ಸೀಝರ್‌ನ ಪತ್ನಿಯಂತಿರುವ ಸಿಬಿಐ ಅಧಿಕಾರಿಗಳು ಶಂಕಾತೀತರಾಗಿರಬೇಕು: ಅರುಣ್ ಜೇಟ್ಲಿ

Update: 2018-10-26 15:42 GMT

 ಹೊಸದಿಲ್ಲಿ,ಅ.26: ಸ್ಥಾನಭ್ರಷ್ಟ ಸಿಬಿಐ ನಿರ್ದೇಶಕ ಅಲೋಕ್ ಕುಮಾರ ವರ್ಮಾ ವಿರುದ್ಧ ಕಾಲಮಿತಿಯ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ‘ಅತ್ಯಂತ ಧನಾತ್ಮಕ ಬೆಳವಣಿಗೆ ’ಎಂದು ಶುಕ್ರವಾರ ಇಲ್ಲಿ ಬಣ್ಣಿಸಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು,ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಸತ್ಯವು ಹೊರಗೆ ಬರಬೇಕಿದೆ ಎಂದು ಹೇಳಿದರು. ನ್ಯಾಯಪರತೆಯನ್ನು ಕಾಯ್ದುಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯ ಉಸ್ತುವಾರಿಗಾಗಿ ನಿವೃತ್ತ ನ್ಯಾಯಾಧೀಶರನ್ನು ನೇಮಕಗೊಳಿಸಿದೆ ಎಂದ ಅವರು,ಸಿಬಿಐನ ವೃತ್ತಿಪರತೆ, ವರ್ಚಸ್ಸು ಮತ್ತು ಸಾಂಸ್ಥಿಕ ಅಖಂಡತೆಯನ್ನು ಕಾಯ್ದುಕೊಳ್ಳಲು ಮಾತ್ರ ಸರಕಾರವು ಆಸಕ್ತವಾಗಿದೆ ಎಂದರು.

ಬಹಿರಂಗ ಕಚ್ಚಾಟದಲ್ಲಿ ಪರಸ್ಪರ ಭ್ರಷ್ಟಾಚಾರದ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದ ವರ್ಮಾ ಮತ್ತು ಸಿಬಿಐ ವಿಶೇಷ ನಿರ್ದೇಶಕ ರಾಕೇಶ ಅಸ್ತಾನಾ ಅವರನ್ನು ರಜೆಯಲ್ಲಿ ಕಳುಹಿಸಿದ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡ ಜೇಟ್ಲಿ,ಎಲ್ಲ ಸಿಬಿಐ ಅಧಿಕಾರಿಗಳು,ವಿಶೇಷವಾಗಿ ಇಬ್ಬರು ಅಗ್ರ ಅಧಿಕಾರಿಗಳು ಸೀಝರ್‌ನ ಪತ್ನಿ ಇದ್ದಂತೆ ಮತ್ತು ಶಂಕಾತೀತರಾಗಿರಬೇಕು. ಇತ್ತೀಚಿನ ಬೆಳವಣಿಗೆಗಳು ಸಿಬಿಐನ ವರ್ಚಸ್ಸನ್ನು ಕುಂದಿಸಿವೆ ಮತ್ತು ಇದೇ ಕಾರಣದಿಂದ ವಿಶಾಲ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸರಕಾರವು ಅವರನ್ನು ರಜೆಯಲ್ಲಿ ಕಳುಹಿಸಿದೆ ಎಂದರು.

16ನೇ ಶತಮಾನದ ಆಂಗ್ಲ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಅವರ ನಾಟಕದಲ್ಲಿಯ ‘ಸೀಝರ್‌ನ ಪತ್ನಿಯು ಶಂಕಾತೀತಳಾಗಿರಬೇಕು’ ಎಂಬ ಉಕ್ತಿಯನ್ನು ಉನ್ನತ ಹುದ್ದೆಗಳಲ್ಲಿರುವವರು ಅತ್ಯಂತ ಪ್ರಾಮಾಣಿಕರಾಗಿರಬೇಕು ಎನ್ನುವುದನ್ನು ಬಿಂಬಿಸಲು ಬಳಸಲಾಗುತ್ತಿದೆ.

ವಿಚಾರಣೆ ಪೂರ್ಣಗೊಳಿಸಲು ಎರಡು ವಾರಗಳ ಗಡುವು ವಿಧಿಸಿರುವ ಸರ್ವೋಚ್ಚ ನ್ಯಾಯಾಲಯದ ನಿರ್ದೇಶವು ತನಿಖೆಯ ನ್ಯಾಯಬದ್ಧ ಮಾನದಂಡವನ್ನು ಇನ್ನಷ್ಟು ಬಳಗೊಳಿಸುತ್ತ್ತದೆ ಮತ್ತು ನಿವೃತ್ತ ನ್ಯಾಯಾಧೀಶರ ನೇಮಕವು ನ್ಯಾಯಯುತ ವಿಚಾರಣೆಯನ್ನು ಖಚಿತಗೊಳಿಸುತ್ತದೆ ಎಂದೂ ಜೇಟ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News