ರಕ್ತ ಚೆಲ್ಲಿಯಾದರೂ ದತ್ತಪೀಠ ಪಡೆದುಕೊಳ್ಳುತ್ತೇವೆ: ಪ್ರಮೋದ್ ಮುತಾಲಿಕ್

Update: 2018-10-28 17:15 GMT

ಚಿಕ್ಕಮಗಳೂರು, ಅ.28: ದತ್ತಪೀಠ ವಿವಾದ ಸೌಹಾರ್ದಯುತವಾಗಿ ಬಗೆಹರಿಸಲು ರಾಜಕೀಯ ವ್ಯಕ್ತಿಗಳಿಗೆ ಮತ್ತು ಬುದ್ಧಿಜೀವಿಗಳಿಗೆ ಇಷ್ಟವಿಲ್ಲ. ಅವರಿಗೆ ವಿವಾದ ಜೀವಂತವಾಗಿರಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠ ವಿಚಾರದಲ್ಲಿ ಹಿಂದೂಗಳಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಕೆಳ ಹಂತದ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ವರೆಗಿನ ತೀರ್ಪು ಹಿಂದೂ ಪರವಾಗಿದೆ. ಆದರೆ ಬೇರೆ ಬೇರೆ ಕೇಸ್ ದಾಖಲಿಸಿ ಕಾಂಗ್ರೆಸ್ ಸರ್ಕಾರ ಮತ್ತು ಬುದ್ಧಿಜೀವಿಗಳು ಸಮಸ್ಯೆ ಹಾಗೆಯೇ ಉಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ದತ್ತಪೀಠ ಹಿಂದೂಗಳ ಪರವಾಗುವವರೆಗೂ ಹೋರಾಟ ಮಾಡುತ್ತೇವೆ. ರಕ್ತ ಚೆಲ್ಲಿಯಾದರೂ ದತ್ತಪೀಠ ಪಡೆದುಕೊಳ್ಳುತ್ತೇವೆ. ನಾಗೇನಹಳ್ಳಿ ದರ್ಗಾವನ್ನು ಮುಸ್ಲಿಮರಿಗೆ ಕೊಟ್ಟು ಈಗಿರುವ ದತ್ತಪೀಠವನ್ನು ಹಿಂದೂಗಳಿಗೆ ಬಿಡಿಸಿ ಕೊಡಬೇಕು. ಮಾಜಿ ಪ್ರಧಾನಿ ದೇವೇಗೌಡರು ಈದ್ಗಾ ಮೈದಾನ ಪ್ರಕರಣವನ್ನು ಇತ್ಯರ್ಥಪಡಿಸಿದಂತೆ ಅವರ ಮಗ ಮುಖ್ಯಮಂತ್ರಿ ಕುಮಾರಸ್ವಾಮಿ ಸೌಹಾರ್ದಯುತವಾಗಿ ಈ ಪ್ರಕರಣ ಇತ್ಯರ್ಥಪಡಿಸಲಿ ಎಂದರು.

ನಂತರ ದತ್ತಪೀಠಕ್ಕೆ ಭೇಟಿ ನೀಡಿ ದತ್ತಪಾದುಕೆಗಳ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರ ಮತ್ತು ನಾವು ಒಂದೇ ವಿಚಾರಕ್ಕೆ ಹೋರಾಟ ಮಾಡುತ್ತಿದ್ದೇವೆ. ಸಂಘ ಪರಿವಾರವನ್ನು ಬಿಜೆಪಿ ಅವರು ಓಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಸಮಸ್ಯೆಯ ಪರಿಹಾರ ಬಿಜೆಪಿಯವರಿಗೆ ಬೇಕಾಗಿಲ್ಲ. ಸಂಘ ಪರಿವಾರ ಬಿಜೆಪಿಯಿಂದ ಹೊರಬಂದು ನಮ್ಮೊಟ್ಟಿಗೆ ಕೈ ಜೋಡಿಸಿದರೆ ಇಬ್ಬರೂ ಸೇರಿ ದತ್ತಪೀಠ ಸಮಸ್ಯೆ ಬಗ್ಗೆ ಹೋರಾಡಬಹುದು ಎಂದ ಅವರು, ಸಂಘ ಪರಿವಾರಕ್ಕೆ ಈ ಬಗ್ಗೆ ಮನವಿ ಮಾಡುತ್ತೇನೆ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕುಟುಂಬ ಆಸ್ತಿಕ ಕುಟುಂಬ. ಅವರ ಪುತ್ರರಾದ ರೇವಣ್ಣ, ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲರೂ ದೈವಭಕ್ತರೇ. ಅವರು ಅನೇಕ ದೇವಾಲಯಗಳಿಗೆ ದರ್ಶನ ನೀಡುವುದನ್ನು ಕೇಳಿದ್ದೇವೆ. ಜಿಲ್ಲೆಯ ಶೃಂಗೇರಿಗೂ ಭೇಟಿ ನೀಡುತ್ತಿರುತ್ತಾರೆ. ಆ ಸಂದರ್ಭ ದತ್ತಪೀಠಕ್ಕೆ ಒಮ್ಮೆ ಭೇಟಿ ನೀಡಿ ಇಲ್ಲಿನ ವಾಸ್ತವಾಂಶ ಅರಿಯಲಿ. ದಾಖಲೆ ಪರಿಶೀಲಿಸಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವ ನಿರ್ಧಾರಕ್ಕೆ ಬರಬೇಕು ಎಂದು ಆಗ್ರಹಿಸಿದರು. 

ಮುಸ್ಲಿಮರೊಂದಿಗೆ ಸೌಹಾರ್ದಯುತವಾಗಿ ಬಾಳುವ ಮನಸ್ಸು ನಮಗೂ ಇದೆ. ದಾಖಲೆಗಳ ಆಧಾರದಲ್ಲಿ ಮುಸ್ಲಿಮರು ಇಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಯ ಬಾಬಾಬುಡನ್ ದರ್ಗಾಕ್ಕೆ ಸ್ಥಳಾಂತರಿಸಲಿ. ಆಗ ಎಲ್ಲರೂ ಸೌಹಾರ್ದಯುತವಾಗಿ ಬಾಳಲು ಸಹಕಾರಿಯಾಗುತ್ತದೆ. ಮುಸ್ಲಿಮರು ಈ ವಿಚಾರವಾಗಿ ಮನಸ್ಸು ಮಾಡಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News