ಬಿಜೆಪಿಯಲ್ಲೀಗ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ: ಮುಖಂಡರ ನಡುವೆ ಜಟಾಪಟಿ

Update: 2018-10-25 13:16 GMT

ಬೆಂಗಳೂರು, ಅ. 25: ರಾಜ್ಯದಲ್ಲಿ ಒಂದೆಡೆ ಉಪ ಚುನಾವಣೆಯ ಕಾವು ಏರುತ್ತಿದೆ. ಮತ್ತೊಂದೆಡೆ, ಬಿಜೆಪಿ ವಲಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ತೀವ್ರವಾಗಿದ್ದು, ಇದು ಮುಖಂಡರ ನಡುವೆ ಜಟಾಪಟಿಗೂ ಕಾರಣವಾಗಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದ ವೇಳೆ ಮಾಜಿ ಸಚಿವ ವಿ.ಸೋಮಣ್ಣ, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಾಸಕ ಬಿ. ಶ್ರೀರಾಮುಲು ಮುಂದಿನ ಮುಖ್ಯಮಂತ್ರಿ’ ಎಂದು ಘೋಷಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ‘ಮುಂದಿನ ಸಿಎಂ ಯಾರು? ಏನು? ಎತ್ತ? ಎಂಬುದು ನನಗೆ ಗೊತ್ತಿಲ್ಲ. ಈ ವಿಷಯವನ್ನು ಸೋಮಣ್ಣ ಅವರನ್ನೇ ಕೇಳಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ಶೋಭಾ ತಿರುಗೇಟು: ‘ಮುಂದಿನ ಮುಖ್ಯಮಂತ್ರಿ ಶ್ರೀರಾಮುಲು’ ಎಂಬ ಸೋಮಣ್ಣನವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಖಾಸುಮ್ಮನೆ ಸೋಮಣ್ಣ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ. ಆದರೆ, ಯಡಿಯೂರಪ್ಪನವರೇ ನಮ್ಮ ನಾಯಕರು. ಹೈಕಮಾಂಡ್ ಕೂಡ ಅವರ ಮೇಲೆ ಅಚಲ ವಿಶ್ವಾಸವಿಟ್ಟಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದರಂತೆ’ ಎಂಬ ಮಾತಿನಂತೆ ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಹುಟ್ಟಿಕೊಂಡಿದೆ. ಪಕ್ಷದಲ್ಲಿನ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲವೂ ಸರಿಯಾಗಿಲ್ಲ ಎಂಬುದಂತೂ ಸ್ಪಷ್ಟವಾಗುತ್ತದೆ.

ಗದಗಿನ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿ ನಿಧನದ ಹಿನ್ನೆಲೆಯಲ್ಲಿ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಯಡಿಯೂರಪ್ಪ, ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆಂಬುದು ತನಗೆ ಗೊತ್ತಿಲ್ಲ. ಸೋಮಣ್ಣನ ಹೇಳಿಕೆಯ ಬಗ್ಗೆ ನೀವು ಅವರನ್ನೇ ಕೇಳಬೇಕು ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.

ಇದೇ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆ, ಉಪ ಚುನಾವಣೆಯಲ್ಲಿ ಬಿಜೆಪಿ ಶಿವಮೊಗ್ಗ, ಬಳ್ಳಾರಿ ಹಾಗೂ ಜಮಖಂಡಿ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಗೆಲ್ಲಲಿದ್ದೇವೆ. ಬಿಜೆಪಿಯ ಶಾಸಕರ ಸಂಖ್ಯಾಬಲ 105ಕ್ಕೇರಿದ ಮೇಲೆ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗುತ್ತೆ ಎಂದು ಭವಿಷ್ಯ ನುಡಿದರು.

ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ನಡೆಸುವುದಿಲ್ಲವೆಂಬ ತೀರ್ಮಾನ ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬೇಗುದಿಯಿಂದ ದಿನಕ್ಕೊಬ್ಬ ಶಾಸಕರು ಬಂಡಾಯ ಏಳುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಕಾಂಗ್ರೆಸ್ ಶಾಸಕರ ಕೆಲಸ ಮಾಡಿಕೊಡುತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News