ಝಮೀರ್ ಅಹ್ಮದ್, ಶಿವರಾಮೇಗೌಡ ವಿರುದ್ಧ ದೂರು
ಮಂಡ್ಯ, ಅ.25: ಲೋಕಸಭಾ ಉಪಚುನಾವಣೆ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪ್ರತ್ಯೇಕವಾಗಿ ದೂರು ನೀಡಲಾಗಿದೆ.
ಎಲ್.ಆರ್.ಶಿವರಾಮೇಗೌಡರು ತಮ್ಮ ಮಾದರಿ ಮತಪತ್ರದಲ್ಲಿ 5ನೇ ಕ್ರಮ ಸಂಖ್ಯೆಯಲ್ಲಿರುವ ತನ್ನ ಗುರುತಿನ ಚಿಹ್ನೆಯನ್ನು ತಪ್ಪಾಗಿ ಮುದ್ರಿಸಿ ಮತದಾರರಿಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ನವೀನ್‍ಕುಮಾರ್ ದೂರು ನೀಡಿದ್ದಾರೆ.
ತನ್ನದು ರೈತ ಉಳುಮೆ ಮಾಡುವ ಚಿಹ್ನೆಯಾಗಿದೆ. ಆದರೆ, ಜೆಡಿಎಸ್ ಮಾದರಿ ಮತಪತ್ರದಲ್ಲಿ ಮೈಕ್ ಎಂದು ಹಾಕಿ ಗೊಂದಲ ಮೂಡಿಸಲಾಗಿದೆ. ಆದ್ದರಿಂದ ಶಿವರಾಮೇಗೌಡರ ಅಭ್ಯರ್ಥಿತನ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ಸಚಿವ ಝಮೀರ್ ಅಹ್ಮದ್ ಖಾನ್ ಬುಧವಾರ ವಿವಿಧೆಡೆ ಚುನಾವಣಾ ಪ್ರಚಾರ ಮಾಡುವಾಗ ಮತದಾರರಿಗೆ ಪೊಲೀಸರ ಸಮ್ಮುಖದಲ್ಲೇ ಹಣ ಹಂಚಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್ ದೂರು ನೀಡಿದ್ದಾರೆ.
ಝಮೀರ್ ಅವರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ವರದಿ ಬಂದಿದ್ದು, ಕೂಡಲೇ ಅವರ ಶಾಸಕತ್ವ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.