ನನಗೆ ಬೈದರೆ ಕುರುಬ ಸಮುದಾಯಕ್ಕೆ ಬೈದಂತೆಯೇ?: ಶ್ರೀರಾಮುಲುಗೆ ಸಿದ್ದರಾಮಯ್ಯ ಪ್ರಶ್ನೆ
ಬಳ್ಳಾರಿ, ಅ. 23: ‘ಶಾಸಕ ಶ್ರೀರಾಮುಲು ಅವರನ್ನು ನಾನು ಬೈದರೆ ಅವರು ಜಾತಿಯನ್ನು ಎತ್ತಿಕಟ್ಟುತ್ತಿದ್ದಾರೆ. ನಾಯಕ ಸಮುದಾಯವನ್ನು ನಿಂದನೆ ಮಾಡಿದ್ದಾರೆ ಎನ್ನುತ್ತಾರೆ. ಆದರೆ, ಅವರು ನನಗೆ ಬೈದರೆ ಇಡೀ ಕುರುಬ ಸಮುದಾಯಕ್ಕೆ ಬೈದಂತೆಯೇ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬುಧವಾರ ಇಲ್ಲಿನ ಸಂಡೂರಿನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಮಿಸ್ಟರ್ ಶ್ರೀರಾಮುಲು ಅವರೇ ನಾಯಕ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು ಎಂಬುದನ್ನು ನೀವೇ ಹೇಳಬೇಕು ಎಂದು ಖಾರವಾಗಿ ಕೇಳಿದರು.
ನಾನು ವಿಪಕ್ಷ ನಾಯಕನಾಗಿದ್ದಾಗ ಸಂಡೂರಿಗೆ ಬಂದಿದ್ದಾಗ ಗಾಲಿ ಜನಾರ್ದನ ರೆಡ್ಡಿ ಗುಂಪು ಗೂಂಡಾಗಳನ್ನು ಕಳಿಸಿದ್ದರು. ರೆಡ್ಡಿ ಸಹೋದರರಿಗೆ ಹೆದರಿ ಅಧಿಕಾರಿಗಳು ಮತ್ತು ಪೊಲೀಸರು ನಮ್ಮ ಜೊತೆ ಬಂದಿರಲಿಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ವಾಗ್ದಾಳಿ ನಡೆಸಿದರು.
ನಾನು ಅಂದು ಸಂಡೂರಿಗೆ ಬಂದಾಗ ಇಲ್ಲಿನ ಜನ ಜೀವಭಯದಲ್ಲಿದ್ದರು. ಬಳ್ಳಾರಿಯಲ್ಲಿ ಸಭೆ ನಡೆಸಲು ಜಾಗವೂ ದೊರಕಲಿಲ್ಲ ಎಂದ ಅವರು, ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ 371‘ಜೆ’ ಬಗ್ಗೆ ಗೊತ್ತಿಲ್ಲ. ಆದರೆ, ಅಪರಾಧ ಕಾಯ್ದೆಗಳು ಗೊತ್ತಿದೆ ಎಂದರೆ ತಪ್ಪೇನು ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.