ಲೋಕಸಭಾ ಚುನಾವಣೆ ಬಳಿಕ ಪ್ರಾದೇಶಿಕ ಪಕ್ಷಗಳ ಒಕ್ಕೂಟ?

Update: 2018-10-27 03:45 GMT

ಔರಂಗಾಬಾದ್, ಅ.27 : ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯ ಬಳಿಕ ಕೇಂದ್ರದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಚನೆಯಾಗುವ ಸಾಧ್ಯತೆ ಇದೆ ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ಭವಿಷ್ಯ ನುಡಿದಿದ್ದಾರೆ.

ಈ ಒಕ್ಕೂಟದ ಮುಂದಾಳತ್ವವನ್ನು ಯಾರು ವಹಿಸಲಿದ್ದಾರೆ ಎಂಬ ಪ್ರಶ್ನೆಗೆ, ಲೋಕಸಭಾ ಚುನಾವಣೆ ಬಳಿಕ ಅದು ನಿರ್ಧಾರವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಪ್ರಾದೇಶಿಕ ಪಕ್ಷಗಳ ಬಲವನ್ನು ಮತ್ತು ಪರಸ್ಪರ ಜತೆ ಸೇರುವುದನ್ನು ಎಚ್ಚರಿಕೆಯಿಂದ ಪರಿಗಣಿಸುವಂತೆ ಈಗಾಗಲೇ ವಿರೋಧ ಪಕ್ಷಗಳಿಗೆ ಸಲಹೆ ಮಾಡಿದ್ದೇನೆ. ಉದಾಹರಣೆಗೆ ತಮಿಳುನಾಡಿನಲ್ಲಿ ಡಿಎಂಕೆ, ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಕಾಂಗ್ರೆಸ್, ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಹಾಗೂ ಎಸ್ಪಿ ನೇತೃತ್ವ ವಹಿಸಬೇಕು ಎಂದು ಅವರು ಹೇಳಿದರು.

ಮಹಾರಾಷ್ಟ್ರದ 40 ಲೋಕಸಭಾ ಕ್ಷೇತ್ರಗಳ ವಿಚಾರದಲ್ಲಿ ಈಗಾಗಲೇ ಕಾಂಗ್ರೆಸ್ ಜತೆ ಒಮ್ಮತಕ್ಕೆ ಬರಲಾಗಿದೆ. ಉಳಿದ ಎಂಟು ಕ್ಷೇತ್ರಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಔರಂಗಾಬಾದ್, ಪುಣೆ ಸೇರಿದಂತೆ ಇದರ ಎಂಟು ಕ್ಷೇತ್ರಗಳ ಭವಿಷ್ಯವನ್ನು ಇಷ್ಟರಲ್ಲೇ ನಿರ್ಧರಿಸಲಾಗುವುದು ಎಂದು ವಿವರಿಸಿದರು. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಾಧನೆ ತೀರಾ ಕಳಪೆಯಾಗಿರುವುದರಿಂದ ಈ ಸ್ಥಾನಗಳಲ್ಲಿ ಎನ್‌ಸಿಪಿ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ಕಾರ್ಯಕರ್ತರ ಬೇಡಿಕೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News