×
Ad

ವಾಲ್ಮೀಕಿ ಜಯಂತಿಯಲ್ಲಿ ಬಿಜೆಪಿ ಪರ ಭಾಷಣ ಮಾಡಿದ ಶಾಸಕ ಹರ್ಷವರ್ಧನ್

Update: 2018-10-24 21:29 IST

ಮೈಸೂರು.ಅ.24: ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಪರ ಪ್ರಚಾರ ಭಾಷಣ ಮಾಡಲು ಮುಂದಾದ ಶಾಸಕ ಹರ್ಷವರ್ಧನ್ ನಡೆಯಿಂದ ಬೇಸತ್ತು ಜನಪ್ರತಿನಿಧಿಗಳು ಸಮಾರಂಭವನ್ನು ಬಹಿಷ್ಕರಿಸಿ ಹೊರನಡೆದ ಪ್ರಸಂಗ ನಂಜನಗೂಡಿನಲ್ಲಿ ನಡೆದಿದೆ.

ತಾಲೂಕು ಆಡಳಿತದ ವತಿಯಿಂದ ಶ್ರೀಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀಶ್ರೀಕಂಠೇಶ್ವರ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಸ್ವಲ್ಪ ಕಾಲ ಸಭೆ ಗೊಂದಲಮಯವಾಗಿ ಮುಕ್ತಾಯವಾಗಿದೆ.

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಭಾಗವಹಿಸಿ ವೇದಿಕೆಯಲ್ಲಿದ್ದರು. ಈ ವೇಳೆ ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ನಂತರ ಶಾಸಕ ಹರ್ಷವರ್ಧನ್ ಮಾತನಾಡುತ್ತಾ, ಹಲವು ವರ್ಷಗಳ ಸಮಸ್ಯೆಯಾದ ಪರಿವಾರ, ತಳವಾರ ಸಮುದಾಯವನ್ನು ಬಿಜೆಪಿಯು ನಾಯಕ ಜನಾಂಗಕ್ಕೆ ಸೇರಿಸಿದ್ದು, ಈ ಸಮುದಾಯವನ್ನು ಸೇರಿಸಲು ಬಳ್ಳಾರಿ ಹುಲಿ ಶ್ರೀರಾಮುಲು ಮತ್ತು ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಸಾಕಷ್ಟು ಹೋರಾಟವನ್ನು ಮಾಡಿದ್ದಾರೆ. ಹಾಗಾಗಿ ನಾಯಕ ಸಮುದಾಯ ಅವರ ಬೆನ್ನಿಗೆ ನಿಲ್ಲಬೇಕು. ಜೊತೆಗೆ ನೀವೆಲ್ಲ ಅರ್ಥಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದಂತೆಯೇ ವೇದಿಕೆಯಲ್ಲಿದ್ದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿ.ಪಂ.ಸದಸ್ಯೆ ಲತಾ ಸಿದ್ದಶೆಟ್ಟಿ, ತಾ.ಪಂ.ಸದಸ್ಯ ಮೂಗಶೆಟ್ಟಿ, ವಾಲ್ಮೀಕಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಸೇರಿದಂತೆ ಹಲವರು ವೇದಿಕೆಯಿಂದ ಕೆಳಗಿಳಿದರು.

ಇವರು ವೇದಿಕೆಯಿಂದ ಇಳಿಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಜನರೂ ಗೊಂದಲಕ್ಕೆ ಒಳಗಾದರು. ನಂತರ ಅವರು ಕೂಡಾ ಹೊರನಡೆದರು. ಈ ವೇಳೆ ತಬ್ಬಿಬ್ಬಾದ ಶಾಸಕ ಹರ್ಷವರ್ಧನ್ ಏನು ನಡೆಯುತ್ತಿದೆ ಎಂಬ ಅರಿವೇ ಇಲ್ಲದೇ ತಮ್ಮ ಭಾಷಣವನ್ನು ಮುಂದುವರೆಸಿದರು. ನಂತರ ಆಯೋಜಕರು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News