ಕೆಎಸ್ಸಾರ್ಟಿಸಿ ಅಧಿಕಾರಿಗಳಿಂದ ನೌಕರರಿಗೆ ಕಿರುಕುಳ ಆರೋಪ: ನ್ಯಾಯಕ್ಕಾಗಿ ಚಿಕ್ಕಮಗಳೂರು ಎಸ್ಪಿ, ಡಿಸಿಗೆ ಮೊರೆ

Update: 2018-10-26 17:25 GMT

ಚಿಕ್ಕಮಗಳೂರು, ಅ.26: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಬಸ್ ಚಾಲಕರು ಮತ್ತು ನಿರ್ವಹಕರಿಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಈ ಕಿರುಕುಳಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕೆಎಸ್ಸಾರ್ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ಮನವಿ ಸಲ್ಲಿಸಿದ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಮಗಳೂರು ಘಟಕದ ಮುಂಭಾಗ ಕೆಎಸ್ಸಾರ್ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾದರು. 

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೊಂದ ಕೆಎಸ್ಸಾರ್ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು, ಹಿರಿಯ ಅಧಿಕಾರಿಗಳ ದಬ್ಬಾಳಿಕೆ, ಭ್ರಷ್ಟಚಾರ ಮತ್ತು ವರ್ಗಾವಣೆ ನೆಪದಲ್ಲಿ ನೌಕರರಿಗೆ ಮನಸೋಇಚ್ಛೆ ಕಿರುಕುಳ ನೀಡುತ್ತಿದ್ದಾರೆ. ಹಿರಿಯ ಅಧಿಕಾರಿಗಳ ವಿರುದ್ಧ ಅನಿರ್ಧಿಷ್ಠಾವಧಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು. 

ಇತ್ತೀಚೆಗೆ ಮೂಡಿಗೆರೆ ಘಟಕದಲ್ಲಿ ತಪಾಸಣೆ ನೆಪವೊಡ್ಡಿ ಅಧಿಕಾರಿಯೋರ್ವರು ಬಸ್ ನಿರ್ವಾಹಕನ ಎಲೆಟ್ರೀಕಲ್ ಟಿಕೆಟ್ ಮಿಷಿನ್, ಬಸ್ ಆದಾಯ ಪತ್ರವನ್ನು ಕಿತ್ತುಕೊಂಡಿದ್ದು, ನಿರ್ವಾಹಕನಿಗೆ ವಾಪಾಸ್ ನೀಡದಿದ್ದರಿಂದ ಮೂಡಿಗೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ರೂಪದಲ್ಲಿ ದೌರ್ಜನ್ಯಕ್ಕೆ ಒಳಗಾದ ನಿರ್ವಾಹಕನನ್ನೇ ಅಮಾನತು ಮಾಡಲಾಗಿದೆ. ಇಂತಹ ದೌರ್ಜನ್ಯ ಪ್ರಶ್ನಿಸಿದರೆ, ಪ್ರಶ್ನಿಸಿದವರನ್ನೇ ಬೇರೆ ಘಟಕಗಳಿಗೆ ವರ್ಗಾವಣೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಅಧಿಕಾರಗಳ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ವಿನಾಃ ಕಾರಣ ಅವರನ್ನು ಬೇರೆ ಘಟಕಗಳಿಗೆ ವರ್ಗಾವಣೆ ಮಾಡಿದ್ದು, ಈ ವರ್ಗಾವಣೆಯನ್ನು ತಕ್ಷಣವೇ ಹಿಂಪಡೆಯಬೇಕು. ಚಾಲಕರು ಮತ್ತು ನಿರ್ವಹಕರ ಮೇಲೆ ದೌರ್ಜನ್ಯ ನಡೆಸುವ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನೊಂದ ಬಸ್ ಚಾಲಕರು ಮತ್ತು ನಿರ್ವಾಹಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News