×
Ad

ಮಡಿಕೇರಿ: ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ತೋಟದ ಮಾಲಕನ ಬಂಧನಕ್ಕೆ ಆಗ್ರಹ

Update: 2018-10-25 23:12 IST

ಮಡಿಕೇರಿ, ಅ.25 :ಮಾದಾಪುರ ಸಮೀಪದ ನಂದಿಮೊಟ್ಟೆ ತೋಟವೊಂದರಲ್ಲಿ ಕೂಲಿ ಕಾರ್ಮಿಕ ವಿಶ್ವನಾಥ್ ಎಂಬವರ ಮೇಲೆ ತೋಟದ ಮಾಲಕ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದು, ಪೊಲೀಸರು ತಕ್ಷಣ ಮಾಲಕನನ್ನು ಬಂಧಿಸಬೇಕೆಂದು ಎಐಟಿಯುಸಿ ಕಾರ್ಮಿಕ ಸಂಘಟನೆ ಮತ್ತು ಆದಿ ದ್ರಾವಿಡ ಸಮಾಜ ಸೇವಾ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ, ಅ.25 ರಂದು ಬೆಳಗ್ಗೆ ಏಕಾಏಕಿ ಲೈನ್ ಮನೆಗೆ ನುಗ್ಗಿದ ಮಾಲಕ ಅನಾರೋಗ್ಯ ಪೀಡಿತ ವಿಶ್ವನಾಥ್ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಜ್ವರದಿಂದ ಬಳಲುತ್ತಿದ್ದ ವಿಶ್ವನಾಥ್ ಅವರು, ತೋಟದ ಕೆಲಸಕ್ಕೆ ತೆರಳದ ಕಾರಣ ಕುಪಿತಗೊಂಡ ಮಾಲಕ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣವನ್ನು ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕೆಲವು ತೋಟದ ಮಾಲಕರು ಕಾರ್ಮಿಕರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಇನ್ನು ಕೆಲವರು ನಾಯಿ ಗೂಡಿನಂತಹ ಲೈನ್ ಮನೆಗಳಲ್ಲಿ ಕಾರ್ಮಿಕರಿಗೆ ಆಶ್ರಯ ನೀಡಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ದಲಿತ ಕಾರ್ಮಿಕರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ವಿಶ್ವನಾಥ್ ಮೇಲೆ ಹಲ್ಲೆ ಮಾಡಿದ ಮಾಲೀಕನನ್ನು ಮುಂದಿನ ಒಂದು ವಾರದಲ್ಲಿ ಬಂಧಿಸದಿದ್ದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಸೋಮಪ್ಪ ಎಚ್ಚರಿಕೆ ನೀಡಿದರು.

ಕಾರ್ಮಿಕ ವಿಶ್ವನಾಥ್ ಅವರ ಪತ್ನಿ ನೇತ್ರ ಮಾತನಾಡಿ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತಿ ಮನೆಯಲ್ಲೆ ಉಳಿದುಕೊಂಡಿದ್ದರು. ನಾನು ಕೆಲಸಕ್ಕೆ ತೆರಳಿದ ಸಂದರ್ಭ ಮಾಲೀಕರು ಲೈನ್ ಮನೆಗೆ ನುಗ್ಗಿ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಕಣ್ಣೀರು ಹಾಕಿದರು. ಈ ತೋಟದ ಮಾಲಕ ಸಂಬಳ ಕೇಳುವ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಆತಂಕದಿಂದ ಯಾರೂ ಬಹಿರಂಗಪಡಿಸಿಲ್ಲ. ಆದರೆ, ನನ್ನ ಪತಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದರಿಂದ ವಿಷಯವನ್ನು ಬಹಿರಂಗಪಡಿಬೇಕಾಯಿತೆಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪಿ.ಎಲ್. ಸುರೇಶ್, ಸುಂಟಿಕೊಪ್ಪ ಪ್ರಮುಖ ಮೋಣಪ್ಪ ಹಾಗೂ ಹೆಚ್.ಎಸ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News