ಅಸಾಂಜ್‌ರನ್ನು ಗಡಿಪಾರು ಮಾಡುವುದಿಲ್ಲ ಎಂದು ಬ್ರಿಟನ್ ಹೇಳಿದೆ: ಇಕ್ವೆಡಾರ್

Update: 2018-10-26 16:48 GMT

ಕ್ವಿಟೊ (ಇಕ್ವೆಡಾರ್), ಅ. 26: ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಿಂದ ಹೊರಬಂದರೆ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಗಡಿಪಾರು ಮಾಡಲಾಗುವುದಿಲ್ಲ ಎಂಬುದಾಗಿ ಬ್ರಿಟನ್ ಆಗಸ್ಟ್‌ನಲ್ಲಿ ಇಕ್ವೆಡಾರ್‌ಗೆ ತಿಳಿಸಿದೆ ಎಂದು ಇಕ್ವೆಡಾರ್‌ನ ಅಟಾರ್ನಿ ಜನರಲ್ ಗುರುವಾರ ಹೇಳಿದ್ದಾರೆ.

ಅಸಾಂಜ್ 2012ರಿಂದ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ.

ಯಾವುದೇ ಗಡಿಪಾರು ಮನವಿ ಬ್ರಿಟನ್‌ಗೆ ಬಂದಿಲ್ಲ ಹಾಗೂ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆಯುವ ಮೂಲಕ ಜಾಮೀನು ಶರತ್ತುಗಳನ್ನು ಉಲ್ಲಂಘಿಸಿರುವುದಕ್ಕಾಗಿ ಬ್ರಿಟನ್‌ನಲ್ಲಿ ಅವರ ಜೈಲು ವಾಸ 6 ತಿಂಗಳನ್ನು ಮೀರುವುದಿಲ್ಲ ಎಂಬುದಾಗಿ ಇಕ್ವೆಡಾರ್‌ನ ಪ್ರಶ್ನೆಗಳಿಗೆ ನೀಡಿದ ಲಿಖಿತ ಉತ್ತರದಲ್ಲಿ ಬ್ರಿಟನ್ ಹೇಳಿತ್ತು ಎಂದು ಇಕ್ವೆಡಾರ್ ಪ್ರಾಸಿಕ್ಯೂಟರ್ ಇನಿಗೊ ಸಾಲ್ವಡೋರ್ ಹೇಳಿದ್ದಾರೆ.

‘‘ಅಸಾಂಜ್ ಬಳಿ ಎರಡು ಆಯ್ಕೆಗಳಿವೆ. ಒಂದು, ಈ ಭರವಸೆಗಳ ಆಧಾರದಲ್ಲಿ ಬ್ರಿಟನ್ ಅಧಿಕಾರಿಗಳ ಮುಂದೆ ಶರಣಾಗುವುದು. ಅಥವಾ, ಎರಡನೆಯದಾಗಿ, ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ವಾಸ ಮುಂದುವರಿಸುವುದು. ಆದರೆ, ಅವರು ಈಗಾಗಲೇ 6 ವರ್ಷಗಳನ್ನು ರಾಯಭಾರ ಕಚೇರಿಯಲ್ಲಿ ಕಳೆದಿದ್ದಾರೆ ಹಾಗೂ ಬಿಕ್ಕಟ್ಟು ಶಮನಗೊಳ್ಳುವ ಯಾವುದೇ ಸೂಚನೆಯಿಲ್ಲ. ಹಾಗಾಗಿ, ಇನ್ನು ಅವರ ವಾಸ್ತವ್ಯದ ಮೇಲೆ ಕೆಲವು ಶರತ್ತುಗಳನ್ನು ವಿಧಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News