ಕೆಂಪು ಕೋಟೆಯಲ್ಲಿ ಬೋಸರ ಛದ್ಮವೇಷ

Update: 2018-10-22 18:31 GMT

ಶಾಲಾ, ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ‘ಛದ್ಮವೇಷ’ ಸ್ಪರ್ಧೆಗಳಿದ್ದವು. ವಿದ್ಯಾರ್ಥಿಗಳು ಭಗತ್ ಸಿಂಗ್, ಸುಭಾಶ್ ಚಂದ್ರಬೋಸ್ ಧಿರಿಸುಗಳನ್ನು ಧರಿಸಿ ‘ಜೈ ಹಿಂದ್’ ಎಂದು ಘೋಷಣೆ ಕೂಗಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದರು. ವೇಷ ಧರಿಸಿದಾಕ್ಷಣ ನಾವು ಸುಭಾಶ್‌ಚಂದ್ರ ಬೋಸ್, ಮಹಾತ್ಮಾಗಾಂಧೀಜಿ ಆಗುವುದಕ್ಕೆ ಸಾಧ್ಯವಿಲ್ಲ. ವೇದಿಕೆಯಿಂದ ಇಳಿದ ಬಳಿಕ ಆ ಧಿರಿಸನ್ನು ಬಿಚ್ಚಿಡಲೇ ಬೇಕು. ಟೋಪಿ ಧರಿಸಿ ಬೋಸ್‌ವಾದಿ, ಕಸಬರಿಕೆ ಹಿಡಿದು ಗಾಂಧಿವಾದಿ, ಪಟೇಲ್ ಶಾಲು ಧರಿಸಿ ಉಕ್ಕಿನ ಮನುಷ್ಯನಾಗಬಹುದು ಎಂದು ಭಾವಿಸಿದರೆ, ಆತನಿನ್ನು ವಿದ್ಯಾರ್ಥಿ ಲೋಕದ ಭ್ರಮೆಯಲ್ಲೇ ಬದುಕುತ್ತಿದ್ದಾನೆ ಎಂದು ಅರ್ಥ ಅಥವಾ ಜನರನ್ನು ಮೂರ್ಖರೆಂದು ಬಗೆದವರೂ ಇಂತಹ ‘ಛದ್ಮವೇಷ’ಗಳ ಮೊರೆಹೋಗುವುದಿದೆ. ಸುಭಾಶ್ಚಂದ್ರ ಬೋಸ್ ಅವರ ‘ಆಜಾದ್ ಹಿಂದ್’ಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರು ಸುಭಾಶ್ ಚಂದ್ರ ಬೋಸರ ಟೋಪಿ ಧರಿಸಿ, ಕೆಂಪುಕೋಟೆಯಲ್ಲಿ ಮಾಡಿದ ಭಾಷಣ ಬಹುತೇಕ ಇಂತಹ ಛದ್ಮವೇಷವನ್ನು ಹೋಲುವಂತಿತ್ತು. ಸ್ವಾತಂತ್ರ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸರ ಪಾತ್ರ ಬಹುದೊಡ್ಡದು. ಅವರು ಮತ್ತು ಅವರ ತಂಡದ ಕೊಡುಗೆಯನ್ನು ಹೊರಗಿಟ್ಟು ಸ್ವಾತಂತ್ರ ಹೋರಾಟವನ್ನು ನೋಡುವುದಕ್ಕೆ ಸಾಧ್ಯವಿಲ್ಲ.

ಅಹಿಂಸಾ ಹೋರಾಟದ ಮೇಲೆ ಸುಭಾಶರಿಗೆ ನಂಬಿಕೆಯಿಲ್ಲದೇ ಇದ್ದಿದ್ದರೂ, ಆಳದಲ್ಲಿ ಗಾಂಧಿ, ನೆಹರೂರಂತಹ ನಾಯಕರ ಮೇಲೆ ಅವರು ಅಪಾರ ಗೌರವವನ್ನು ಇಟ್ಟುಕೊಂಡಿದ್ದರು. ಸ್ವಾತಂತ್ರಕ್ಕಾಗಿ ಬೋಸ್ ಆರಿಸಿಕೊಂಡ ಮಾರ್ಗದ ಕುರಿತಂತೆ ಗಾಂಧೀಜಿಯವರಿಗೆ ಆಕ್ಷೇಪ ಇದ್ದಿದ್ದರೂ, ವೈಯಕ್ತಿಕವಾಗಿ ಬೋಸರ ಬಗ್ಗೆಯೂ ಗಾಂಧೀಜಿ ಅಪಾರ ಗೌರವಹೊಂದಿದ್ದರು. ಸುಭಾಶ್ಚಂದ್ರ ಬೋಸರು ಬ್ರಿಟಿಷರನ್ನು ಓಡಿಸಲು ಆರಿಸಿಕೊಂಡ ಮಾರ್ಗ ಒಂದು ‘ಹುಲಿ ಸವಾರಿ’ಯಾಗಿತ್ತು. ಅವರು ಜರ್ಮನಿಯನ್ನು ಸೇರಿ, ಹಿಟ್ಲರ್‌ನ ಜೊತೆಗೆ ಕೈ ಜೋಡಿಸಿದರು. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್‌ನ ಸೇನೆಯ ಸಹಾಯ ಪಡೆದು ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಸುಭಾಷರ ಗುರಿಯಾಗಿತ್ತು. ಅದಕ್ಕಾಗಿಯೇ ಅವರು ಪ್ರತ್ಯೇಕ ಸೇನೆಯನ್ನು ಕಟ್ಟಿದರು. ಅದೊಂದು ಜಾತ್ಯತೀತ ಸೇನೆಯಾಗಿತ್ತು.

ಹಿಂದೂ, ಮುಸ್ಲಿಮರು ಜೊತೆ ಜೊತೆಯಾಗಿ ಸುಭಾಶರ ಹೋರಾಟಕ್ಕೆ ಹೆಗಲು ಕೊಟ್ಟರು. ನರೇಂದ್ರ ಮೋದಿಯವರು ರವಿವಾರ ಕೆಂಪುಕೋಟೆಯಲ್ಲಿ ಪ್ರಸ್ತಾಪಿಸಿದ‘ಜೈಹಿಂದ್’ ಘೋಷಣೆಯ ಹಿಂದಿರುವವರು ಜೈನುಲ್ ಆಬಿದೀನ್ ಎನ್ನುವ ಸುಭಾಶ್ಚಂದ್ರ ಬೋಸರ ಆಪ್ತ ಸೇನಾನಿ. ಬೋಸರ ಕರೆಗೆ ಓಗೊಟ್ಟು ಇಂಜಿನಿಯರಿಂಗ್ ಕಾಲೇಜು ತೊರೆದು, ನೇರವಾಗಿ ಆಝಾದ್ ಹಿಂದ್‌ನ್ನು ಸೇರಿದವರು. ಸ್ವಾತಂತ್ರಕ್ಕಾಗಿ ಸರ್ವಸ್ವವನ್ನು ತೊರೆದವರು. ಈ ಎಲ್ಲಾ ಹಿನ್ನೆಲೆಯಲ್ಲಿ ಆಝಾದ್ ಹಿಂದ್‌ಗೆ 75ನ್ನು ಸ್ಮರಿಸುವುದು ದೇಶದ ಕರ್ತವ್ಯ. ಆದರೆ ಕೆಂಪುಕೋಟೆಯಲ್ಲಿ ನರೇಂದ್ರ ಮೋದಿಯವರು ಬೋಸರ ನೆನಪನ್ನು ನೆಹರೂ ವಿರುದ್ಧ ಎತ್ತಿಕಟ್ಟಲು ಬಳಸಿದರೋ ಎಂದು ಅನುಮಾನ ಪಡುವಂತಿತ್ತು ಅವರ ಭಾಷಣ. ‘ಬೋಸರ ತ್ಯಾಗ, ಬಲಿದಾನವನ್ನು ನೆನೆಯುತ್ತಾ, ಈ ದೇಶದಲ್ಲಿ ಒಂದು ಕುಟುಂಬವನ್ನಷ್ಟೇ ವೈಭವೀಕರಿಸಲಾಗುತ್ತಿದೆ’ ಎಂಬಂತಹ ಹೇಳಿಕೆಗಳನ್ನು ನೀಡಿದರು. ನೆಹರೂ ವಂಶವನ್ನು ಅನಗತ್ಯವಾಗಿ ಆ ಸಮಾರಂಭದಲ್ಲಿ ಎಳೆದು ತಂದು, ಸುಭಾಶರ ಸ್ಮರಣೆಯನ್ನು ರಾಜಕೀಯ ಗೊಳಿಸಿದರು.

 ಈ ದೇಶ ಬರೇ ನೆಹರೂ ಅವರ ಶ್ರಮದಿಂದಷ್ಟೇ ನಿಂತಿದೆ ಎಂದು ಯಾರೂ ನಂಬಿಲ್ಲ. ಸುಭಾಶ್ಚಂದ್ರ ಬೋಸ್ ಮತ್ತು ನೆಹರು ಇವರಿಬ್ಬರದೂ ಬೇರೆ ಬೇರೆ ವ್ಯಕ್ತಿತ್ವ. ಸುಭಾಶ್ಚಂದ್ರ ಬೋಸ್ ಅವರು ಸ್ವಾತಂತ್ರಕ್ಕಾಗಿ ಆಯ್ಕೆ ಮಾಡಿದ ದಾರಿ ದೂರದೃಷ್ಟಿಯಿಂದ ಕೂಡಿರಲಿಲ್ಲ. ಹಿಟ್ಲರ್ ಸರ್ವಾಧಿಕಾರಿಯಾಗಿದ್ದ. ಒಬ್ಬ ಸರ್ವಾಧಿಕಾರಿಯ ಮೂಲಕ ಇನ್ನೊಬ್ಬ ಸರ್ವಾಧಿಕಾರಿಯನ್ನು ಓಡಿಸಿ ‘ಸ್ವಾತಂತ್ರ’ವನ್ನು ತನ್ನದಾಗಿಸಿಕೊಳ್ಳಬಹುದು ಎನ್ನುವ ನಂಬಿಕೆಯೇ ವಿರೋಧಾಭಾಸಗಳಿಂದ ಕೂಡಿದ್ದು. ಅದಾಗಲೇ ಯಹೂದಿಗಳ ಮಾರಣ ಹೋಮಕ್ಕೆ ಕುಖ್ಯಾತನಾಗಿದ್ದ ಹಿಟ್ಲರ್‌ನ ಜೊತೆಗೆ ಬೋಸರು ಕೈಜೋಡಿಸಿದ್ದು, ಅವರ ಹೋರಾಟದ ಕುರಿತ ವಿಶ್ವಾಸಾರ್ಹತೆಯನ್ನು ಕುಂದಿಸಿತ್ತು. ಬೋಸ್ ಅವರು ಸರ್ವಾಧಿಕಾರದ ಕುರಿತಂತೆ ಮೃದು ನಿಲುವನ್ನು ಹೊಂದಿದ್ದರು ಎನ್ನುವುದು, ಅವರ ಬೇರೆ ಬೇರೆ ಹೇಳಿಕೆಗಳಿಂದಲೇ ವ್ಯಕ್ತವಾಗುತ್ತದೆ. ಭಾರತ ಸ್ವತಂತ್ರಗೊಂಡ ಬಳಿಕವೂ ಕೆಲವು ವರ್ಷಗಳ ಕಾಲ ಅದು ಪ್ರಜಾಸತ್ತಾತ್ಮಕ ಆಡಳಿತಕ್ಕೆ ಅರ್ಹವಲ್ಲ ಎಂದು ಅವರು ನಂಬಿದ್ದರು.

ಹಾಗೆಯೇ ತನ್ನ ಮಾರ್ಗದಲ್ಲಿ ಸುಭಾಶರು ಸಂಪೂರ್ಣ ವಿಫಲರಾದರು. ನೆಹರೂ ಅವರು ಸ್ವಾತಂತ್ರಕ್ಕಾಗಿ ಹೋರಾಡಿದವರು ಮಾತ್ರವಲ್ಲ, ಸ್ವಾತಂತ್ರಾನಂತರದ ಭಾರತದ ಶಿಲ್ಪಿ ಅವರು. ಈ ದೇಶವನ್ನು ಕೃಷಿ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನದೆಡೆಗೆ ಮುನ್ನಡೆಸಿದವರು. ಆಂತರಿಕ ಕಲಹಗಳಿಂದ ತತ್ತರಿಸಿದ್ದ ಭಾರತವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದವರು. ಇವರಿಬ್ಬರನ್ನೂ ಮುಖಾಮುಖಿಗೊಳಿಸುವುದು, ಪರಸ್ಪರ ಎತ್ತಿ ಕಟ್ಟಿ ತನ್ನ ರಾಜಕೀಯ ಹಿತಾಸಕ್ತಿಯನ್ನು ಸಾಧಿಸುವುದು ಪ್ರಧಾನಿ ಸ್ಥಾನದಲ್ಲಿರುವವರಿಗೆ ಭೂಷಣವಲ್ಲ. ಇಷ್ಟಕ್ಕೂ ಸುಭಾಶ್ಚಂದ್ರ ಬೋಸರು, ಅಝಾದ್ ಹಿಂದ್‌ಗೆ ಸೇನೆಯನ್ನು ಕಟ್ಟುತ್ತಿದ್ದಾಗ, ಅದರಲ್ಲಿ ಪಾಲುಗೊಳ್ಳದಂತೆ ಭಾರತೀಯವರನ್ನು ತಡೆದವರಲ್ಲಿ ಹಿಂದೂ ಮಹಾಸಭಾ ಸೇರಿದೆ. ವಿನಾಯಕ ದಾಮೋದರ ಸಾವರ್ಕರ್ ಸೇರಿದಂತೆ, ಹಿಂದುತ್ವವಾದಿ ನಾಯಕರು ಎಂದಿಗೂ ಸುಭಾಶರ ಜೊತೆಗೆ ಕೈ ಜೋಡಿಸಲಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಇತಿಹಾಸವೇ ಅವರಿಗಿಲ್ಲ. ಇಂತಹ ಸಂಘಟನೆಯನ್ನು ದೇಶಪ್ರೇಮಿ ಸಂಘಟನೆ ಎಂದು ಬಹಿರಂಗವಾಗಿ ಕೊಂಡಾಡುತ್ತಾ, ಪ್ರಧಾನಿ ಮೋದಿಯವರು ಸುಭಾಶರ ಟೋಪಿ ಧರಿಸಿ ಭಾಷಣ ಬಿಗಿದರೆ ಅದು ಸುಬಾಷರಿಗೆ ಸಲ್ಲಿಸುವ ಗೌರವವಾಗುವುದಿಲ್ಲ.

ಸರ್ದಾರ್ ವಲ್ಲಭಭಾಯ್ ಪಟೇಲರನ್ನೇ ತೆಗೆದುಕೊಳ್ಳೋಣ. ಬೃಹತ್ ಪ್ರತಿಮೆಯೊಂದನ್ನು ನಿರ್ಮಾಣ ಮಾಡಿ, ತಾನು ಪಟೇಲರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಸರಕಾರ ಹೇಳಿಕೊಳ್ಳುತ್ತಿದೆ. ಪಟೇಲರು ಗಾಂಧೀಜಿಯ ಜೊತೆಗೆ ಗುರುತಿಸಿಕೊಂಡವರು. ಗಾಂಧೀಜಿಯ ಅಹಿಂಸೆಯ ತಳಹದಿಯಲ್ಲಿ ದೇಶವನ್ನು ಕಟ್ಟಿ ನಿಲ್ಲಿಸಲು ಬಯಸಿದ್ದರು. ಅಹಿಂಸೆಯ ಕುರಿತಂತೆ ಮೋದಿ ನಿಲುವು ಏನು ಎನ್ನುವುದು ಇಡೀ ಜಗತ್ತಿಗೆ ತಿಳಿದಿದೆ. ಪಟೇಲರು ನೆಹರೂ ನೇತೃತ್ವದಲ್ಲಿ ಈ ದೇಶವನ್ನು ಭಾವನಾತ್ಮಕವಾಗಿಯೂ, ಭೌಗೋಳಿಕವಾಗಿಯೂ ಒಂದುಗೂಡಿಸಿದರು. ಆದರೆ ಮೋದಿಯ ಬೆನ್ನಿಗೆ ನಿಂತಿರುವ ಆರೆಸ್ಸೆಸ್ ಈ ದೇಶವನ್ನು ಧರ್ಮದ ಹೆಸರಲ್ಲಿ, ಭಾಷೆಯ ಹೆಸರಲ್ಲಿ ಒಡೆಯುವುದಕ್ಕೆ ನೋಡುತ್ತಿದೆ. ಗಾಂಧೀಜಿಯ ಹತ್ಯೆಯ ಬಳಿಕ ಆರೆಸ್ಸೆಸ್‌ನ್ನು ನಿಷೇಧಿಸಿದವರು ಪಟೇಲ್. ಬಳಿಕ ಆರೆಸ್ಸೆಸ್ ‘ಸಾಂಸ್ಕೃತಿಕವಾಗಿ ಮಾತ್ರ ತೊಡಗಿಕೊಳ್ಳುತ್ತೇನೆ’ ಎಂದು ಪಟೇಲರಿಗೆ ವಚನಕೊಟ್ಟು ನಿಷೇಧವನ್ನು ಹಿಂದೆಗೆಸಿತು.

ಇಂದು ಆರೆಸ್ಸೆಸ್ ಪಟೇಲರಿಗೆ ನೀಡಿದ ವಚನವನ್ನು ಮುರಿದಿದೆ. ಮೋದಿಯವರು ನಿರ್ಮಿಸಿರುವ ಪ್ರತಿಮೆ, ಪಟೇಲರ ವೌಲ್ಯಗಳ ಗೋರಿಯ ಮೇಲೆ ನಿಲ್ಲಿಸಬಹುದಾದ ಶಿಲುಬೆಯೇ ಹೊರತು, ಅದು ಯಾವ ರೀತಿಯಲ್ಲೂ ಪಟೇಲರಿಗೆ ಗೌರವ ನೀಡಲಾರದು. ಮೋದಿಯವರಿಗೆ ಬೋಸ್, ಪಟೇಲರಂತಹ ನಾಯಕರ ಮೇಲೆ ನಿಜಕ್ಕೂ ಗೌರವವಿದ್ದರೆ, ಅವರು ಮೊದಲು ಮಾಡಬೇಕಾದುದು, ಈ ದೇಶದ ಕೋಮುವಾದಿ ಸಂಘಟನೆಗಳನ್ನು ನಿಯಂತ್ರಿಸುವುದು. ಗಾಂಧೀಜಿಯನ್ನು ಸ್ಮರಿಸುವುದೆಂದರೆ, ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರಗಳಿಗೆ ಮೂಗುದಾರ ತೊಡಿಸುವುದು. ಎದೆಯಲ್ಲಿ ಸಾವರ್ಕರ್ ಚಿಂತನೆಯನ್ನು ತುಂಬಿಕೊಂಡು, ತಲೆಯ ಮೇಲೆ ಸುಭಾಶರ ಟೋಪಿ, ಕೈಯಲ್ಲಿ ಗಾಂಧೀಜಿಯ ಪೊರಕೆ, ಹೆಗಲಲ್ಲಿ ಪಟೇಲರ ಶಾಲು ಧರಿಸಿ ಯಾವ ಪ್ರಯೋಜನವೂ ಇಲ್ಲ. ದೇಶದ ಜನರು ಅದನ್ನು ಛದ್ಮವೇಷವೆಂದು ಸ್ವೀಕರಿಸಿ ಚಪ್ಪಾಳೆಯನ್ನಷ್ಟೇ ತಟ್ಟಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News