ಲಿಂಗ ಅಸಮಾನತೆ ಮತ್ತು ಶಬರಿಮಲೆ ವಿವಾದ: ಒಂದು ಅವಲೋಕನ

Update: 2018-10-22 18:30 GMT

ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ಸಂಘ ಪರಿವಾರದ ತಥಾಕಥಿತ ಧರ್ಮರಕ್ಷಕರು ಬಲಪ್ರಯೋಗದ ಮೂಲಕ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ತಡೆಯುತ್ತಿದ್ದಾರೆ; ಅಂಗಡಿಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದಾರೆ. ‘ಶಬರಿಮಲೆ ಆಚಾರ ಸಂರಕ್ಷಣಾ ಸಮಿತಿ’ ಎಂಬ ಹೆಸರಿನಡಿಯಲ್ಲಿ ಕಾರ್ಯಾಚರಿಸುತ್ತಿರುವ ಈ ಸ್ವಯಂಸೇವಕ, ಸೇವಿಕೆಯರು ಮಹಿಳಾ ಪತ್ರಕರ್ತರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೂ ತಲುಪಿದ್ದಾರೆ.


ಭಾಗ-1

ಶಬರಿಮಲೆ ಅಯ್ಯಪ್ಪಮಂದಿರಕ್ಕೆ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡುವುದನ್ನು ವಿರೋಧಿಸಿ ಸಂಘ ಪರಿವಾರ ಇಂದು ಕೇರಳದಲ್ಲಿ ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಅದು ಉದ್ದೇಶಿಸಿದಂತೆಯೇ ಅಖಿಲ ಭಾರತ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಸಂಘ ಪರಿವಾರ ಕನಿಷ್ಠ ಎರಡು ದೊಡ್ಡ ಲಾಭಗಳನ್ನು ಹೊಡೆಯಲು ಯೋಚಿಸುತ್ತಿದೆ. ದಕ್ಷಿಣ ಭಾರತದಲ್ಲಿ ದುರ್ಬಲವಾಗಿರುವ ತನ್ನ ನೆಲೆಗಟ್ಟನ್ನು ಗಟ್ಟಿಗೊಳಿಸುವುದು ಒಂದಾದರೆ ಇನ್ನೊಂದು, 2019ರ ಲೋಕಸಭಾ ಚುನಾವಣೆಗಳಲ್ಲಿ ತನ್ನ ಪಕ್ಷಕ್ಕೆ ಅತ್ಯಧಿಕ ಸ್ಥಾನಗಳನ್ನು ಗಳಿಸಿಕೊಡುವುದು. ಇದರ ಜೊತೆಗೆ ‘ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ’ ಎಂದು ಸಾರಿದ ಅದರ ಮೂಲಗುರು ಮನು ರಚಿಸಿದಂತಹ ಪುರುಷಪ್ರಧಾನ ವ್ಯವಸ್ಥೆಯನ್ನು ಮುಂದುವರಿಸುವುದೂ ಅದಕ್ಕೆ ಅತ್ಯಗತ್ಯವಾಗಿದೆ, ಆದರೆ ಇದನ್ನು ಬಹಿರಂಗವಾಗಿ ಹೇಳುತ್ತಿಲ್ಲ ಅಷ್ಟೆ. ಯಾಕೆ ಹೇಳಲಿಚ್ಛಿಸುತ್ತಿಲ್ಲ ಎಂಬುದು ಸ್ವಯಂವೇದ್ಯ.

ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿರ್ಬಂಧದ ಸಂಪ್ರದಾಯ ಯುಗಯುಗಾಂತರಗಳಷ್ಟು ಪುರಾತನವಾದುದು, ಅದನ್ನು ಬದಲಾಯಿಸಲಾಗದು ಎಂದಾದರೆ 1829ರಲ್ಲಿ ನಿಷೇಧಿಸಲ್ಪಟ್ಟ ಸತಿ ಸಹಗಮನ ಪದ್ಧತಿಯೂ ಪುರಾತನ ಪದ್ಧತಿ ಆಗಿತ್ತಲ್ಲವೇ? ಕಟ್ಟಾ ಸಂಪ್ರದಾಯವಾದಿಗಳ ತೀವ್ರ ಪ್ರತಿರೋಧದ ಹೊರತಾಗಿಯೂ ಸರಕಾರ ಸತಿ ಸಹಗಮನವನ್ನು ಸಂಪೂರ್ಣವಾಗಿ ನಿಷೇಧಿಸಿತೆಂಬ ವಾಸ್ತವಾಂಶವನ್ನು ನಾವು ಮರೆಯಬಾರದು. ಆ ದೃಷ್ಟಿಯಿಂದ ನೋಡಿದರೆ ಇಂದಿನ ಕಟ್ಟಾ ಸಂಪ್ರದಾಯವಾದಿಗಳಾದ ಸಂಘ ಪರಿವಾರಿಗರ 2018ರ ಸ್ತ್ರೀ ಸ್ವಾತಂತ್ರ್ಯ ವಿರೋಧಿ ‘ಸಮರ’ ಕೂಡಾ ಅದೇ ಸಾಲಿಗೆ ಸೇರುತ್ತದೆ. ಆ ಸಾಲಿನಲ್ಲಿ ಕನಿಷ್ಠ ಇನ್ನೆರಡು ‘ಸಮರ’ಗಳೂ ಇವೆ. 1949ರಲ್ಲಿ ಮತ್ತು 1983ರಲ್ಲಿ ನಡೆದಂತಹ ಅವೆರಡು ಸಮರಗಳ ಬಗ್ಗೆ ಜನಸಾಮಾನ್ಯರು ಸ್ವಲ್ಪವಾದರೂ ತಿಳಿದುಕೊಳ್ಳುವ ಆವಶ್ಯಕತೆ ಇದೆ.

1949ರ ‘ಸಮರ’

ಸಂವಿಧಾನ ರಚನಾ ಸಭೆಯಲ್ಲಿ ಸಮಾನ ನೀತಿಸಂಹಿತೆಯ ಬಗ್ಗೆ ಚರ್ಚೆಗಳು ನಡೆದಾಗ ಹಂಸ ಮೆಹ್ತಾ, ಡಾ ಬಿ.ಆರ್. ಅಂಬೇಡ್ಕರ್ ಮೊದಲಾದವರು ಕೌಟುಂಬಿಕ ಕಾನೂನುಗಳಲ್ಲಿ ಸುಧಾರಣೆ ಸರಕಾರದ ಮೂಲಕ ಆಗಬೇಕೆಂದು ವಾದಿಸಿದರೆ ಮುಸ್ಲಿಂ ಸಂಪ್ರದಾಯವಾದಿಗಳು ಅದರಿಂದ ತಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಲಿದೆ ಎಂದು ವಾದಿಸಿದರು. ಅಂತಿಮವಾಗಿ ಸಮಾನತೆಗಿಂತಲೂ ಬಹುತ್ವಕ್ಕೆ ಅಧಿಕ ಮಹತ್ವ ನೀಡಿ, ಸಮಾನತೆ ಮತ್ತು ಏಕರೂಪತೆಯ ಗುರಿಯನ್ನು ಮುಂದಕ್ಕೆ ಹಾಕಿ ಸಮಾನ ನಾಗರಿಕ ಸಂಹಿತೆಯನ್ನು ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಸೇರಿಸಲಾಯಿತು. ಆದರೆ ಇದನ್ನು ಕೇವಲ ಮುಸ್ಲಿಮರ ತುಷ್ಟೀಕರಣಕ್ಕಾಗಿ ಮಾಡಲಾಯಿತೆಂದು ಹೇಳುವುದು ಸತ್ಯಕ್ಕೆ ದೂರವಾದ ವಿಚಾರ. ವಾಸ್ತವದಲ್ಲಿ ಸಮಾನ ನೀತಿಸಂಹಿತೆಯನ್ನು ಮುಂದಕ್ಕೆ ಹಾಕಿದ್ದು ಕೇವಲ ಮುಸ್ಲಿಮರಿಗೋಸ್ಕರ ಅಲ್ಲ, ಸಂಪ್ರದಾಯವಾದಿ ಹಿಂದೂಗಳಿಂದ ಎದುರಿಸಲಿದ್ದ ಭಾರಿ ಪ್ರತಿರೋಧವನ್ನು ಮುಂಗಂಡು!

ವಾಸ್ತವದಲ್ಲಿ ಅಂದು ಸಮಾನ ನಾಗರಿಕ ಸಂಹಿತೆಗೆ ಹಿಂದೂಗಳಿಂದಲೂ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. 1940ರ ದಶಕದಲ್ಲಿ ಸುಧಾರಣೆ ಆಗಬೇಕಾದ ಕಾನೂನುಗಳ ಪಟ್ಟಿಯಲ್ಲಿದ್ದ ಮೊದಲ ಹೆಸರೇ ಹಿಂದೂ ವೈಯಕ್ತಿಕ ಕಾನೂನುಗಳದು ಎಂಬ ಸತ್ಯ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ! ಹಿಂದೂ ಕಾನೂನುಗಳು ನಂಬರ್ ವನ್ ಸ್ಥಾನದಲ್ಲಿರಲು ಕಾರಣವೇನೆಂದರೆ ಮುಸ್ಲಿಂ ಕಾನೂನುಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು 1930ರ ದಶಕದ ಅಂತ್ಯದಲ್ಲಿಯೇ ತರಲಾಗಿತ್ತು. ಸುಧಾರಿತ ಶರೀಅತ್ ಕಾಯ್ದೆ ಮುಸ್ಲಿಂ ಮಹಿಳೆಯರಿಗೆ ವಂಶಪಾರಂಪರಿಕ ಆಸ್ತಿಯನ್ನು ಹೊಂದುವ ಹಕ್ಕು, ಗಂಡನಿಂದ ಪ್ರತ್ಯೇಕವಾದ ಕಾನೂನುಬದ್ಧ ಅಸ್ಮಿತೆ, ವಿಚ್ಛೇದನೆಯ ಹಕ್ಕು ಇತ್ಯಾದಿಗಳನ್ನು ನೀಡಿತ್ತು. ಆದುದರಿಂದಲೆ 1945ರಲ್ಲಿ ಕಾನೂನಿನ ಮೂಲಕ ಸುಧಾರಣೆ ಆಗಲು ಉಳಿದುದೆಂದರೆ ಹಿಂದೂ ಕಾನೂನುಗಳು, ಅಸ್ಪಶ್ಯತಾ ನಿಷೇಧಕ್ಕೆ ಸಂಬಂಧಿಸಿದ ಶಾಸನ ಮತ್ತು ಮಂದಿರ ಪ್ರವೇಶಕ್ಕೆ ಸಂಬಂಧಿಸಿದ ಶಾಸನ. ಸಮಾನ ನೀತಿಸಂಹಿತೆಯ ಒಂದು ಭಾಗವೇ ಆದ ಹಿಂದೂ ನೀತಿಸಂಹಿತೆಯ ಕರಡು ಮಸೂದೆಯನ್ನು 1949ನೆ ಇಸವಿಯಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಲಾಯಿತು. ಇದು ಹಿಂದೂ ಸ್ತ್ರೀಗೆ ವರನನ್ನು ಆರಿಸುವ ಹಕ್ಕು, ಮೃಗೀಯವಾಗಿ ವರ್ತಿಸುವ ಗಂಡನನ್ನು ವಿಚ್ಛೇದಿಸುವ ಹಕ್ಕು, ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇತ್ಯಾದಿಗಳನ್ನು ನೀಡುವ ಮತ್ತು ಬಹುಪತ್ನಿತ್ವವನ್ನು ಕಾನೂನುಬಾಹಿರವಾಗಿಸುವ ಮಸೂದೆಯಾಗಿತ್ತು.

ಸಂಹಿತೆಯ ಮೂಲ ಉದ್ದೇಶವನ್ನು ಸ್ಪಷ್ಟಪಡಿಸಿದ ಅಂಬೇಡ್ಕರ್, ‘‘ಹಿಂದೂ ಸಮಾಜದಲ್ಲಿರುವ ಜಾತೀಯ ಮತ್ತು ಲೈಂಗಿಕ ಅಸಮಾನತೆಗಳನ್ನು ತೊಡೆದುಹಾಕುವುದೇ ಅದರ ಗುರಿಯಾಗಿದೆ’’ ಎಂದು ತಿಳಿಸಿದರು. ಆಗ ಅಸಮಾನತೆ, ಅಸ್ಪಶ್ಯತೆ (ಜಾತಿ ಮತ್ತು ಲಿಂಗಾಧಾರಿತ), ಬಹುಪತ್ನಿತ್ವಗಳನ್ನು ಮುಂದುವರಿಸಲು ಬಯಸಿದ್ದ ಖಟ್ಟರ್ ಹಿಂದೂ ಸಂಪ್ರದಾಯವಾದಿಗಳು (ಆರೆಸ್ಸೆಸ್‌ನ ಹಿಂದೂತ್ವವಾದಿಗಳು) ರೊಚ್ಚಿಗೆದ್ದು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು. ಅದು ಹಿಂದೂ ಧರ್ಮ ಮತ್ತು ಸಂಸ್ಕೃತಿಗಳ ಮೇಲಿನ ದಾಳಿಯಾಗಿದೆ ಎಂದು ಕಟುವಾಗಿ ಟೀಕಿಸಿದರು. ದಿಲ್ಲಿಯಲ್ಲಿ ಅಂಬೇಡ್ಕರ್ ನಿವಾಸಕ್ಕೆ ಮುತ್ತಿಗೆ ಹಾಕುವ ಯತ್ನವೂ ನಡೆಯಿತು. ಸಂಪ್ರದಾಯವಾದಿ ಹಿಂದೂಗಳು ಮತ್ತು ವಿವಿಧ ಜಾತಿ ಗುಂಪುಗಳು ಸಂವಿಧಾನ ರಚನಾ ಸಭೆಗೆ ಅರ್ಜಿ ಸಲ್ಲಿಸಿ ಸರಕಾರ ಹಿಂದೂಗಳ ಧರ್ಮಶಾಸ್ತ್ರಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ಮೂಗು ತೂರಿಸಬಾರದೆಂದು ಹಕ್ಕೊತ್ತಾಯ ಮಂಡಿಸಿದರು.

ಕುಂಭಕೋಣಂನ ಹಿಂದೂ ಮಹಿಳಾ ಸಂಘಟನೆ, ವೈಷ್ಣವ ಸಿದ್ಧಾಂತ ಸಭಾ ಮುಂತಾದವು ಅಸ್ಪಶ್ಯತೆ ಮುಂದುವರಿಯಬೇಕೆಂದು ವಾದಿಸಿದವು. ಅಖಿಲ ಭಾರತ ವರ್ಣಾಶ್ರಮ ಸಮಾಜ ಸಂಘದವರು ಧಾರ್ಮಿಕ ಆಚರಣೆಗಳಲ್ಲಿ ಮಧ್ಯಪ್ರವೇಶಿಸುವ ಯಾವುದೇ ಕಾನೂನು ಧರ್ಮಗ್ರಂಥಗಳಿಗೆ ವಿರುದ್ಧವಾಗಿದೆಯೇ ಎಂಬುದನ್ನು ತೀರ್ಮಾನಿಸಬೇಕಾದುದು ಧಾರ್ಮಿಕತಜ್ಞರು ಎಂದು ವಾದಿಸಿದರು. ಜೊತೆಗೆ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ತನ್ನದೇ ಧರ್ಮಗ್ರಂಥಗಳ ಸೂತ್ರಗಳನುಸಾರ ಬದುಕುವ ಮೂಲಭೂತ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿ ‘ಆರ್ಗನೈಸರ್’ ಕೂಡಾ ತನ್ನ ಡಿಸೆಂಬರ್ 7, 1949ರ ಸಂಪಾದಕೀಯದಲ್ಲಿ ‘‘ನಾವು ಹಿಂದೂ ನೀತಿಸಂಹಿತೆಯನ್ನು ವಿರೋಧಿಸುತ್ತೇವೆ. ಏಕೆಂದರೆ ಅದೊಂದು ಪರಕೀಯವಾದ ಮತ್ತು ಅನೈತಿಕ ತತ್ವಗಳನ್ನು ಆಧರಿಸಿದ ಅನುಚಿತ ಕ್ರಮ. ಅದು ಹಿಂದೂ ಅಲ್ಲವೇ ಅಲ್ಲ. ಕ್ರೌರ್ಯ, ಅಜ್ಞಾನಗಳಿಂದ ಕೂಡಿರುವ ಅದು ಹಿಂದೂ ಕಾನೂನುಗಳು, ಹಿಂದೂ ಸಂಸ್ಕೃತಿ ಮತ್ತು ಹಿಂದೂ ಧರ್ಮಗಳನ್ನು ಅವಮಾನಿಸುವುದರೊಂದಿಗೆ ನಿಂದಿಸುತ್ತದೆ. ನಾವು ಅದನ್ನು ಖಂಡಿಸುತ್ತೇವೆ....’’ ಎಂದು ಬರೆಯಿತು.

1949ರಲ್ಲಿ ಆರೆಸ್ಸೆಸ್‌ನ ಸಂಪೂರ್ಣ ಬೆಂಬಲದೊಂದಿಗೆ ಸ್ವಾಮಿ ಕರಪತ್ರೀಜಿ ಮಹಾರಾಜರ ನೇತೃತ್ವದ ಅಖಿಲ ಭಾರತ ಹಿಂದೂ ನೀತಿಸಂಹಿತೆ ಮಸೂದೆ ವಿರೋಧಿ ಸಮಿತಿ ಭಾರತದುದ್ದಕ್ಕೂ ನೂರಾರು ಸಭೆ, ಧರಣಿ, ಹರತಾಳ ಇತ್ಯಾದಿಗಳನ್ನು ಆಯೋಜಿಸಿತು. ಹಲವು ತಿಂಗಳುಗಳ ಕಾಲ ನಡೆದ ಈ ಆಂದೋಲನದಲ್ಲಿ ಅನೇಕ ಸ್ವಾಮೀಜಿಗಳೂ ಪಾಲ್ಗೊಂಡಿದ್ದರು. ಮಸೂದೆಯ ವಿರೋಧಿಗಳು ತಮ್ಮನ್ನು ಧರ್ಮಯುದ್ಧ ಮಾಡುವ ಧರ್ಮವೀರರೆಂದು (ಇವರದೇ ಇಂದಿನ ಪರಿಭಾಷೆಯಲ್ಲಿ ಜಿಹಾದಿಗಳು!!) ಕರೆದುಕೊಂಡರು. 1949ರ ಡಿಸೆಂಬರ್ 11ರಂದು ಆರೆಸ್ಸೆಸ್ ವತಿಯಿಂದ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ವಿವಿಧ ಮುಖಂಡರು ಮಸೂದೆಯನ್ನು ಬಲವಾಗಿ ಖಂಡಿಸಿದರು.

ಮರುದಿನ ಆರೆಸ್ಸೆಸ್ ಕಾರ್ಯಕರ್ತರು ಬೃಹತ್ತಾದ ರ್ಯಾಲಿಯೊಂದನ್ನು ನಡೆಸಿ ‘‘ಹಿಂದೂ ಸಮಾಜದ ಮೇಲೆ ಹಾಕಿದ ಆಟಂ ಬಾಂಬ್’’, ‘‘ಪಾಕಿಸ್ತಾನ್ ಥೋಡ್ ದೊ, ನೆಹರೂ ಹುಕೂಮತ್ ಚೋಡ್ ದೊ’’ ಮುಂತಾದ ಘೋಷಣೆಗಳೊಂದಿಗೆ ನೆಹರೂ, ಅಂಬೇಡ್ಕರ್ ಪ್ರತಿಕೃತಿಗಳನ್ನು ದಹಿಸಿದರು. ಶೇಕ್ ಅಬ್ದುಲ್ಲಾರ ಕಾರನ್ನು ಹಾನಿಗೊಳಿಸಿದರು. ಇದನ್ನೆಲ್ಲ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ತಮ್ಮ 'India After Gandhi' ಪುಸ್ತಕದಲ್ಲಿ ವಿವರಿಸಿದ್ದಾರೆ. ಅಂದಹಾಗೆ ಬಹುಪತ್ನಿತ್ವವನ್ನು ಸಮರ್ಥಿಸುತ್ತಾ ಯಾಜ್ಞವಲ್ಕ್ಯ ಸ್ಮತಿಯಲ್ಲಿ ಹಿಂದೂ ಪುರುಷರಿಗೆ ದ್ವಿಪತ್ನೀ ವಿವಾಹಕ್ಕೆ ಅನುಮತಿ ನೀಡಲಾಗಿದೆಯೆಂದು ವಾದಿಸಿದ್ದ ಮಾನ್ಯ ಸ್ವಾಮಿ ಕರಪತ್ರೀಜಿಯವರು ದ್ವಿಪತಿ ವಿವಾಹದ ಬಗ್ಗೆ ಉಸಿರೆತ್ತಲಿಲ್ಲ! ಆರೆಸ್ಸೆಸ್ ಹುಟ್ಟುಹಾಕಿದ ಚಳವಳಿ ಅಂತಿಮವಾಗಿ ಅಂಬೇಡ್ಕರರ ಸಚಿವ ಸ್ಥಾನವನ್ನು ಬಲಿಪಡೆದುಕೊಂಡಿತು. ರಾಜೀನಾಮೆ ಸಲ್ಲಿಸುತ್ತಾ ಅಂಬೇಡ್ಕರರು ಹೇಳಿದ ಮಾತುಗಳು ಈಗಿನ ಶಬರಿಮಲೆ ವಿವಾದದ ಸಂದರ್ಭದಲ್ಲಿಯೂ ಪ್ರಸ್ತುತವಾಗಿದ್ದು ಅದನ್ನು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ:

‘‘ಹಿಂದೂ ಸಮಾಜದ ಆತ್ಮವಾಗಿರುವ ಜಾತಿ ಅಸಮಾನತೆ ಮತ್ತು ಲೈಂಗಿಕ ಅಸಮಾನತೆಗಳನ್ನು ಹಿಂದಿನ ಸ್ಥಿತಿಯಲ್ಲೇ ಇರಿಸಿಕೊಂಡು ಆರ್ಥಿಕ ಸಮಸ್ಯೆಗಳಿಗೆ ಸಂಬಂಧಪಟ್ಟ ಕಾನೂನುಗಳನ್ನು ಮಾಡುತ್ತಾ ಹೋಗುವುದು ನಮ್ಮ ಸಂವಿಧಾನದ ಅಣಕವಾಗಿದೆ. ಅದು ಹೊಲಸಿನ ರಾಶಿಯ ಮೇಲೆ ಅರಮನೆಯನ್ನು ನಿರ್ಮಿಸಿದಂತೆ. ಹಿಂದೂ ವೈಯಕ್ತಿಕ ನೀತಿಸಂಹಿತೆಗೆ ನಾನು ನೀಡಿದ್ದ ಮಹತ್ವ ಇದು.’’ ಸಂವಿಧಾನಶಿಲ್ಪಿಅಂಬೇಡ್ಕರರು ಬೆಟ್ಟುಮಾಡಿದ್ದ ಸಂವಿಧಾನದ ಅಣಕ ಏನಿದೆಯೋ ಅದನ್ನು ಸ್ವಲ್ಪಮಟ್ಟಿಗೆ ಸರಿಪಡಿಸುವ ಯತ್ನವನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ತನ್ನ 28 ಸೆಪ್ಟಂಬರ್ 2018ರ ಶಬರಿಮಲೆ ತೀರ್ಪಿನ ಮೂಲಕ ಮಾಡಿದೆ ಎನ್ನಬಹುದು.

ಆದರೆ ಅಂಬೇಡ್ಕರರು ವಾದಿಸಿದ ಹಾಗೆ ಕೌಟುಂಬಿಕ ಮತ್ತು ನಂಬಿಕೆಗೆ ಸಂಬಂಧಿಸಿದ ವಿಚಾರಗಳಲ್ಲಿ ಕಾನೂನು ರಚಿಸುವುದು ನ್ಯಾಯಾಂಗದ ಕೆಲಸವೇ? ಅದು ಶಾಸಕಾಂಗದ ಹೊಣೆಗಾರಿಕೆ ಅಲ್ಲವೇ ಎಂಬ ಪ್ರಶ್ನೆಗಳಂತೂ ಇದ್ದೇ ಇವೆ. ಇರಲಿ. 1949ರಲ್ಲಿ ಹಿಂದೂ ವೈಯಕ್ತಿಕ ಕಾನೂನುಗಳಿಗೆ ತೀಕ್ಷ್ಣ ಪ್ರತಿರೋಧ ಒಡ್ಡಿದ್ದ ಅದೇ ಸಂಘ ಪರಿವಾರಿಗರು ಇಂದು ಇತಿಹಾಸದ ಪುನರಾವರ್ತನೆ ಮಾಡುತ್ತಿರುವುದನ್ನು ಗಮನಿಸಬೇಕಾಗಿದೆ. ಅಂದಿನಂತೆ ಇಂದು ಕೂಡಾ ಲಿಂಗ ಸಮಾನತೆಯನ್ನು ವಿರೋಧಿಸುವ ಸಂಘ ಪರಿವಾರಿಗರು ಮೂಲತಃ ಮನುಸ್ಮತಿಯೇ ತಮ್ಮ ಕಾನೂನು ಗ್ರಂಥ, ಸಂವಿಧಾನ ಅಲ್ಲ ಎಂಬುದನ್ನು ಪುನರುಚ್ಚರಿಸುತ್ತಿದ್ದಾರೆ. ಸಂಘ ಪರಿವಾರದ ಪುರುಷ ಅಹಂಕಾರಿಗಳು ಆರೆಸ್ಸೆಸ್‌ನಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಿ ಅವರಿಗಾಗಿ ಪ್ರತ್ಯೇಕ ರಾಷ್ಟ್ರೀಯ ಸೇವಿಕಾ ಸಂಘವನ್ನು ರಚಿಸಿರುವುದೇ ಇದಕ್ಕೊಂದು ದೊಡ್ಡ ನಿದರ್ಶನ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ಸಂಘ ಪರಿವಾರದ ತಥಾಕಥಿತ ಧರ್ಮರಕ್ಷಕರು ಬಲಪ್ರಯೋಗದ ಮೂಲಕ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ತಡೆಯುತ್ತಿದ್ದಾರೆ; ಅಂಗಡಿಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದಾರೆ. ‘ಶಬರಿಮಲೆ ಆಚಾರ ಸಂರಕ್ಷಣಾ ಸಮಿತಿ’ ಎಂಬ ಹೆಸರಿನಡಿಯಲ್ಲಿ ಕಾರ್ಯಾಚರಿಸುತ್ತಿರುವ ಈ ಸ್ವಯಂಸೇವಕ, ಸೇವಿಕೆಯರು ಮಹಿಳಾ ಪತ್ರಕರ್ತರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೂ ತಲುಪಿದ್ದಾರೆ.

ಎಂದಿನಂತೆ ಈ ಬಾರಿಯ ವಿಜಯದಶಮಿಯಂದು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಸರಸಂಘಚಾಲಕ ಮೋಹನ್ ಭಾಗವತ್ ‘‘ಭಗವಾ ಧ್ವಜವನ್ನು ಹಾರಿಸುವ ಜನಸಮೂಹವೊಂದು ಮಾಡುವ ಹಕ್ಕೊತ್ತಾಯ ವನ್ನು ಒಪ್ಪಿಕೊಳ್ಳಲೇಬೇಕು; ಇಲ್ಲವಾದರೆ ಅದು ಅಶಾಂತಿ ಹಾಗೂ ಗಲಭೆಗಳನ್ನು ಸೃಷ್ಟಿಸಲಿದೆ..... ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪರಿಣಾಮವಾಗಿ ಅಶಾಂತಿ, ಗಲಭೆ, ಒಡಕು ಉಂಟಾಗಿದೆ..... ಮಹಿಳೆಯರ ಹಕ್ಕುಗಳು, ಸಂವಿಧಾನ, ನ್ಯಾಯಾಂಗಗಳಿಗಿಂತಲೂ ಮುಖ್ಯವಾಗಿರುವುದು ಸಂಪ್ರದಾಯ ಮತ್ತು ನಂಬಿಕೆಗಳು. ಅವುಗಳನ್ನು ಕಡೆಗಣಿಸಿದರೆ ಗಲಭೆಗೆ ಆಹ್ವಾನವಿತ್ತಂತೆ’’ ಎನ್ನುವ ಮೂಲಕ ತಮ್ಮ ಸಂಘಟನೆಯ ನಿಜಬಣ್ಣವನ್ನು ಬಯಲು ಮಾಡಿದ್ದಾರೆ. ಇದೇ ಮೋಹನ್ ಭಾಗವತ್ ಕೆಲವು ವಾರಗಳ ಹಿಂದೆ ಇನ್ನೊಂದು ಸಂದರ್ಭದಲ್ಲಿ ಮಾಡಿದ ಭಾಷಣದಿಂದ ಪ್ರಭಾವಿತರಾಗಿ ಆರೆಸ್ಸೆಸ್ ಬದಲಾಗುತ್ತಿದೆ ಎಂದು ಹೇಳಲಾರಂಭಿಸಿದವರು ಈಗ ನಾಲಿಗೆ ಕಚ್ಚಿಕೊಳ್ಳುವಂತಾಗಿದೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News