ಗಾಂಧೀಜಿ ಕುರಿತು ತಿಳಿಸುವ ಸಂತತಿ ಕಡಿಮೆಯಾಗುತ್ತಿದೆ: ಸಚಿವ ಜಿ.ಟಿ.ದೇವೇಗೌಡ

Update: 2018-10-22 18:23 GMT

ಮೈಸೂರು,ಅ.22: ಅಹಿಂಸಾತ್ಮಕ ಚಳುವಳಿ, ಆಂದೋಲನ, ಶಾಂತಿಯ ಸಂದೇಶದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮಾ ಗಾಂಧೀಜಿಯವರ ಕುರಿತು ತಿಳಿಸುವ ಸಂತತಿ ಕಡಿಮೆಯಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿಯ ಗಾಂಧಿಭವನದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ರಂಗಾಯಣ, ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾದ ಗಾಂಧೀಜಿ ಕುರಿತ ಸಿಮೆಂಟ್ ಶಿಲ್ಪ ಶಿಬಿರವನ್ನು ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆಗೈಯ್ಯುವ ಮೂಲಕ ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಅವರು ಮಹಾತ್ಮಾ ಗಾಂಧೀಜಿಯವರ ತತ್ವಗಳನ್ನು ಮೈಗೂಡಿಸಿಕೊಂಡಿರುವ ನಿಮ್ಮಂತಹವರ ಮುಂದೆ ಗಾಂಧೀಜಿಯವರ ಕುರಿತು ಮಾತನಾಡಲು ನಾನು ತುಂಬಾ ಚಿಕ್ಕವನು ಎಂದರು. ಇಂದು ಗಾಂಧೀಜಿಯವರ ಕುರಿತು ತಿಳಿಸುವವರ ಸಂತತಿ ಕಡಿಮೆಯಾಗುತ್ತಿದೆ. ಗಾಂಧೀಜಿಯವರ ಕುರಿತು ಮಾರ್ಗದರ್ಶನ ನೀಡುವವರ ಅಗತ್ಯತೆಯಿದೆ. ಮಹಾತ್ಮಾ ಗಾಂಧೀಜಿಯವರು ಜೀವನದಲ್ಲಿ ತಾಯಿಯನ್ನೇ ನೋಡಲಿಕ್ಕಾಗದ ಸನ್ನಿವೇಶದಲ್ಲಿ ಬೆಳೆದವರು. ಆದರೆ ಇದಾವುದನ್ನೂ ಲೆಕ್ಕಿಸದೆ ದೇಶದ ಜನತೆ ಬ್ರಿಟಿಷರ ಕಪಿಮುಷ್ಠಿಯಿಂದ ಹೊರಬರಬೇಕು. ಜೀತಪದ್ಧತಿಯಿಂದ ಹೊರಬರಬೇಕು. ಬ್ರಿಟಿಷರ ಆಡಳಿತ ತೊಡೆಯಲು ಶಾಂತಿ ಸತ್ಯಾಗ್ರಹ, ಅಹಿಂಸಾತ್ಮಕ ಚಳುವಳಿಯಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತು ಅನುಸರಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಮಹಾತ್ಮಾಗಾಂಧಿಯವರ ಹೋರಾಟ, ಸಂದೇಶಗಳು, ಸರಳತೆಯನ್ನು ಇಂದಿನ ಯುವಜನತೆಗೆ ತಿಳಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದರು. 

ಪ್ರಧಾನಿ ನರೇಂದ್ರ ಮೋದಿಯವರು ಒಂದು ವರ್ಷದವರೆಗಿನ ಗಾಂಧೀಜಿಯವರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಗಾಂಧೀಜಿ ಇಂದಿಗೂ ಎಷ್ಟು ಪ್ರಸ್ತುತ ಎಂಬುದು ಈಗ ಅವರಿಗೆ ಜ್ಞಾನೋದಯವಾಗಿದೆ ಎಂದು ತಿಳಿಸಿದರು. ಹಳ್ಳಿಯಲ್ಲಿ ಜನತೆಗೆ ಮೂಲಭೂತ ಸೌಕರ್ಯ ಒದಗಿಸಲು ಒಂದು ಗ್ರಾಮ ಪಂಚಾಯತ್, ಶಿಕ್ಷಣಕ್ಕಾಗಿ ಒಂದು ಶಾಲೆ, ರೈತರ ಸಾಲಸೌಲಭ್ಯಕ್ಕಾಗಿ, ಅವರ ವ್ಯವಹಾರ ಅಭಿವೃದ್ಧಿಗಾಗಿ, ಆರ್ಥಿಕ ಸಹಕಾರಕ್ಕಾಗಿ ಸಹಕಾರ ಸಂಘಗಳಿರಬೇಕೆಂದು ಕನಸು ಕಂಡರು. ಅದರಂತೆ ಇಂದು ಪ್ರತಿ ಹಳ್ಳಿಯಲ್ಲಿಯೂ ಅವೆಲ್ಲವೂ ಇದೆ. ಗಾಂಧೀಜಿಯವರ ಸಂಕಲ್ಪಗಳು, ಅವರ ಆದರ್ಶಗಳನ್ನು ಎಂದಿಗೂ ಮರೆಯಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಆಯಿಷಾ ಎಂ.ಶರೀಫ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅದ್ಯಕ್ಷ ಶಿಲ್ಪಿ ರು.ಕಾಳಾಚಾರ್, ಅಂತರರಾಷ್ಟ್ರೀಯ ಪ್ರಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಕೆ.ಟಿ.ವೀರಪ್ಪ, ಡಾ.ಎಂ.ಜಿ.ಕೃಷ್ಣಮೂರ್ತಿ, ಪ.ಮಲ್ಲೇಶ್, ಬಿ.ಕೆ.ಶಿವಣ್ಣ, ಡಾ.ಎಸ್.ತುಕಾರಾಮ್, ಪಿ.ವಿಶ್ವನಾಥ್, ಗಾಂಧಿ ಭವನದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಇಂದ್ರಮ್ಮ ಹೆಚ್.ವಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News