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಮೊಗೇರ ಸಮಾಜದ ಗೌರವಾಧ್ಯಕ್ಷ ಪಿ.ಎಂ.ರವಿ, ಸಂತ್ರಸ್ತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಆಹಾರ ಪದಾರ್ಥ ಸೇರಿದಂತೆ ಅಗತ್ಯ ಕಿಟ್ ನೀಡಿದ ದಕ್ಷಿಣ ಕನ್ನಡ, ಮೂಡಿಗೆರೆ ಸಕಲೇಶಪುರ, ಬೆಂಗಳೂರು, ಬಂಟ್ವಾಳ ಮೊಗೇರ ಸಂಘಗಳ ಕಾರ್ಯ ಶ್ಲಾಘನೀಯವೆಂದು ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಬಿ.ಶಿವಪ್ಪ ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘ ಸಹಾಯಧನ ನೀಡುವ ಮೂಲಕ ಸಂತ್ರಸ್ತರಲ್ಲಿ ಹೊಸ ಸ್ಫೂರ್ತಿಯನ್ನು ತುಂಬಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘದ ಉಪಾಧ್ಯಕ್ಷ ಮೋಹನ್‍ದಾಸ್, ಮಂಗಳೂರು ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಬಿ.ಸುರೇಶ್, ಜಿಲ್ಲಾ ಉಪಧ್ಯಾಕ್ಷ ಸೋಮನಾಥ್, ವಿರಾಜಪೇಟೆ ತಾಲೂಕು ಗೌರವಧ್ಯಕ್ಷೆ ಅಕ್ಕಮ್ಮ ಮೂರ್ತಿ ಹಾಗೂ ಜಿಲ್ಲೆ, ತಾಲೂಕು ಮತ್ತು ಹೋಬಳಿ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ. ಚಂದ್ರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News