ಸಾಲ ಮನ್ನಾ ಮಾಡಿದ್ದನ್ನು ಬಿಜೆಪಿಯವರು ಸಹಿಸುತ್ತಿಲ್ಲ: ಸಿಎಂ ಕುಮಾರಸ್ವಾಮಿ

Update: 2018-10-29 17:58 GMT

ಸೊರಬ, ಅ.29: ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿನ ಪ್ರತಿ ರೈತರ ಐವತ್ತು ಸಾವಿರ ರೂ. ಸಾಲ ಮನ್ನಾ ಮಾಡಿದ್ದರು. ತಾನು ಮುಖ್ಯಮಂತ್ರಿಯಾಗಿ ಇನ್ನುಳಿದ ಸಾಲವನ್ನೂ ಮನ್ನಾ ಮಾಡಿದ್ದು ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯವರಿಗೆ ತಡೆದುಕೊಳ್ಳಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಕಿದ್ದಾರೆ.

ಸೋಮವಾರ ಪಟ್ಟಣದ ‘ಬಂಗಾರಧಾಮ’ದಲ್ಲಿ ನಡೆದ ಲೋಕಸಭಾ ಉಪಚುನಾವಣೆಯ ಬಹಿರಂಗ ಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧುಬಂಗಾರಪ್ಪ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರವಿದ್ದಾಗ ಸಿದ್ದರಾಮಯ್ಯನವರು ಸಹಕಾರಿ ಬ್ಯಾಂಕ್‌ಗಳಲ್ಲಿನ ಪ್ರತಿ ರೈತರ ಐವತ್ತು ಸಾವಿರ ರೂ. ರೈತರ ಸಾಲ ಮನ್ನಾ ಮಾಡಿದ್ದರು. ತಾನು ಮುಖ್ಯಮಂತ್ರಿಯಾಗಿ ಇನ್ನುಳಿದ ಸಾಲ ಮನ್ನಾ ಮಾಡಿದ್ದು ಸಾಲಮನ್ನಾ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಹಾಗಾಗಿ ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ ಎಂದರು.

ತಮ್ಮ ತಂದೆ ಬಂಗಾರಪ್ಪ ಅವರನ್ನು ಉಟ್ಟಬಟ್ಟೆಯಲ್ಲೇ ಮನೆಯಿಂದ ಹೊರ ಹಾಕಿದ್ದಲ್ಲದೇ ಈಗ ಭೂಮಿಯನ್ನೇ ನಂಬಿ ಬದುಕುತ್ತಿರುವ ಬಡ ರೈತರ ಪರ ಕಾಳಜಿ ವಹಿಸಿ ಭೂಮಿ ಹಕ್ಕು ನೀಡಿದ ಹಿರಿಯ ವ್ಯಕ್ತಿ ಕಾಗೋಡು ತಿಮ್ಮಪ್ಪನವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಶೋಭೆ ತರುವುದಿಲ್ಲ ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ್ದಾರೆ. ಕಾಗೋಡು ತಿಮ್ಮಪ್ಪ ಹಿರಿಯರು. ಹೋರಾಟದಿಂದ ರಾಜಕಾರಣಕ್ಕೆ ಬಂದವರು. ರೈತರಿಗೆ ಭೂಮಿ ಹಕ್ಕು ಕೊಡಿಸುವಲ್ಲಿ ಬಂಗಾರಪ್ಪನವರ ಜೊತೆಗೂಡಿ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಕಂದಾಯ ಸಚಿವರಾಗಿದ್ದಾಗ ರಾಜ್ಯದಲ್ಲಿನ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಯಾವುದೇ ಹೋರಾಟದ ಹಿನ್ನೆಲೆ ಇಲ್ಲದವರು ಕಾಗೋಡು ತಿಮ್ಮಪ್ಪನವರಂತಹ ಹಿರಿಯರ ಬಗ್ಗೆ ಹಗುರವಾಗಿ ಮಾತನಾಡುವ ಬದಲು ಜಿಲ್ಲೆಗೆ ತಮ್ಮ ಕೊಡುಗೆ ಏನು ಎಂಬುದನ್ನು ಮೊದಲು ತಿಳಿಸಲಿ ಎಂದು ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಹರಿಹಾಯ್ದರು.

ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಕ್ರಿಯಾಶೀಲ ವ್ಯಕ್ತಿ ಮಧುಬಂಗಾರಪ್ಪನವರಾಗಿದ್ದು, ತಂದೆ ಬಂಗಾರಪ್ಪ ಅವರ ಹಾದಿಯಲ್ಲೇ ಮುನ್ನಡೆಯುತ್ತಿರುವ ಯುವ ರಾಜಕಾರ ಣಿಯಾಗಿದ್ದಾರೆ. ಜಿಲ್ಲೆಯ ಸಮಗ್ರ ನೀರಾವರಿಗಾಗಿ, ಬಗರ್‌ಹುಕುಂ ರೈತರ ಪರವಾಗಿ ಪಾದಯಾತ್ರೆ ನಡೆಸುವ ಮೂಲಕ ಸರಕಾರದ ಗಮನವನ್ನು ಸೆಳೆದಿದ್ದು, ಇದರ ಫಲವಾಗಿ ಕಾಗೋಡು ತಿಮ್ಮಪ್ಪನವರ ಮಾರ್ಗದರ್ಶನದಲ್ಲಿ ಅನೇಕ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ದೊರೆತಂತಾಗಿದೆ. ಆದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿರುವುದು ಬೇಸರ ತಂದಿದೆ ಎಂದ ಅವರು, ಯಾವುದೇ ಹೋರಾಟದ ಹಿನ್ನೆಲೆ ಇಲ್ಲದವರನ್ನು ಗೆಲ್ಲಿಸಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಬಿ.ಸಿ. ಪಾಟೀಲ್, ಮಧುಬಂಗಾರಪ್ಪ, ಮಾಜಿ ಶಾಸಕ ಕೋನರೆಡ್ಡಿ, ಪ್ರಮುಖರಾದ ಶಶಿಭೂಷಣ್ ಹೆಗ್ಡೆ, ರಾಜು ಎಂ.ತಲ್ಲೂರು. ಇನಾಯತ್ ಉಲ್ಲಾ ಭಟ್ಕಳ, ಅಲ್ತಾಫ್, ಹಬೀಬ್, ಜೆ. ಶಿವಾನಂದಪ್ಪ, ಎಚ್. ಗಣಪತಿ, ಕೆ. ಮಂಜುನಾಥ್, ಕೆ.ಪಿ. ರುದ್ರಗೌಡ, ಚೌಟಿ ಚಂದ್ರಶೇಖರ ಪಾಟೀಲ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News