ಹನೂರು: ಶಿಥಿಲಗೊಂಡು ಕುಸಿಯುವ ಹಂತಕ್ಕೆ ತಲುಪಿದ ಸ್ವಾಮಿ ಹಳ್ಳ ಸೇತುವೆ
ಹನೂರು,ಅ.25: ಪಟ್ಟಣದ ಹೊರವಲಯದಲ್ಲಿರುವ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಸ್ವಾಮಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಶಿಥಿಲಗೊಂಡು ಕೆಳಭಾಗ ಬಿರುಕು ಬಿಟ್ಟು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇಲ್ಲಿ ಸಂಚರಿಸುವ ವಾಹನ ಸವಾರರು ಪರದಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹನೂರು ಪಟ್ಟಣದ ಹೊರ ವಲಯದ ಬಂಡಳ್ಳಿ, ಮಣಗಳ್ಳಿ, ಶಾಗ್ಯ ತೋಮಿಯರಪಾಳ್ಯ, ಹಲಗಾಪುರ, ಗಾಣಮಂಗಲ, ಕಳ್ಳಿದೂಡ್ಡಿ ಸೇರಿದಂತೆ ಇನ್ನೂ ಹಲವು ಗ್ರಾಮಗಳಿಗೆ ತೆರಳಲು ಈ ಸ್ವಾಮಿಹಳ್ಳದ ಸೇತುವೆ ಸಂಪರ್ಕ ಕೊಂಡಿಯಾಗಿದೆ. ಇದು ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿದ್ದರೂ, ಮಳೆ ಬಂದಾಗ ಸೇತುವೆಯ ಮೇಲ್ಬಾಗದಲ್ಲಿ ರಭಸವಾಗಿ ನೀರು ಹರಿದು, ಸಂಚಾರಕ್ಕೆ ತೊಡಕಾಗುತ್ತದೆ. ತಳ ಭಾಗದ ಅಡಿಪಾಯ ಸಂಪೂರ್ಣವಾಗಿ ಸಮೀಪದ ದಿನದಲ್ಲಿಯೇ ಕುಸಿಯುವ ಹಂತಕ್ಕೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅವಘಡ ಸಂಭವಿಸುವುದಕ್ಕೂ ಮುನ್ನ ಅಗತ್ಯ ಕ್ರಮ ಜರುಗಿಸುವಂತೆ ಸ್ಥಳೀಯ ಯುವಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹನೂರು ಸಮೀಪದ ಸ್ವಾಮಿಹಳ್ಳ ಸೇತುವೆ ಜೊತೆಗೆ ಚಂಗವಾಡಿ ಗ್ರಾಮ, ಮಣಗಳ್ಳಿ ಗ್ರಾಮದ ಸಮೀಪದಲ್ಲಿರುವ ಹಳ್ಳಗಳ ಸೇತುವೆಗಳೂ ದುರಸ್ತಿಗೆ ಬಂದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಸೇತುವೆಗಳ ದುರಸ್ತಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿಬೇಕು.
-ಶಂಕರ್, ಹನೂರು ನಿವಾಸಿ