ಪಂಜರದೊಳಗಿದ್ದೇ ಕೇಂದ್ರಕ್ಕೆ ಕುಕ್ಕಿದ ಸಿಬಿಐ ಗಿಳಿ

Update: 2018-10-24 03:54 GMT

ಕೇಂದ್ರದ ಪಂಜರದೊಳಗಿರುವ ಗಿಳಿಯೆಂದೇ ವ್ಯಂಗ್ಯಕ್ಕೀಡಾಗಿರುವ ಸಿಬಿಐ ಇಲಾಖೆಯೊಳಗೆ ಸಣ್ಣದೊಂದು ಬಿರುಗಾಳಿ ಎದ್ದಿದೆ. ಗಿಳಿಗಳೇ ಪರಸ್ಪರ ಕಚ್ಚಾಟಕ್ಕಿಳಿದಿವೆ ಮತ್ತು ಕೇಂದ್ರ ಸರಕಾರ ಇವರ ನಡುವೆ ಮಧ್ಯಸ್ಥಿಕೆ ನಡೆಸುವುದಕ್ಕೆ ಆತುರವಾಗಿದೆ. ಆದರೆ ಆಳದಲ್ಲಿ ಇದು ಸಿಬಿಐ ಅಧಿಕಾರಿಗಳ ನಡುವೆ ನಡೆಯುತ್ತಿರುವ ತಿಕ್ಕಾಟವಲ್ಲ, ಸಿಬಿಐ ಮತ್ತು ಸರಕಾರದ ನಡುವೆ ನಡೆಯುತ್ತಿರುವ ತಿಕ್ಕಾಟವಾಗಿದೆ. ಸಿಬಿಐಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಸರಕಾರದ ಪ್ರಯತ್ನದ ಪರಿಣಾಮ ಇಂದು ಇಲಾಖೆಯೊಳಗಿನ ಅಧಿಕಾರಿಗಳೇ ಪರಸ್ಪರ ಸಂಘರ್ಷಕ್ಕಿಳಿಯುವಂತಾಗಿದೆ. ಸಿಬಿಐ ಅಧಿಕಾರಿಗಳ ನಡುವೆ ಸಮನ್ವಯವನ್ನು ಸೃಷ್ಟಿಸುವ ಕೇಂದ್ರದ ಪ್ರಯತ್ನ ಅಂತಿಮವಾಗಿ, ಸಿಬಿಐಯೊಳಗಿರುವ ತನ್ನ ಪರವಾಗಿರುವ ಅಧಿಕಾರಿಗಳನ್ನು ರಕ್ಷಿಸುವ ದುರುದ್ದೇಶವನ್ನು ಹೊಂದಿದೆ.

ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿಕೊಂಡಿರುವ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರ ವಿರುದ್ಧದ ಬಹುಕೋಟಿ ಲಂಚ ಪ್ರಕರಣದ ತನಿಖೆಯು ನಡೆಯುತ್ತಿರುವುದರಿಂದ ಅವರನ್ನು ಅಮಾನತಿ ನಲ್ಲಿರಿಸಬೇಕೆಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಪ್ರಧಾನಿ ಕಾರ್ಯಾಲಯಕ್ಕೆ ಶಿಫಾರಸು ಮಾಡಿದ್ದಾರೆ. ಅಸ್ತಾನಾ ಅವರು ಸಿಬಿಐನಲ್ಲಿ ಸೇವೆ ಸಲ್ಲಿಸಲು ‘ಅಯೋಗ್ಯ’ರಾಗಿದ್ದು, ಅವರು ಈ ಹಿಂದೆ ಸೇವೆ ಸಲ್ಲಿಸಿದ್ದ ಗುಜರಾತ್ ಕೇಡರ್‌ಗೆ ಅವರನ್ನು ಮರಳಿ ನಿಯೋಜಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅಸ್ತಾನಾ ಕುರಿತಾಗಿ ಅಲೋಕ್ ಕುಮಾರ್ ವರ್ಮಾ ಅವರು ಪಿಎಂಒಗೆ ಪತ್ರ ಬರೆಯುವ ಮೂಲಕ ಪ್ರಧಾನಿಯವರನ್ನು ಈ ವಿಷಯದಲ್ಲಿ ಉತ್ತರದಾಯಿಯಾಗುವಂತೆ ಮಾಡಿದ್ದಾರೆ. ಇದೀಗ ಪ್ರಧಾನಿ ಮೋದಿಯವರು ಒಟ್ಟು ಬೆಳವಣಿಗೆಗಳ ಕುರಿತಂತೆ ತನ್ನ ನಿಲುವನ್ನು ಪ್ರಕಟಪಡಿಸಲೇಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿದೆ.

ವರ್ಮಾ ಅವರು ರವಿವಾರ ಬೆಳಗ್ಗೆ ಪ್ರಧಾನಿಯವರನ್ನು ಭೇಟಿಯಾಗಿದ್ದರು. ಆನಂತರ ಅಂದು ಸಂಜೆ ಅವರಿಗೆ ಪತ್ರವನ್ನು ಬರೆದಿದ್ದರು. ಅಸ್ತಾನಾ ಆರೋಪಗಳ ಕುರಿತ ತನಿಖೆಯನ್ನು ಚುರುಕುಗೊಳಿಸದಿದ್ದಲ್ಲಿ ಬೇಹುಗಾರಿಕಾ ಸಂಸ್ಥೆ ರಾ ಸೇರಿದಂತೆ ದೇಶದ ಇತರ ತನಿಖಾ ಹಾಗೂ ಭದ್ರತಾ ಸಂಸ್ಥೆಗಳಿಗೂ ಭ್ರಷ್ಟಾಚಾರದ ಸೋಂಕು ಹರಡಲಿದೆ ಎಂದು ವರ್ಮಾ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಒಬ್ಬ ಉನ್ನತ ಸಂಸ್ಥೆಯ ಅಧಿಕಾರಿ ವ್ಯಕ್ತಪಡಿಸಿರುವ ಆತಂಕದ ಹಿಂದೆ, ಈ ದೇಶದ ಆಂತರಿಕ ಭದ್ರತೆಯೂ ತಳಕು ಹಾಕಿಕೊಂಡಿದೆ ಎನ್ನುವುದನ್ನು ಪ್ರಧಾನಿ ಮರೆಯಬಾರದು. ಈ ಕಾರಣಕ್ಕೆ ವರ್ಮಾ ಅವರ ಪತ್ರವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸಿಬಿಐ ಸಂಸ್ಥೆಯೊಳಗಿನ ಸದ್ಯದ ಸ್ಥಿತಿಗೆ ನೇರವಾಗಿ ಕೇಂದ್ರ ಸರಕಾರವೇ ಹೊಣೆಯಾಗಿದೆ. ವರ್ಮಾ ಅವರು ಜನವರಿಯಲ್ಲಿ ನಿವೃತ್ತರಾಗಲಿದ್ದು, ಮೋದಿ ಹಾಗೂ ಅಮಿತ್ ಶಾ ಅವರು ಅಪ್ತರಾಗಿರುವ ಅಸ್ತಾನಾ ಅವರನ್ನು ಆ ಹುದ್ದೆಗೆ ನೇಮಿಸಲು ತೆರೆಮರೆಯಲ್ಲಿ ಭಾರೀ ಪ್ರಯತ್ನಗಳು ನಡೆಯುತ್ತಿವೆ.

ಸಿಬಿಐ ನಿರ್ದೇಶಕರಾಗಿ ವರ್ಮಾ ಅವರ ನೇಮಕಕ್ಕೂ ಮೊದಲೇ ಅಸ್ತಾನಾ ಅವರನ್ನು ಕೆಲವು ತಿಂಗಳುಗಳ ಹಿಂದೆ ಸಿಬಿಐನ ವಿಶೇಷ ನಿರ್ದೇಶಕರಾಗಿ ನಿಯೋಜಿಸಲಾಗಿತ್ತು.ಸಿಬಿಐಯು ಹೈದರಾಬಾದ್ ಮೂಲದ ಉದ್ಯಮಿ ಸತೀಶ್ ಬಾಬು ಸಾನಾ ಅವರು ಸಲ್ಲಿಸಿದ ದೂರನ್ನು ಆಧರಿಸಿ ಅಸ್ತಾನಾ ವಿರುದ್ಧ ಅಕ್ಟೋಬರ್ 15ರಂದು ಪ್ರಥಮ ಮಾಹಿತಿ ವರದಿ(ಎಫ್‌ಐಆರ್)ಯೊಂದನ್ನು ದಾಖಲಿಸಿತ್ತು. ಪ್ರಕರಣದ ಇನ್ನೋರ್ವ ಆರೋಪಿಯಾದ ದುಬೈ ಮೂಲದ ಹೂಡಿಕೆ ಬ್ಯಾಂಕರ್ ಮನೋಜ್ ಪ್ರಸಾದ್‌ನನ್ನು ಈಗಾಗಲೇ ಬಂಧಿಸಲಾಗಿದೆ. ವಿವಾದಾತ್ಮಕ ಮಾಂಸ ರಫ್ತು ಮೊಯಿನ್ ಖುರೇಷಿ ಪ್ರಕರಣದಲ್ಲಿ ತಾನು ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ಸಿಬಿಐ ವಿಶೇಷ ನಿರ್ದೇಶಕ ಅಸ್ತಾನಾ ಅವರಿಗೆ 5 ಕೋಟಿ ಲಂಚ ನೀಡಿರುವುದಾಗಿ ಸಾನಾ ಸತೀಶ್ ಬಾಬು ಆಪಾದಿಸಿದ್ದರು. ದುಬೈ ಮೂಲದ ಸಹೋದರರಾದ ಮನೋಜ್ ಪ್ರಸಾದ್ ಹಾಗೂ ಸೋಮೇಶ್ ಪ್ರಸಾದ್ ಮೂಲಕ ಸಿಬಿಐ ನಿರ್ದೇಶಕರೊಂದಿಗೆ ಈ ಒಪ್ಪಂದ ಏರ್ಪಟ್ಟಿತ್ತು ಎಂದು ಸಾನಾ ದೂರಿದ್ದರು. ಸಾನಾ ಅವರಿಂದ 3 ಕೋಟಿ ಲಂಚವನ್ನು ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿ ಉಪ ಮಹಾನಿರೀಕ್ಷಕ ದೇವೇಂದರ್ ಕುಮಾರ್ ಅವರನ್ನು ಸಿಬಿಐ ಬಂಧಿಸಿತ್ತು.

ಇಷ್ಟೆಲ್ಲ ಆದ ಬಳಿಕವೂ ಕೇಂದ್ರ ಸರಕಾರ ಪರೋಕ್ಷವಾಗಿ ಆಸ್ತಾನಾ ಅವರನ್ನು ರಕ್ಷಿಸಲು ಯತ್ನಿಸುತ್ತಿದೆ. ಹೇಗೆ ರಾಜಕೀಯ ಹಸ್ತಕ್ಷೇಪ ಒಂದು ಸ್ವತಂತ್ರ ಇಲಾಖೆಯನ್ನು ಭ್ರಷ್ಟಗೊಳಿಸಬಹುದು, ಅದರ ವಿಶ್ವಾಸಾರ್ಹತೆಯನ್ನು ಇಲ್ಲವಾಗಿಸಬಹುದು ಎನ್ನುವುದಕ್ಕೆ ಸದ್ಯದ ಬೆಳವಣಿಗೆಗಳು ಸಾಕ್ಷಿಯಾಗಿವೆ. ಸಿಬಿಐಯ ಘನತೆ ಯಾವತ್ತೂ ಈ ಮಟ್ಟಕ್ಕೆ ಕುಗ್ಗಿರಲಿಲ್ಲ. ವರ್ಮಾ ಅವರು ಸಿಬಿಐನ ಕಾರ್ಯನಿರ್ವಹಣೆಯಲ್ಲಿ ಸಂವಿಧಾನೇತರ ವ್ಯಕ್ತಿಗಳ ಹಸ್ತಕ್ಷೇಪವನ್ನು ತಡೆಯಲು ಯತ್ನಿಸುತ್ತಾ ಬಂದಿದ್ದಾರೆ. ರಾಜಕೀಯ ದುರುದ್ದೇಶಗಳಿಗೆ ಸಿಬಿಐ ಬಲಿಯಾಗದಂತೆ ಸಾಕಷ್ಟು ಜಾಗ್ರತೆ ವಹಿಸುತ್ತ ಬಂದವರು ವರ್ಮಾ. ಆದರೆ ಇದೇ ಸಂದರ್ಭದಲ್ಲಿ ಅಸ್ತಾನಾ ಅವರು ಮೋದಿ ಬಳಗದ ಹಿತಾಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡಲು ಶ್ರಮಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಪ್ರಧಾನಿ ಕಾರ್ಯಾಲಯದ ಉನ್ನತ ಅಧಿಕಾರಿಗಳು ಆಸ್ತಾನ ಅವರನ್ನು ಬೆಂಬಲಿಸುತ್ತಿರುವ ಕುರಿತಂತೆಯೂ ಸಿಬಿಐಯೊಳಗೆ ವ್ಯಾಪಕ ಅಸಮಾಧಾನಗಳಿವೆ.

ಪ್ರತಿಪಕ್ಷ ನಾಯಕರನ್ನು ಬೆದರಿಸಲು ಸಿಬಿಐನ ಅಧಿಕಾರಿಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಆಡಳಿತಾರೂಢ ಪಕ್ಷದ ನಾಯಕತ್ವವು ನಡೆಸುತ್ತಿರುವ ಪ್ರಯತ್ನಗಳನ್ನು ವರ್ಮಾ ತಡೆದಿದ್ದರು. ಪ್ರಕರಣವೊಂದರಲ್ಲಿ ಸಿಬಿಐ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ ಬಳಿಕವೂ ಪ್ರಮುಖ ಪ್ರತಿಪಕ್ಷ ನಾಯಕರೊಬ್ಬರ ವಿರುದ್ಧ ದಾಳಿ ನಡೆಸುವಂತೆ ಕೇಂದ್ರ ಸರಕಾರದಿಂದ ಸೂಚನೆ ಬಂದಿತ್ತೆನ್ನಲಾಗಿದೆ. ಆದರೆ ಅದಕ್ಕೆ ವರ್ಮಾ ಒಪ್ಪಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ದಾಳಿಗಳನ್ನು ನಡೆಸಿ, ಸಾಕ್ಷಾಧಾರಗಳನ್ನು ಸಂಗ್ರಹಿಸಲಾಗಿದೆ. ಹೀಗಿರುವಾಗ ಮತ್ತೆ ಹೊಸದಾಗಿ ದಾಳಿ ನಡೆಸುವ ಅಗತ್ಯವಿಲ್ಲವೆಂದು ಅವರ ವಾದವಾಗಿತ್ತು.

ಇನ್ನೊಂದು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ, 70ರ ಹರೆಯದ ಪ್ರತಿಪಕ್ಷ ನಾಯಕಿ ಹಾಗೂ ಆತನ ಪುತ್ರನನ್ನು ಬಂಧಿಸಲು ಅಸ್ಥಾನಾ ಅವರು ಬಯಸಿದ್ದರು. ಆದರೆ ಅವರ ವಿರುದ್ಧದ ಆರೋಪವು ಆರ್ಥಿಕ ಸ್ವರೂಪದ್ದಾಗಿರುವುದಿಂದ, ಅಕ್ರಮ ಹಣದ ಪುರಾವೆಯನ್ನು ಸಾಬೀತುಪಡಿಸಬೇಕಾಗುತ್ತದೆ. ಹೀಗಾಗಿ ಇಲ್ಲಿ ಆರೋಪಿಯನ್ನು ಬಂಧಿಸುವ ಅಗತ್ಯವಿಲ್ಲವೆಂದು ವರ್ಮಾ ವಾದಿಸಿದ್ದರು. ಇದೀಗ ಅಂತಿಮವಾಗಿ ಸ್ವತಃ ಅಸ್ತಾನಾ ಅವರೇ ತನಿಖೆಗೆ ಒಳಪಡಬೇಕಾದ ಸ್ಥಿತಿಯಲ್ಲಿ ಬಂದು ನಿಂತಿದ್ದಾರೆ. ಸಿಬಿಐಗೆ ಸೇರ್ಪಡೆಗೊಳಿಸಬೇಕಾದ ಅಧಿಕಾರಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕಾದುದು ಸರಕಾರದ ಆದ್ಯ ಕರ್ತವ್ಯ. ಆದರೆ ಸರಕಾರಕ್ಕೆ ಭ್ರಷ್ಟ ಅಧಿಕಾರಿಯೊಬ್ಬನ ಅಗತ್ಯವಿದೆ ಎನ್ನುವುದು, ಅಸ್ತಾನಾ ಕುರಿತಂತೆ ಅದಕ್ಕಿರುವ ಪ್ರೀತಿಯನ್ನು ಎತ್ತಿತೋರಿಸುತ್ತಿದೆ. ಸಿಬಿಐ ಇಲಾಖೆಯೇ ರಾಜಕೀಯ ಹಸ್ತಕ್ಷೇಪದಿಂದ ಭ್ರಷ್ಟವಾದರೆ, ಆ ಇಲಾಖೆ ಉಳಿದ ಭ್ರಷ್ಟರ ವಿರುದ್ಧ ನಡೆಸುವ ತನಿಖೆಯನ್ನು ಎಷ್ಟರಮಟ್ಟಿಗೆ ನಂಬಬಹುದು? ಈ ಹಿನ್ನೆಲೆಯಲ್ಲಿ, ರಾಕೇಶ್ ಅಸ್ತಾನಾ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲು ಸರಕಾರ ಅವಕಾಶ ನೀಡಬೇಕಾಗಿದೆ. ಆ ಮೂಲಕ, ತಾನು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಕ್ಕೆ ಬದ್ಧ ಎನ್ನುವುದನ್ನು ಕೇಂದ್ರ ಸಾಬೀತು ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News