ಮಡಿಕೇರಿಯಲ್ಲಿ ವಾಣಿಜ್ಯ ಸಂಕೀರ್ಣ ತೆರವು ಕಾರ್ಯಾಚರಣೆ ಚುರುಕು
ಮಡಿಕೇರಿ, ಅ.26: ಮಹಾಮಳೆಗೆ ಸಿಲುಕಿ ಹಾನಿಗೊಳಗಾಗಿದ್ದ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಶಿಥಿಲಗೊಂಡ ವಾಣಿಜ್ಯ ಸಂಕೀರ್ಣ ಕಟ್ಟಡದ ತೆರವು ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.
ಸುಮಾರು 70 ವರ್ಷಗಳಷ್ಟು ಹಳೆಯದಾದ ಈ ಕಟ್ಟಡದಲ್ಲಿ ಪುರಸಭೆಯ ಕಚೇರಿಯೂ ಕಾರ್ಯ ನಿರ್ವಹಿಸಿತ್ತು. ನಂತರ ವಾಣಿಜ್ಯ ಮಳಿಗೆಗಳು ಆರಂಭಗೊಂಡಿತ್ತಲ್ಲದೆ ಈ ಪ್ರದೇಶ ಖಾಸಗಿ ಬಸ್ ನಿಲ್ದಾಣವಾಗಿಯೂ ಮಾರ್ಪಟ್ಟಿತು. ಕಳೆದ 10 ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಈ ಕಟ್ಟಡ ಪ್ರಸ್ತುತ ವರ್ಷ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯ ಕಾರಣದಿಂದ ಬರೆ ಕುಸಿದು ಅಪಾಯದ ಸ್ಥಿತಿಯನ್ನು ಎದುರಿಸುತ್ತಿತ್ತು.
ಮುಂಜಾಗೃತಾ ಕ್ರಮವಾಗಿ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಲಾಗುತ್ತಿದ್ದು, ನೂತನ ವಾಣಿಜ್ಯ ಸಂಕೀರ್ಣ ನಿರ್ಮಿಸಲು ನಗರಸಭೆ ಯೋಜನೆ ರೂಪಿಸಿದೆ. ನಗರಸಭೆಯ 3ನೇ ಹಂತದ ಹಣಕಾಸು ಯೋಜನೆಯ ಅಡಿಯಲ್ಲಿ ವಿವಿಧ 3 ಯೋಜನೆಗಳಿಗಾಗಿ ಒಟ್ಟು 2.66 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಪೈಕಿ ಸುದರ್ಶನ ವೃತ್ತದ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸುವುದು, ಹೊಸ ಖಾಸಗಿ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆ ಮತ್ತು ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ನೂತನ ವಾಣಿಜ್ಯ ಮಳಿಗೆ ನಿರ್ಮಿಸಲು ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ.
ನೂತನ ವಾಣಿಜ್ಯ ಮಳಿಗೆ ನಿರ್ಮಾಣಕ್ಕೂ ಮೊದಲು ಹಿಂಬದಿಯಲ್ಲಿರುವ ಗುಡ್ಡ ಕುಸಿಯದಂತೆ ತಡೆಗೋಡೆಯನ್ನು ಪ್ರಥಮ ಹಂತದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ.
ಹಗಲಿನ ವೇಳೆಯಲ್ಲಿ ಹಳೇ ಖಾಸಗಿ ಬಸ್ ನಿಲ್ದಾಣದ ಪ್ರದೇಶದಲ್ಲಿ ಜನ, ವಾಹನ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಕಟ್ಟಡವನ್ನು ಕೆಡವಲಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿನ ಪ್ರಯಾಣಿಕರ ತಂಗುದಾಣ ಖಾಸಗಿ ಬಸ್ ನಿಲ್ದಾಣವೆಂದೇ ಭಾವನಾತ್ಮಕ ಸಂಬಂಧ ಹೊಂದಿದ್ದ ಹಳೆಯ ಕಟ್ಟಡವೊಂದು ನೆಲಸಮಗೊಳ್ಳುತ್ತಿದ್ದು, ಖಾಸಗಿ ಬಸ್ ಸಿಬ್ಬಂದಿಗಳು ಈ ಕಟ್ಟಡ ತಮಗೆ ನೀಡಿದ ಸಹಕಾರವನ್ನು ನೆನಪಿಸಿಕೊಳ್ಳುತ್ತಾರೆ.