×
Ad

ಪ್ರಧಾನಿ ಅಭ್ಯರ್ಥಿ ಇಲ್ಲದೆ ಕಾಂಗ್ರೆಸ್ ತಬ್ಬಲಿ: ಯಡಿಯೂರಪ್ಪ ಲೇವಡಿ

Update: 2018-10-24 19:47 IST

ಬಾಗಲಕೋಟೆ, ಅ. 24: ‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ಅಭ್ಯರ್ಥಿಯಲ್ಲ ಎಂದು ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದು, ಕಾಂಗ್ರೆಸ್‌ನಲ್ಲಿ ಏನಾಗುತ್ತಿದೆ, ಪ್ರಧಾನಿ ಅಭ್ಯರ್ಥಿಯೇ ಇಲ್ಲದೆ ನೀವೆಲ್ಲ ತಬ್ಬಲಿ ಆಗುತ್ತಿದ್ದೀರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಮುಖಂಡರನ್ನು ಲೇವಡಿ ಮಾಡಿದ್ದಾರೆ.

ಬುಧವಾರ ಇಲ್ಲಿನ ಜಮಖಂಡಿ ಕ್ಷೇತ್ರದ ಹುನ್ನೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹಣ, ಹೆಂಡ, ತೋಳ್ಬಲದ ಮೂಲಕ ಜಾತಿ ವಿಷಬೀಜ ಬಿತ್ತುತ್ತಿದೆ. ಉಪ ಚುನಾವಣೆಯಲ್ಲಿ ಮೈತ್ರಿ ಸರಕಾರಕ್ಕೆ ಬುದ್ಧಿ ಕಲಿಸಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾಕ್ಕೆ ಪ್ರಧಾನಿ ಮೋದಿ ಅಡ್ಡಿಯಾಗಿದ್ದಾರೆಂದು ಸಿಎಂ ಕುಮಾರಸ್ವಾಮಿ ಬೊಬ್ಬೆ ಹಾಕುತ್ತಿದ್ದಾರೆ. ಎಲುಬಿಲ್ಲದ ನಾಲಿಗೆ ಎಂದು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ ಬಿಎಸ್‌ವೈ, ಬಾಗಲಕೋಟೆಗೆ ಎಚ್‌ಡಿಕೆ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಇನ್ನೂ ಬಾಂಡ್ ಕೊಟ್ಟಿಲ್ಲ. ನೇಕಾರರ ಸಾಲಮನ್ನಾ ಮಾಡಿಲ್ಲ. ಒಂದು ವಾರದಲ್ಲಿ ಸಾಲಮನ್ನಾ ಮಾಡುವ ಭರವಸೆಯನ್ನು ನಾನು ನೀಡಿದ್ದೆ. ಆದರೆ, ಮೂರೇ ದಿನದಲ್ಲಿ ಅಧಿಕಾರ ಬಿಡಬೇಕಾಯಿತು ಎಂದು ಬಿಎಸ್‌ವೈ ಬೇಸರ ವ್ಯಕ್ತಪಡಿಸಿದರು.

ಓಟು ಹಾಕುವ ವೇಳೆ ನನ್ನ ನೆನಪಾಗಲಿಲ್ಲವೇ ಎಂದು ಉತ್ತರ ಕರ್ನಾಟಕದವರನ್ನು ಪ್ರಶ್ನಿಸಿದ ಕುಮಾರಸ್ವಾಮಿಗೆ ಜಮಖಂಡಿ ಮತದಾರರು, ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಗೆಲ್ಲಿಸುವ ಮೂಲಕ ಪಾಠ ಕಲಿಸಬೇಕೆಂದ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ಕುರುಬ ಸಮಾಜದವರು ಮರುಳಾಗಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News