ಸರಕಾರದ ನಿರ್ಧಾರಗಳು ಚುನಾವಣೆಯ ಹಿನ್ನೆಲೆಯಲ್ಲಿ ಟಿ20 ಪಂದ್ಯದಂತೆ ಇರುತ್ತದೆ

Update: 2018-10-27 14:30 GMT

ಮುಂಬೈ, ಅ.27: ರಿಸರ್ವ್ ಬ್ಯಾಂಕಿನ ಉಪ ಗವರ್ನರ್ ವಿರಾಲ್ ಆಚಾರ್ಯ ಮತ್ತೊಮ್ಮೆ ಆರ್‍ಬಿಐ ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ನಿಯಂತ್ರಿಸಲು ಅದಕ್ಕಿರುವ ಅಧಿಕಾರದ ಕೊರತೆಯ ವಿಚಾರದತ್ತ ಬೆಳಕು ಚೆಲ್ಲಿದ್ದಾರೆ.

ಮುಂಬೈಯಲ್ಲಿ ಎ ಡಿ ಶ್ರಾಫ್ ಸ್ಮಾರಕ ಭಾಷಣ ಮಾಡಿದ ಆಚಾರ್ಯ, ಸ್ವತ್ತು ಅರ್ಹತಾ ಮಾನದಂಡಗಳು (ಅಸೆಟ್ ಕ್ವಾಲಿಫಿಕೇಶನ್ ನಾರ್ಮ್ಸ್) ಸಡಿಲಗೊಳಿಸಲು ಸರಕಾರದ ಸತತ ಒತ್ತಡದ ವಿರುದ್ಧ ಕಿಡಿ ಕಾರಿದರಲ್ಲದೆ “ನಿಯಂತ್ರಣಾ ಮಾನದಂಡಗಳೊಂದಿಗೆ ರಾಜಿ ಮಾಡಿಕೊಂಡು ಬ್ಯಾಂಕುಗಳ ಸಾಲಕ್ಕೆ ಸಂಬಂಧಿಸಿದ ನಷ್ಟಗಳನ್ನು ಚಾಪೆಯಡಿ ತೂರುವುದು ಅಲ್ಪಾವಧಿಗೆ  ಆರ್ಥಿಕ ಸುಸ್ಥಿರತೆ ಸಾಧಿಸಿದಂತೆ ಹೊರ ನೋಟಕ್ಕೆ ಕಂಡು ಬಂದರೂ  ಭವಿಷ್ಯದಲ್ಲಿ ಒಂದು ಹಂತದಲ್ಲಿ ಎಲ್ಲವೂ ಕಾರ್ಡುಗಳ ಅಟ್ಟಿಯಂತೆ ಉರುಳಿ ಬೀಳಲಿದೆ'' ಎಂದು ಎಚ್ಚರಿಸಿದ್ದಾರೆ.

“ಸರಕಾರದ ನಿರ್ಧಾರ ಕೈಗೊಳ್ಳುವ ಅವಧಿ ಕಡಿಮೆ, ಟಿ-20 ಪಂದ್ಯದಂತೆ, ಯಾವತ್ತೂ  ಮುಂಬರುವ ಚುನಾವಣೆಗಳ ಬಗ್ಗೆ  ಯೋಚಿಸಲಾಗುತ್ತದೆ, ವ್ಯತಿರಿಕ್ತವಾಗಿ, ರಿಸರ್ವ್ ಬ್ಯಾಂಕ್ ಯಾವತ್ತೂ ಟೆಸ್ಟ್ ಪಂದ್ಯ ಆಡುತ್ತದೆಯಲ್ಲದೆ ಪ್ರತಿಯೊಂದು ಅವಧಿಯಲ್ಲೂ ಗೆಲುವು ಸಾಧಿಸಲು ಯತ್ನಿಸುತ್ತದೆ. ಮುಖ್ಯವಾಗಿ ಪ್ರತಿಯೊಂದು ಅವಧಿಯಲ್ಲೂ ಬದುಕುಳಿಯಲು ಯತ್ನಿಸಿ ಈ ಮೂಲಕ ಮುಂದಿನ ಅವಧಿಯಲ್ಲಿ ಗೆಲುವು ಸಾಧಿಸುವ ಸಾಧ್ಯತೆಯನ್ನು ಜೀವಂತವಾಗಿರಿಸುತ್ತದೆ'' ಎಂದರು.

ಅಲ್ಪಾವಧಿ ಲಾಭಕ್ಕಾಗಿ ಕೈಗೊಳ್ಳಲಾಗುವ ಕ್ರಮಗಳಿಂದ ಆರ್ಥಿಕತೆಯನ್ನು ರಕ್ಷಿಸಲು ರಿಸರ್ವ್ ಬ್ಯಾಂಕ್ ಸ್ವತಂತ್ರವಾಗಿರಬೇಕಿದೆ ಎಂದು ಅವರು ಹೇಳಿದರು. ಆರ್ಜೆಂಟಿನಾದಲ್ಲಿನ ಕೇಂದ್ರೀಯ ಬ್ಯಾಂಕಿನ ಮೀಸಲು ನಿಧಿಯನ್ನು ಸರಕಾರ ಉಪಯೋಗಿಸಿದ ಕಾರಣ ಅಲ್ಲಿ ಎದ್ದಿರುವ ಸಂವಿಧಾನಿಕ ಬಿಕ್ಕಟ್ಟಿನ ಬಗ್ಗೆಯೂ ತಮ್ಮ ಭಾಷಣದಲ್ಲಿ ಆಚಾರ್ಯ ಉಲ್ಲೇಖಿಸಿದ್ದಾರೆ.

ಪಿಎನ್‌ಬಿಗೆ ನೀರವ್ ಮೋದಿಯಿಂದ ವಂಚನೆ ಹಿನ್ನೆಲೆಯಲ್ಲಿ ಆರ್‌ಬಿಐ ಮತ್ತು ವಿತ್ತಸಚಿವ ಅರುಣ್ ಜೇಟ್ಲಿಯವರ ನಡುವಿನ ವಾಗ್ಯುದ್ಧದ ಸಂದರ್ಭದಲ್ಲಿ ಗವರ್ನರ್ ಊರ್ಜಿತ್ ಪಟೇಲ್ ಅವರು ಎತ್ತಿದ್ದ ಕೆಲವು ಅಂಶಗಳನ್ನೂ ಆಚಾರ್ಯ ಪುನರುಚ್ಚರಿಸಿದರು. ಬ್ಯಾಂಕ್ ವಂಚನೆಗಳಿಗೆ ರಾಜಕಾರಣಿಗಳನ್ನು ಉತ್ತರದಾಯಿಗಳನ್ನಾಗಿಸಲಾಗುತ್ತಿದೆಯೇ ಹೊರತು ನಿಯಂತ್ರಣ ಸಂಸ್ಥೆಗಳನ್ನಲ್ಲ ಎಂದು ಜೇಟ್ಲಿ ಆಗ ಅಸಮಾಧಾನ ವ್ಯಕ್ತಪಡಿಸಿದ್ದರು.

ಚುನಾವಣೆಗಳು ಸರಕಾರದ ಕ್ರಮಗಳ ಹಿಂದಿನ ಕಾರಣವಾಗಿದ್ದಿರಬಹುದಾದರೂ ಅಲ್ಪಾವಧಿಯ ಕ್ರಮಗಳ ವಿರುದ್ಧ ಮಾರುಕಟ್ಟೆಯು ಶಿಸ್ತನ್ನು ರೂಪಿಸುತ್ತದೆ ಎಂದ ಅವರು,ಕೇಂದ್ರ ಬ್ಯಾಂಕಿನ ಸ್ವಾತಂತ್ರಕ್ಕೆ ಕತ್ತರಿ ಹಾಕದಂತೆ ಮಾರುಕಟ್ಟೆಯು ಸರಕಾರಕ್ಕೆ ಶಿಸ್ತಿನ ಪಾಠ ಕಲಿಸುತ್ತದೆ ಮತ್ತು ತನ್ನ ಅತಿಕ್ರಮಣಗಳಿಗೆ ಅದು ಬೆಲೆಯನ್ನು ತೆರುವಂತೆ ಮಾಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News