ಪ್ಯಾರಾ ಅಂತರ್‌ರಾಷ್ಟ್ರೀಯ ಕ್ರೀಡಾಪಟು ಲೋಕಸಭಾ ಉಪ ಚುನಾವಣೆಗೆ ಸ್ಪರ್ಧೆ
ಬೆಂಗಳೂರು, ಅ. 25: ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ವಿಶೇಷ ಚೇತನರ ಪ್ರತಿನಿಧಿಯಾಗಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಪ್ಯಾರಾ ಅಂತರ್‌ರಾಷ್ಟ್ರೀಯ ಕ್ರೀಡಾಪಟು ಡಾ.ಕೆ.ಎಸ್.ರಾಜಣ್ಣ ವಿಶ್ವಕರ್ಮ ಸ್ಪರ್ಧಿಸುತ್ತಿದ್ದು, ಮಂಡ್ಯದ ಜನತೆ ಬೆಂಬಲ ಸೂಚಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ವಿಶೇಷ ಚೇತನರಿಗೆ ಸೂಕ್ತ ಸ್ಥಾನ ಮಾನ ಇದುವರೆಗೂ ಸಿಕ್ಕಿಲ್ಲ. ಹೀಗಾಗಿ, ಇಂತಹ ನಿರಾಶಾದಾಯಕ ಹಾಗೂ ಹತಾಶ ಕಾಲಘಟ್ಟದಲ್ಲಿ ನನ್ನನ್ನು ಗೆಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ಜಾತಿ-ಧರ್ಮ ಪಂಥಗಳೆಲ್ಲವನ್ನೂ ಮೀರಿದ ನನ್ನ ಉಮೇದುವಾರಿಕೆಯನ್ನು ಮತದಾರರು ಗೌರವಿಸಿ ಮತನೀಡಿ ಅವಕಾಶ ಕಲ್ಪಿಸಿಕೊಟ್ಟಲ್ಲಿ, ನಿಷ್ಠೆ ಹಾಗೂ ಪಾರದರ್ಶಕತೆಯಿಂದ ಸರ್ವಜನರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ನ್ಯಾಯದ ತತ್ವ-ಸಿದ್ಧಾಂತಗಳಿಗೆ ಬದ್ಧನಾಗಿ ಸೇವೆ ಸಲ್ಲಿಸುತ್ತೇನೆಂದು ತಿಳಿಸಿದರು.