×
Ad

ಸರ್ಕಾರದ ವತಿಯಿಂದಲೇ ಟಿಪ್ಪು ಜಯಂತಿ ಆಚರಿಸಬೇಕು: ಮಾಜಿ ಪರಿಷತ್ ಸದಸ್ಯ ಪುಟ್ಟಸಿದ್ದಶೆಟ್ಟಿ

Update: 2018-10-23 23:15 IST

ಮೈಸೂರು,ಅ.23: ಯಾರು ಎಷ್ಟೇ ವಿರೋಧಿಸಿದರೂ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸಬೇಕು. ಇಲ್ಲದಿದ್ದಲ್ಲಿ ಜನರ ನ್ಯಾಯಾಲಯದ ಬಳಿಗೆ ಹೋಗುವುದರ ಜೊತೆಗೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾವುದೆಂದು ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದೆ ಶೋಭ ಕರಂದ್ಲಾಜೆ ಅವರು ಟಿಪ್ಪು ಜಯಂತಿ ವಿರೋಧಿಸುತ್ತಿರುವುದು ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ತರುವ ನಿಟ್ಟಿನಲ್ಲಿ ಸಂಘ ಪರಿವಾರದ ಒಬ್ಬರಾದರೂ ಜೈಲಿಗೆ ಹೋದ ಉದಾಹರಣೆ ಇಲ್ಲದಿರುವ ವೇಳೆ, ದೇಶದಿಂದಲೇ ಬ್ರಿಟಿಷರನ್ನು ಹೊಡೆದೋಡಿಸಬೇಕೆಂದ ಟಿಪ್ಪು ದೇಶ ದ್ರೋಹಿಯೇ ಎಂದು ಪ್ರಶ್ನಿಸಿದರು.

ಅಲ್ಲದೆ, ರಾಷ್ಟ್ರದಲ್ಲಿ ಮತೀಯವಾದಿಗಳು, ಕೋಮುವಾದಿಗಳೆಲ್ಲ ಪ್ರಗತಿಪರರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದರಲ್ಲಿ ನಿರತರಾಗಿದ್ದು, ಚಿಂತಕರ ಹತ್ಯೆ ನಿರಂತವಾಗಿ ನಡೆಯುತ್ತಿದೆ. ಈ ರೀತಿ ಕಲ್ಬುರ್ಗಿ, ಗೌರಿ ಲಂಕೇಶ್ ಮೊದಲಾದವರ ಹತ್ಯೆ ನಡೆದಿದ್ದು, ಅವರ ಹಿಟ್‍ಲಿಸ್ಟ್‍ನಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ, ಕೆ.ಎಸ್. ಭಗವಾನ್, ನಿಡುಮಾಮಿಡಿ ಶ್ರೀ, ಮಹೇಶ್‍ ಚಂದ್ರಗುರು ಮೊದಲಾದವರು ಇದ್ದಾರೆ. ಸರ್ಕಾರ ಇವರಿಗೆ ಗನ್‍ಮ್ಯಾನ್ ಒದಗಿಸಿದರೂ ಇವರೆಷ್ಟು ದಿನ ಜೀವ ಕಾಯಬಲ್ಲರೆಂದು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಎಲ್ಲ ಸತ್ಯ ತಿಳಿದಿದ್ದರೂ ಅವರು ಮೌನವಾಗಿರುವುದನ್ನು ಗಮನಿಸಿದರೆ, ಇದಕ್ಕೆಲ್ಲ ಅವರ ಸಮ್ಮತಿ ಇದೆ ಎಂದೇ ಅರ್ಥ ಎಂದು ಖಾರವಾಗಿ ಟೀಕಿಸಿದರು.

ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅಸಹಿಷ್ಣತೆ ಹೆಚ್ಚಾಗಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದ ಅವರು, ಪ್ರಗತಿಪರರು ಒಳ್ಳೆಯದಲ್ಲದ ಇಂತಹ ಪರಿಸ್ಥಿತಿ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದರು.

ಸರ್ಕಾರ ಗೌರಿ ಲಂಕೇಶ್ ಹತ್ಯೆ ಮಾಡಿದವರ ವಿಚಾರಣೆ ತ್ವರಿತಗೊಳಿಸಿ ಕೂಡಲೇ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು. ಎಸ್‍ಸಿ, ಎಸ್‍ಟಿ ಮುಂಬಡ್ತಿ ಕಾಯ್ದೆ ಜಾರಿಗೊಳಿಸಬೇಕು. ದಲಿತರ ಮೇಲಿನ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಬಲಗೊಳಿಸಬೇಕು. ಮೈಸೂರು ವಿವಿಗೆ ಕಾಯಂ ಕುಲಪತಿ ನೇಮಕಗೊಳಿಸಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೋರಪ್ಪಶೆಟ್ಟಿ, ಸಂಪತ್, ಮಧು, ಕುಮಾರಶೆಟ್ಟಿ ಸೇರಿದಂತೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News