ದಾವಣಗೆರೆ: ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ, ರಕ್ತದಾನ ಮೂಲಕ ಧರಣಿ
ದಾವಣಗೆರೆ,ಅ.28: ಶಿಷ್ಯವೇತನ ಬಿಡುಗಡೆಗಾಗಿ ಜೆಜೆಎಂ ವೈದ್ಯಕೀಯ ಕಾಲೇಜಿನ ಗೃಹವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಧರಣಿ 7ನೇ ದಿನಕ್ಕೆ ಕಾಲಿರಿಸಿದ್ದು, ಭಾನುವಾರ ನಗರದ ಸರ್ಕಾರಿ ಹಳೆಯ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ರಕ್ತದಾನ ಮಾಡುವ ಮೂಲಕ ವಿನೂತನವಾಗಿ ಧರಣಿ ನಡೆಸಿದರು.
ಕಳೆದ ಒಂದು ವಾರದಿಂದ ನಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದರೂ ಸರ್ಕಾರವಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಆಸ್ಪತ್ರೆ ಆಡಳಿತ ಮಂಡಳಿಯಾಗಲೀ ಕ್ಯಾರೆ ಎನ್ನುತ್ತಿಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಭಟನಾ ನಿರತ ವೈದ್ಯ ವಿದ್ಯಾರ್ಥಿಗಳು ಮಾತನಾಡಿ, ನಮಗೆ ಕಳೆದ 8 ತಿಂಗಳಿಂದ ಶಿಷ್ಯ ವೇತನ ನೀಡದಿರುವುದರಿಂದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಸುಮಾರು 235 ವೈದ್ಯ ವಿದ್ಯಾರ್ಥಿಗಳು ಶಿಷ್ಯ ವೇತನದಿಂದ ವಂಚಿತರಾಗಿದ್ದಾರೆ. ಶಿಷ್ಯ ವೇತನಕ್ಕಾಗಿ ಕಳೆದ ಹಲವಾರು ದಿನಗಳಿಂದಲೂ ಮುಖ್ಯಮಂತ್ರಿ, ಸಚಿವರು, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲದೆ, ಪ್ರತಿಭಟನೆ, ಮಾನವ ಸರಪಳಿ ರಚನೆ, ಬೀದಿನಾಟಕ, ಚಿತ್ರಕಲಾ ಪ್ರದರ್ಶನ, ಕ್ಯಾಂಡಲ್ ಲೈಟ್ ಚಳುವಳಿ, ಹಸ್ತ ಮುದ್ರಿಕೆ ಮೂಲಕ ಶಿಷ್ಯ ವೇತನ ನಮ್ಮ ಹಕ್ಕು ಎಂದು ಹೋರಾಟ ನಡೆಸಿದ್ದೇವೆ. ಆದರೆ, ನಮ್ಮ ಹೋರಾಟಕ್ಕೆ ಕೇವಲ ಭರವಸೆ ನೀಡಲಾಗುತ್ತಿದೆ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಎಂಟು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಶಿಷ್ಯವೇತನ ನೀಡುವವರೆಗೂ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಸರಕಾರಿ ಕೋಟಾದ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಪಟ್ಟುಹಿಡಿದ ಪರಿಣಾಮ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಆಗಮಿಸುವ ಎಲ್ಲಾ ರೋಗಿಗಳಿಗೆ ಉಪಚರಿಸಲು ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಪ್ರತಿಭಟನೆಯಲ್ಲಿ ಡಾ. ಚಂದನ್, ಡಾ. ಮನು, ಡಾ. ಚೈತನ್ಯ, ಡಾ. ಮನೀಷ್ ಸೇರಿದಂತೆ ಗೃಹವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.