×
Ad

ಅಪವಿತ್ರ ಮೈತ್ರಿ ಎನ್ನಲು ಬಿಜೆಪಿಯವರಿಗೆ ನೈತಿಕ ಹಕ್ಕಿದೆಯೇ?: ಸಿದ್ದರಾಮಯ್ಯ ಪ್ರಶ್ನೆ

Update: 2018-10-24 19:45 IST

ಮಂಡ್ಯ, ಅ.24: ರಾಜ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಅಪವಿತ್ರ ಮೈತ್ರಿ ಎಂದು ಹೇಳಲು ಬಿಜೆಪಿಯವರಿಗೆ ಎಷ್ಟರಮಟ್ಟಿಗೆ ನೈತಿಕ ಹಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಅವಕಾಶವಾದಿ ರಾಜಕಾರಣ, ಅನೈತಿಕ ರಾಜಕಾರಣ ಎಂದೆಲ್ಲಾ ಕರೆಯುವ ಬಿಜೆಪಿಯವರು ಮೊದಲು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಯನ್ನು ಭಯೋತ್ಪಾದಕರ ಜತೆ ಸಂಪರ್ಕ ಹೊಂದಿದ ಪಕ್ಷವೆಂದು ಬಿಜೆಪಿಯವರು ಟೀಕಿಸಿದ್ದರು. ನಂತರ, ಆ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದರು. ಬಿಹಾರದಲ್ಲೂ ಅಷ್ಟೆ ನಿತೀಶ್‍ ಕುಮಾರ್ ಜತೆ ಮೈತ್ರಿ ಮಾಡಿಕೊಂಡಿದ್ದರು. ಇವರಿಗೆ ಟೀಕಿಸಲು ನೈತಿಕತೆ ಇದೆಯೇ ಎಂದು ಅವರು ವ್ಯಂಗ್ಯವಾಡಿದರು.

ದೇಶದಲ್ಲಿ ಕೋಮುವಾದಿ ಪಕ್ಷದ ಸರಕಾರ ದೂರವಿಡಬೇಕೆಂಬ ಕಾರಣಕ್ಕೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಮಾಡಿಕೊಂಡ ಮಾತ್ರಕ್ಕೆ ಪಕ್ಷದ ಸಿದ್ದಾಂತದ ಜೊತೆ ರಾಜಿ ಮಾಡಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರಕಾರ ಮಾಡುವಾಗಲೇ ಮುಂದಿನ (2019) ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆಗೆ ಹೋಗಲು ಮಾತುಕತೆ ಕೂಡ ಆಗಿದೆ ಎಂದು ಅವರು ಹೇಳಿದರು. ಈ ನಡುವೆ ಉಪಚುನಾವಣೆ ಎದುರಾಗಿದೆ. ಮೊದಲೆ ಮಾತುಕತೆ ನಡೆದಿರುವಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಐದು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ವಿರುದ್ಧ ವಾಗ್ದಾಳಿ: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ನಾಲ್ಕೂವರೆ ವರ್ಷ ಪೂರೈಸಿದೆ. ಅದರ ಜತೆಗೆ ದೇಶದ ಆರ್ಥಿಕ ಪರಿಸ್ಥಿತಿಯೂ ತೀವ್ರ ಹದಗೆಟ್ಟಿದೆ. ನೋಟು ಅಮಾನ್ಯೀಕರಣದಿಂದ ಆರ್ಥಿಕ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಇದೇನಾ ಅಚ್ಚೆದಿನ್ ಎಂದು ಅವರು ವಾಗ್ದಾಳಿ ನಡೆಸಿದರು.

ಪೆಟ್ರೋಲ್, ಡೀಸಲ್ ದರ ಈ ಮಟ್ಟದಲ್ಲಿ ಹಿಂದೆಂದೂ ಏರಿಕೆಯಾಗಿರಲಿಲ್ಲ. 2014ರಲ್ಲಿ 400 ರೂ.ಇದ್ದ ಗ್ಯಾಸ್ ದರ ಸಾವಿರ ರೂ. ಗಡಿ ತಲುಪಿದೆ. ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಗಲಿಲ್ಲ. ರೂಪಾಯಿ ಮೌಲ್ಯ ದಿನ ಕುಸಿಯುತ್ತಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಜಾತ್ಯತೀತ ಪಕ್ಷಗಳು ರಾಜಕೀಯವಾಗಿ ಒಂದಾಗಲು ಮುಂದಾಗಿವೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಸಚಿವರಾದ ಕೆ.ಜೆ.ಜಾರ್ಜ್, ಝಮೀರ್ ಅಹ್ಮದ್ ಖಾನ್, ರಾಜ್ಯಸಭೆ ಮಾಜಿ ಉಪಸಭಾಪತಿ ಕೆ.ರೆಹಮಾನ್ ಖಾನ್,  ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪಿ.ಎಂ.ನರೇಂದ್ರಸ್ವಾಮಿ, ಟಿ.ಬಿ.ಜಯಚಂದ್ರ, ಎನ್.ಚಲುವರಾಯಸ್ವಾಮಿ, ಎಂ.ಎಸ್.ಆತ್ಮಾನಂದ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಮಲ್ಲಾಜಮ್ಮ, ಶಿವರಾಮು, ಬಿ.ರಾಮಕೃಷ್ಣ, ಎಚ್.ಬಿ.ರಾಮು, ಮಾಜಿ ಸಂಸದ ಸಿದ್ದರಾಜು, ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ದಡದಪುರದ ಶಿವಣ್ಣ, ಅಮರಾವತಿ ಚಂದ್ರಶೇಖರ್, ಗಣಿಗ ರವಿಕುಮಾರ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News