ಮಾನವ ಹಕ್ಕುಗಳಿಗಾಗಿ ಧ್ವನಿಯೆತ್ತುವುದು ಅಪರಾಧವೇ?

Update: 2018-10-27 04:45 GMT

ಗುರುವಾರ ಎರಡು ಘಟನೆಗಳು ಈ ದೇಶ ಎತ್ತ ಕಡೆಗೆ ಚಲಿಸುತ್ತಿದೆ ಎನ್ನುವುದನ್ನು ಇನ್ನಷ್ಟು ಸ್ಪಷ್ಟಪಡಿಸಿವೆೆ. ದಿಲ್ಲಿಯಲ್ಲಿ ಎಂಟು ವರ್ಷದ ಬಾಲಕನೊಬ್ಬನನ್ನು ಗುಂಪು ಥಳಿಸಿ ಕೊಂದು ಹಾಕಿದೆ. ಈ ದೇಶದಲ್ಲಿ ಗುಂಪುಗಳಿಂದ ನಡೆಯುತ್ತಿರುವ ಹತ್ಯೆ ಪ್ರಕರಣಗಳಿಗೆ ಇನ್ನೊಂದು ಸೇರ್ಪಡೆಯಾಗಿ ಘಟನೆ ಮುಗಿದು ಹೋಗಿದೆ. ಈ ಬರ್ಬರ ಕೃತ್ಯಕ್ಕೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಕಾನೂನು ವ್ಯವಸ್ಥೆ, ಸರಕಾರದ ನಿರ್ಲಕ್ಷತೆಯ ಕುರಿತಂತೆ ಮಾಧ್ಯಮಗಳು ಎಂದಿನಂತೆ ತನ್ನ ಜಾಣ ಕಿವುಡು ಮತ್ತು ಕುರುಡುತನವನ್ನು ಪ್ರದರ್ಶಿಸಿದೆ. ಇನ್ನೊಂದು ಘಟನೆ, ಮಾನವಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿರುವ ಆ್ಯಮ್ನೆಸ್ಟಿ ಇಂಡಿಯಾದ ಮೇಲೆ ಸರಕಾರ ಪ್ರಾಯೋಜಿತವಾದ ದಾಳಿ. ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಡಿಯಾದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯವು ಗುರುವಾರ ಮುಟ್ಟುಗೋಲು ಹಾಕಿದ್ದು, ಸಂಸ್ಥೆಯ ಕೆಲಸವನ್ನು ಬಹುತೇಕ ಸ್ಥಗಿತಗೊಳಿಸಿದೆ. ಯಾರನ್ನು ಕ್ರಿಮಿನಲ್‌ಗಳಾಗಿ ಉಪಚರಿಸಬೇಕೋ ಅವರನ್ನು ಈ ದೇಶದ ಸಂಸ್ಕೃತಿ ರಕ್ಷಕರೆಂದು ಪೋಷಿಸಿಕೊಂಡು ಬರುತ್ತಿರುವ ಸರಕಾರ, ಮಗದೊಂದೆಡೆ ಮಾನವ ಹಕ್ಕು ಹೋರಾಟಗಾರರನ್ನೆಲ್ಲ ಅಪರಾಧಿಗಳೆಂದು ಘೋಷಿಸಿ ಜೈಲಿಗೆ ತಳ್ಳುತಿದೆ. ಇತ್ತೀಚೆಗಷ್ಟೇ ದಲಿತಪರ ಹೋರಾಟ ನಡೆಸಿದ ಮಾನವಹಕ್ಕು ಕಾರ್ಯಕರ್ತರನ್ನು 'ನಕ್ಸಲ್' ಹಣೆ ಪಟ್ಟಿ ಕಟ್ಟಿ ಬಂಧಿಸಿದ ಬಳಿಕ, ಮಾನವ ಹಕ್ಕುಗಳ ಮೇಲೆ ಸರಕಾರ ಪ್ರಾಯೋಜಿತ ಇನ್ನೊಂದು ದಾಳಿ ಇದಾಗಿದೆ. ಈ ತಿಂಗಳ ಆರಂಭದಲ್ಲಿ ಗ್ರೀನ್‌ಪೀಸ್ ಇಂಡಿಯಾದ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿರುವುದನ್ನೂ ನಾವು ಸ್ಮರಿಸಬಹುದಾಗಿದೆ.

ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಮೋದಿ ನೇತೃತ್ವದ 'ಕಾರ್ಪೊರೇಟ್-ಆರೆಸ್ಸೆಸ್' ಜಂಟಿ ಪ್ರಾಯೋಜಿತ ಸರಕಾರಕ್ಕೆ ಒಂದಂತೂ ಸ್ಪಷ್ಟವಾಗಿತ್ತು. ಉದ್ಯಮಿಗಳು ಮತ್ತು ಸಂಘ ಪರಿವಾರದ ಅಜೆಂಡಾಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಅದನ್ನು ಪ್ರತಿರೋಧಿಸುವ ವಿರೋಧ ಪಕ್ಷ ಅಸ್ತಿತ್ವದಲ್ಲೇ ಇಲ್ಲ. ಈ ದೇಶದಲ್ಲಿ ತಮ್ಮ ವಿರುದ್ಧ ವಿರೋಧಪಕ್ಷವಾಗಿ ಕೆಲಸ ಮಾಡಲಿರುವುದು ಮಾನವ ಹಕ್ಕು ಸಂಘಟನೆಗಳು. ಸರಕಾರೇತರ ಸಾಮಾಜಿಕ ಸಂಸ್ಥೆಗಳು. ಉದ್ಯಮಿಗಳಿಗೆ ಬೇಕಾದ ಭೂಮಿ, ಕಾಡುಗಳನ್ನು ಒತ್ತುವರಿ ಮಾಡಿಕೊಡುವ ಸಂದರ್ಭದಲ್ಲಿ ಪರಿಸರ ಪರವಾದ ಸಂಘಟನೆಗಳು ಧ್ವನಿಯೆತ್ತುವ ಭಯ ಬೃಹತ್‌ಉದ್ಯಮಿಗಳಿಗಿತ್ತು. ಕಾರ್ಪೊರೇಟ್ ಸಂಸ್ಥೆಗಳ ಹುನ್ನಾರಗಳನ್ನು ಜನರ ಮುಂದೆ ತಲುಪಿಸುವ ಕೆಲಸಗಳನ್ನು ಅದಾಗಲೇ ಹಲವು ಸಂಘಟನೆಗಳು ಮಾಡುತ್ತಾ ಬಂದಿದ್ದವು. ಅವುಗಳಲ್ಲಿ ಮುಖ್ಯವಾದುದು ಗ್ರೀನ್‌ ಪೀಸ್. ಸರಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಅದು ಗ್ರೀನ್‌ಪೀಸ್‌ನಂತಹ ಸರಕಾರೇತರ ಪರಿಸರ ಸಂಘಟನೆಗಳ ವಿರುದ್ಧ ಕಾರ್ಯಾಚರಣೆಗೆ ತೊಡಗಿತು. ಅವುಗಳ ಹಣದ ಮೂಲಗಳನ್ನು ತನಿಖೆಗೊಳಪಡಿಸುವ ನೆಪದಲ್ಲಿ, ಅದರ ಎಲ್ಲ ಕೆಲಸ ಕಾರ್ಯಗಳಿಗೆ ತೊಡಕುಗಳನ್ನು ಉಂಟು ಮಾಡಿತು.

ಕಳೆದ ತಿಂಗಳು ಗ್ರೀನ್‌ಪೀಸ್ ಇಂಡಿಯಾದ ಖಾತೆಗಳನ್ನೂ ಮುಟ್ಟುಗೋಲು ಹಾಕಿತು. ಇದೇ ಸಂದರ್ಭದಲ್ಲಿ ಆರೆಸ್ಸೆಸ್ ತನ್ನ ಅವೈಜ್ಞಾನಿಕ, ಮನುಷ್ಯವಿರೋಧಿ, ಸಂವಿಧಾನ ವಿರೋಧಿ ಅಜೆಂಡಾಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಈ ದೇಶದ ಮಾನವ ಹಕ್ಕು ಹೋರಾಟಗಾರರು ಅದರ ವಿರುದ್ಧ ತೀವ್ರ ಪ್ರತಿರೋಧ ಒಡ್ಡುವ ಕುರಿತಂತೆ ಮೋದಿ ಸರಕಾರಕ್ಕೆ ಆತಂಕವಿತ್ತು. ಆದುದರಿಂದಲೇ, ವಿವಿಧ ಸಂಘಟನೆಗಳನ್ನು ಬೇರೆ ಬೇರೆ ನೆಪಗಳನ್ನು ಒಡ್ಡಿ, ಅವುಗಳಿಗೆ ಕಿರುಕುಳ ನೀಡುತ್ತಾ ಬಂದಿದೆ. ಒಂದೆಡೆ ಸಂಘಪರಿವಾರ ಸಂಘಟನೆಗಳಿಂದ ಗುಂಪು ಹತ್ಯೆಗಳು ಹೆಚ್ಚುತ್ತಾ ಹೋದಂತೆಯೇ, ಇತ್ತ ಸರಕಾರದ ನೇತೃತ್ವದಲ್ಲಿ ಆ ಹತ್ಯೆಗಳ ವಿರುದ್ಧ ಧ್ವನಿಯೆತ್ತುವ ಸಂಘಟನೆಗಳನ್ನು ಮಟ್ಟ ಹಾಕುವ ಕಾರ್ಯಾಚರಣೆಗಳು ನಡೆಯುತ್ತಾ ಬಂದವು. ನಕಲಿ ಗೋರಕ್ಷಕರ ವೇಷದಲ್ಲಿ ಗೂಂಡಾಗಳು ಈ ದೇಶದ ರಸ್ತೆಗಳನ್ನು ಆಳುತ್ತಿದ್ದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗದೆ ಕಾನೂನು ವ್ಯವಸ್ಥೆ ಅಸಹಾಯಕವಾಗಿದೆ. ಅಥವಾ ಪೊಲೀಸರು ಈ ನಕಲಿ ಗೋರಕ್ಷಕರ ಪರವಾಗಿಯೇ ಕೆಲಸ ನಿರ್ವಹಿಸುತ್ತಿದ್ದಾರೆ.

ಕಾನೂನು ವ್ಯವಸ್ಥೆಯ ಈ ನಿಷ್ಕ್ರಿಯತೆಯನ್ನು ಬಯಲಿಗೆಳೆಯುತ್ತಿರುವ ಮಾನವ ಹಕ್ಕು ಹೋರಾಟಗಾರರು ಸರಕಾರಕ್ಕೆ ದೇಶದ್ರೋಹಿಗಳಂತೆ ಕಾಣುತ್ತಿದ್ದಾರೆ. ಆದುದರಿಂದಲೇ ಅವರ ವಿರುದ್ಧ ಸುಳ್ಳು ಮೊಕದ್ದಮೆಗಳು ದಾಖಲಿಸುವ ಕೆಲಸ ಸರಕಾರದ ನೇತೃತ್ವದಲ್ಲೇ ನಡೆಯುತ್ತಿದೆ. ಸರಕಾರದ ವಿರುದ್ಧ ಮಾತನಾಡುವ ವೆಬ್‌ಸೈಟ್, ಚಾನೆಲ್‌ಗಳ ವಿರುದ್ಧವೂ ತನ್ನ ತನಿಖಾ ಸಂಸ್ಥೆಗಳ ಮೂಲಕ ಸರಕಾರ ಕಿರುಕುಳ ನೀಡುತ್ತಿದೆ. ಆ್ಯಮ್ನೆಸ್ಟಿ ಪ್ರಕರಣವನ್ನೇ ತೆಗೆದುಕೊಳ್ಳೋಣ. ಈ ದೇಶ ಹೆಚ್ಚು ಹೆಚ್ಚು ಮಾನವೀಯವಾಗಬೇಕು, ಮನುಷ್ಯ ಘನತೆ ಯಾವ ಕಾರಣಕ್ಕೂ ಕುಸಿಯಬಾರದು ಎನ್ನುವ ಉದ್ದೇಶವನ್ನಿಟ್ಟುಕೊಂಡು ಸೇವೆ ಮಾಡುತ್ತಿರುವ ಸಂಸ್ಥೆ ಆ್ಯಮ್ನೆಸ್ಟಿ. ಇಂತಹ ಸಂಘಟನೆಗಳಿಂದಲೇ ದೇಶದ ರಾಜಕೀಯ ಶಕ್ತಿಗಳು, ಕಾನೂನು ವ್ಯವಸ್ಥೆ ಒಂದಿಷ್ಟು ಜಾಗರೂಕವಾಗಿ ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲ, ಆ್ಯಮ್ನೆಸ್ಟಿ ಸಂಘಟನೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಪಾರದರ್ಶಕವಾಗಿ ಇರಿಸಿದ್ದೇವೆ ಮತ್ತು ವೆಬ್‌ಸೈಟ್‌ಗಳಲ್ಲಿ ಇವುಗಳ ವಿವರಗಳನ್ನು ಹಾಕಿದ್ದೇವೆ ಎಂದು ಅದರ ಮುಖ್ಯಸ್ಥರು ಹೇಳುತ್ತಿದ್ದಾರೆ.

ಇಷ್ಟಿದ್ದರೂ ಯಾವ ಸ್ಪಷ್ಟ ಕಾರಣವನ್ನೂ ನೀಡದೇ ಇವುಗಳ ಮೇಲೆ ಸರಕಾರ ದಾಳಿ ನಡೆಸುತ್ತಿರುವ ಉದ್ದೇಶವೇನು? ಈ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕು ದಮನವನ್ನು ಪ್ರಶ್ನಿಸುವುದು, ಅದರ ವಿರುದ್ಧ ಧ್ವನಿಯೆತ್ತುವುದು ತಪ್ಪು ಎಂದು ಸರಕಾರ ಆದೇಶ ನೀಡುತ್ತಿದೆಯೇ? ಈ ಮೂಲಕ, ಮಾನವ ಹಕ್ಕು ದಮನದಲ್ಲಿ ಸರಕಾರದ ಭಾಗೀದಾರಿಕೆಯೂ ಇದೆ ಎಂದಾಯಿತಲ್ಲವೇ? ನಿಜಕ್ಕೂ ದಾಳಿ ನಡೆಯಬೇಕಾಗಿರುವುದು ಯಾವ ಸಂಸ್ಥೆಯ ಮೇಲೆ? ಈ ದೇಶದಲ್ಲಿ ಸಂಭವಿಸಿದ ಹಲವು ಸ್ಫೋಟ ಪ್ರಕರಣಗಳಲ್ಲಿ, ಕೊಲೆಗಳಲ್ಲಿ ಸನಾತನ ಸಂಸ್ಥೆ, ಅಭಿನವಭಾರತ್‌ನಂತಹ ಸಂಘಟನೆಗಳ ಹೆಸರುಗಳು ಕೇಳಿ ಬರುತ್ತಿವೆೆ. ಈಗಾಗಲೇ ಸನಾತನ ಸಂಸ್ಥೆಯ ಕಾರ್ಯಕರ್ತರ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ.

ಇಷ್ಟಾದರೂ, ಸರಕಾರದ ವತಿಯಿಂದ ಈ ಸಂಘಟನೆಗಳ ಮೇಲೆ ಯಾಕೆ ದಾಳಿ ನಡೆಯುತ್ತಿಲ್ಲ? ಆ ಸಂಘಟನೆಗಳಿಗೆ ಬರುವ ಹಣದ ಮೂಲಗಳ ವಿವರಗಳನ್ನು ಯಾಕೆ ಕೇಳುತ್ತಿಲ್ಲ? ಆರೆಸ್ಸೆಸ್ ಅನಿವಾಸಿ ಭಾರತೀಯರಿಂದ ಭಾರೀ ಪ್ರಮಾಣದಲ್ಲಿ ದೇಣಿಗೆಗಳನ್ನು ಸಂಗ್ರಹಿಸುತ್ತಿದೆ ಎನ್ನುವ ಆರೋಪಗಳಿವೆ. ಯಾಕೆ ಐಟಿ ಅಧಿಕಾರಿಗಳು ಅಥವಾ ಇತರ ತನಿಖಾ ಸಂಸ್ಥೆಗಳ ಸಿಬ್ಬಂದಿ ನಾಗ್ಪುರ ಕಚೇರಿಗಳ ಮೇಲೆ ದಾಳಿ ನಡೆಸಿಲ್ಲ? ಸರಕಾರದ ಈ ನಡೆ ಅಂತಿಮವಾಗಿ ದೇಶವನ್ನು ಎತ್ತ ಕೊಂಡೊಯ್ಯುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಹಿಂದುತ್ವ, ಸಂಸ್ಕೃತಿಯ ಮುಖವಾಡದಲ್ಲಿ ಮುಂದೊಂದು ದಿನ ಈ ದೇಶದ ಚುಕ್ಕಾಣಿಯನ್ನು ಗೂಂಡಾಗಳು ತಮ್ಮ ಕೈಗೆ ತೆಗೆದುಕೊಳ್ಳಲಿದ್ದಾರೆ. ಪ್ರತಿಭಟನೆಯ ಧ್ವನಿಯನ್ನು ಸರಕಾರ ಅಡಗಿಸತೊಡಗಿದಂತೆ, ಪ್ರತಿಕ್ರಿಯೆ ಬೇರೆ ದಾರಿಗಳಲ್ಲಿ ಸ್ಫೋಟಗೊಳ್ಳುತ್ತದೆ. ಪ್ರಜಾಸತ್ತಾತ್ಮಕ ಪ್ರತಿಭಟನೆಯ ಎಲ್ಲ ಮಾರ್ಗಗಳು ಮುಚ್ಚಿದಾಗ, ಹಿಂಸೆಗೆ ಪ್ರತಿಯಾಗಿ ಹಿಂಸೆಯೇ ಸ್ಫೋಟಗೊಳ್ಳಬಹುದು. ಅರಾಜಕತೆ ತಾಂಡವವಾಡಬಹುದು. ಬಹುಶಃ ಸರಕಾರಕ್ಕೂ ಇದೇಬೇಕಾಗಿದೆಯೇನೋ ಎಂಬಂತೆ, ಪ್ರಜ್ಞಾಪೂರ್ವಕವಾಗಿ ದೇಶವನ್ನು ಅತ್ತ ಕಡೆಗೆ ನೂಕತೊಡಗಿದೆ. ಸಜ್ಜನರೆನಿಸಿಕೊಂಡ ಈ ದೇಶದ ಪ್ರಜೆಗಳು ಇವೆಲ್ಲವನ್ನು ಅಸಹಾಯಕರಾಗಿ ನೋಡಬೇಕಾದ ಸ್ಥಿತಿ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News