ಮುಂಬೈ: ಐದು ವರ್ಷದಲ್ಲಿ ರೈಲಿಗೆ ಬಲಿಯಾದವರೆಷ್ಟು ಗೊತ್ತೇ?

Update: 2018-10-23 04:05 GMT

ಮುಂಬೈ, ಅ.23: ಅಮೃತಸರ ರೈಲು ದುರಂತದ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದ್ದರೆ, ದೇಶದ ವಾಣಿಜ್ಯ ರಾಜಧಾನಿ ಎನಿಸಿರುವ ಮುಂಬೈಯಲ್ಲಿ ರೈಲು ಸಂಬಂಧಿತ ಅಪಘಾತದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ 18,423 ಮಂದಿ ಬಲಿಯಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಶಕೀಲ್ ಅಹ್ಮದ್ ಎಂಬುವವರು ಕೇಳಿದ ಪ್ರಶ್ನೆಗೆ ರೈಲ್ವೆ ಇಲಾಖೆ ನೀಡಿರುವ ಮಾಹಿತಿಯಿಂದ ಈ ಅಂಶ ಬಹಿರಂಗವಾಗಿದೆ.

2013ರ ಜನವರಿಯಿಂದ 2018ರ ಆಗಸ್ಟ್‌ವರೆಗೆ 18,423 ಮಂದಿ ರೈಲು ಅಪಘಾತಗಳಲ್ಲಿ ಮೃತಪಟ್ಟಿದ್ದು, 18,847 ಮಂದಿ ಗಾಯಗೊಂಡಿದ್ದಾರೆ ಎಂದು ಮುಂಬೈ ರೈಲ್ವೆ ಪೊಲೀಸ್ ಕಮಿಷನರ್ ಕಚೇರಿ ಸ್ಪಷ್ಟಪಡಿಸಿದೆ. ಪ್ರಯಾಣಿಕರು ರೈಲಿನಿಂದ ಬಿದ್ದಿರುವುದು, ಕಂಬಕ್ಕೆ ಢಿಕ್ಕಿ ಹೊಡೆದದ್ದು, ರೈಲು ಹಳಿಗಳನ್ನು ದಾಟುವಾಗ ಮೃತಪಟ್ಟದ್ದು ಮತ್ತು ರೈಲಿನ ಚಾವಣಿ ಮೇಲೆ ಕುಳಿತು ಪ್ರಯಾಣಿಸುವಾಗ ನಡೆದ ಅವಘಡಗಳು ಸೇರಿವೆ.

2013ರಲ್ಲಿ ರೈಲು ಸಂಬಂಧಿ ಅವಘಡಗಳಲ್ಲಿ 3,506 ಮಂದಿ ಮೃತಪಟ್ಟಿದ್ದರೆ, 2014ರಲ್ಲಿ ಈ ಸಂಖ್ಯೆ 3,423 ಆಗಿತ್ತು. 2015ರಲ್ಲಿ 3,304, 2016ರಲ್ಲಿ 3,202 ಮತ್ತು 2017ರಲ್ಲಿ 3,014 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ವರ್ಷದ ಮೊದಲ ಎಂಟು ತಿಂಗಳಲ್ಲಿ 1,974 ಮಂದಿ ಬಲಿಯಾಗಿದ್ದಾರೆ.

"ರೈಲ್ವೆ ಆವರಣದಲ್ಲಿ ಆಗುವ ಆಕಸ್ಮಿಕಗಳನ್ನು ತಡೆಯಲು ಎಫ್‌ಓಬಿ ನಿರ್ಮಾಣ, ಫೆನ್ಸಿಂಗ್, ಅಪಘಾತ ಸಂಭಾವ್ಯ ಸ್ಥಳದ ವೈಮಾನಿಕ ಸಮೀಕ್ಷೆ ನಡೆಸುವುದು ಮತ್ತು ಪ್ರಯಾಣಿಕರ ಕೌನ್ಸಿಲಿಂಗ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರಿಂದಾಗಿ ಬಲಿಯಾಗುವವರ ಸಂಖ್ಯೆ ಇಳಿಯುತ್ತಿದೆ" ಎಂದು ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ರವೀಂದ್ರ ಭಾಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News