ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ: ಎಚ್.ವಿಶ್ವನಾಥ್

Update: 2018-10-29 17:26 GMT

ಶಿವಮೊಗ್ಗ, ಅ. 29: ಪ್ರಧಾನಿ ನರೇಂದ್ರ ಮೋದಿ ಜನ ಮೆಚ್ಚುಗೆಯ ಒಂದೇ ಒಂದು ಕಾರ್ಯಕ್ರಮ ಜಾರಿಗೊಳಿಸಲಿಲ್ಲ. ದಿನಬಳಕೆಯ ಅಗತ್ಯ ವಸ್ತುಗಳು, ರಸಗೊಬ್ಬರಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೇಂದ್ರ ಸರ್ಕಾರವು ಜನಪರ ಸರ್ಕಾರವಲ್ಲ, ಕೇವಲ ಮಾತಿನ ಮಂಟಪದ ಸರ್ಕಾರ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. 

ಸೋಮವಾರ ನಗರದ ಪ್ರೆಸ್ ಟ್ರಸ್ಟ್ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ದೇಶವಾಸಿಗಳಿಗೆ ಅಚ್ಛೇ ದಿನ್ ಇನ್ನೂ ಬಂದಿಲ್ಲ. ಇನ್ನೊಂದೆಡೆ ದೇಶದ ಆಯಕಟ್ಟಿನ ಜಾಗದಲ್ಲಿ ಆರೆಸ್ಸೆಸ್ಸ್ ನವರು ಬಂದು ಕುಳಿತುಕೊಂಡಿದ್ದಾರೆ. ಹಲವು ವಿರೋಧಾಭಾಸಗಳ ನಡುವೆ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ದೂರಿದರು. 

ಮೈತ್ರಿಗೆ ಬೆಂಬಲ: ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ರಾಜ್ಯದ ಜನ ನಮಗೆ ಬೆಂಬಲ ನೀಡುತ್ತಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗಿದೆ ಎಂದು ಹೇಳಿದರು. 

ಮುಂಬರು ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಾಂತೀಯ ಪಕ್ಷಗಳು ಮತ್ತೆ ಪ್ರಾಮುಖ್ಯತೆ ಪಡೆದುಕೊಳ್ಳಲಿವೆ. ಪ್ರಾಂತೀಯ ಪಕ್ಷಗಳ ಯುಗ ಪ್ರಾರಂಭವಾಗಲಿದೆ. ಪ್ರಾಂತೀಯ ಹಾಗೂ ರಾಷ್ಟ್ರೀಯ ರಾಜಕಾರಣ ಸಮ್ಮಿಳತವಾಗುತ್ತಿದೆ. ರಾಜಕಾರಣದಲ್ಲಿನ ಈ ಹೊಸ ಬೆಳವಣಿಗೆಯು ಹಲವು ಸಾಧ್ಯತೆಗಳಿಗೆ ಅವಕಾಶ ಮಾಡಿಕೊಡುತ್ತಿದೆ ಎಂದರು. 

ಪ್ರಸ್ತುತ ನಡೆಯುತ್ತಿರುವ ಉಪ ಚುನಾವಣೆಯ ಫಲಿತಾಂಶ ಅತ್ಯಂತ ಮಹತ್ವದ್ದಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯೂ ಚುನಾವಣೆಯ ನಂತರವೂ ಮುಂದುವರಿಯಲಿದೆ. ಎರಡೂ ಪಕ್ಷಗಳ ಮುಖಂಡರು ಒಟ್ಟಾಗಿ ಪ್ರಚಾರ ನಡೆಸುತ್ತಿದ್ದೆವೆ. ಎಲ್ಲೆಡೆ ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತವಾಗಿದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News