×
Ad

ಸರಡಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ ಸ್ಥಾಪನೆಗೆ ಪರಿಶೀಲನೆ

Update: 2018-10-27 23:12 IST

ಕಲಬುರ್ಗಿ, ಅ.27: ಸರಡಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ ಪ್ರಾರಂಭಿಸುವ ನಿಟ್ಟಿನಲ್ಲಿ ಹೈದಾಬಾದಿನ ಜಿಎಂಆರ್ ಕಂಪನಿಯ ಮುಖಸ್ಥರು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ರನ್‌ವೇ, ಮಾರ್ಕಿಂಗ್, ಲೈಟಿಂಗ್ ಕಾಮಗಾರಿಗಳು ಪೂರ್ಣಗೊಂಡಿವೆ. ಒಂದು ಕಚೇರಿ ಸೌಲಭ್ಯ ಕಲ್ಪಿಸಿದಲ್ಲಿ ಜಿಎಂಆರ್ ಕಂಪನಿಯಿಂದ ವಿಮಾನಗಳಿಗೆ ಇಂಧನ ಮರು ಭರ್ತಿ ಸೌಲಭ್ಯದೊಂದಿಗೆ ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲಾಗುವುದು ಎಂದು ಹೈದರಾಬಾದಿನ ಜಿಎಂಆರ್ ಕಂಪನಿಯ ಮುಖ್ಯಸ್ಥ ಹೇಮಂತ ಪಾಟೀಲ ತಿಳಿಸಿದರು.

ಜಿಎಂಆರ್ ಕಂಪನಿಯ ಎಪಿಎಫ್‌ಟಿಯಿಂದ ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲು ಸರಕಾರ ಎನ್‌ಓಸಿ ನೀಡಿದಲ್ಲಿ ವಿಮಾನ ಹಾರಾಟ ತರಬೇತಿಗೆ ಪರವಾನಿಗೆ ನೀಡುವಂತೆ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಎವಿಯೇಶನ್ ಅವರಿಗೆ ಪತ್ರ ಬರೆಯಲಾಗುವುದು.

ಜಿಎಂಆರ್ ಕಂಪನಿ ದೇಶದ ವಿವಿಧ ಭಾಗಗಳಲ್ಲಿ ವಿಮಾನ ನಿಲ್ದಾಣ ನಿರ್ವಹಣೆ ಹಾಗೂ ವಿಮಾನಗಳ ಹಾರಾಟ ನಡೆಸುತ್ತಿದೆ. ಕಲಬುರ್ಗಿ ವಿಮಾನ ನಿಲ್ದಾಣದಿಂದ ಬೇರೆ ಪಟ್ಟಣಗಳಿಗೆ ಅನಿಯಮಿತ ವಿಮಾನ ಹಾರಾಟ ಪ್ರಾರಂಭಿಸಲು ಎನ್‌ಎಸ್‌ಓಪಿ ಪರವಾನಿಗೆ ಪಡೆಯಲಾಗುವುದು. ಡಿ.1ರಂದು ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಎಪಿಎಫ್‌ಟಿ ವತಿಯಿಂದ ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲು ಯೋಜನೆ ಹಮ್ಮಿಕೊಂಡಿರುವುದಾಗಿ ವಿವರಿಸಿದರು.

ಈ ವೇಳೆ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ, ಎಪಿಎಫ್‌ಟಿ ತರಬೇತಿ ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಆರ್.ವಿ.ಕುಮಾರ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News