ರಾಜ್ಯದಲ್ಲಿ 100 ತಾಲೂಕು ಬರಪೀಡಿತ: ಆರ್ಥಿಕ ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ ರಾಜ್ಯ ಸರಕಾರ

Update: 2018-10-30 12:48 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಅ.30: ರಾಜ್ಯದಲ್ಲಿ ಈ ವರ್ಷ ಮುಂಗಾರು ಕೈಕೊಟ್ಟಿರುವುದರಿಂದ ಒಟ್ಟು 16,662.48 ಕೋಟಿ ರೂ. ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ವತಿಯಿಂದ 2,434 ಕೋಟಿ ರೂ.ಗಳನ್ನು ರಾಜ್ಯಕ್ಕೆ ಪರಿಹಾರವಾಗಿ ಒದಗಿಸಬೇಕೆಂದು ಕೋರಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮತ್ತು ಕೃಷಿ ಸಚಿವ ಶಿವಶಂಕರ ರೆಡ್ಡಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ರನ್ನು ಭೇಟಿ ಮಾಡಿದ ಉಭಯ ಸಚಿವರು, ರಾಜ್ಯಕ್ಕೆ ಅಗತ್ಯವಾದ ನೆರವನ್ನು ಒದಗಿಸುವಂತೆ ಕೋರಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮುಂಗಾರು ಕೈಕೊಟ್ಟಿರುವುದರಿಂದ ರಾಜ್ಯದಲ್ಲಿ 26.18 ಲಕ್ಷ ಹೆಕ್ಟೇರ್‌ನಲ್ಲಿ 15,294.37 ಕೋಟಿ ರೂ.ಗಳಷ್ಟು ಅಪಾರ ನಷ್ಟ ಸಂಭವಿಸಿದೆ. ಉಳಿದಂತೆ 1.94 ಲಕ್ಷ ಹೆಕ್ಟೇರುಗಳಲ್ಲಿ 1368.11 ಕೋಟಿ ರೂ. ಮೌಲ್ಯದ ತೋಟಗಾರಿಕಾ ಬೆಳೆಗಳು ನೆಲ ಕಚ್ಚಿವೆ. ಹೀಗಾಗಿ, ರಾಜ್ಯಕ್ಕೆ ಕೂಡಲೇ ಬರ ಅಧ್ಯಯನ ತಂಡವನ್ನು ಕಳುಹಿಸಬೇಕು ಎಂದು ದೇಶಪಾಂಡೆ ಒತ್ತಾಯಿಸಿದರು.

ಮುಂಗಾರು ಸರಿಯಾಗಿ ಸುರಿದಿದ್ದರೆ ರಾಜ್ಯದಲ್ಲಿ ಇಷ್ಟು ಹೊತ್ತಿಗೆ 74.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೇವಲ 63.36 ಲಕ್ಷ ಹೆಕ್ಟೇರಿನಲ್ಲಷ್ಟೆ (ಅಂದರೆ, ಶೇ.89ರಷ್ಟು ಮಾತ್ರ) ಬಿತ್ತನೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬರದ ಹಿನ್ನೆಲೆಯಲ್ಲಿ ಈಗಾಗಲೇ 100 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇದಲ್ಲದೆ, ರಾಜ್ಯದಲ್ಲಿರುವ ಒಟ್ಟು 3,611 ಸಣ್ಣ ನೀರಾವರಿ ಕೆರೆಗಳ ಪೈಕಿ ಶೇ.53ರಲ್ಲಿ ಮಾತ್ರ ನೀರಿದ್ದು, ಇದೂ ಸಹ ಅಗತ್ಯ ಪ್ರಮಾಣದಲ್ಲಿ ಇಲ್ಲ ಎಂದು ದೇಶಪಾಂಡೆ ಹೇಳಿದರು.

ಜೊತೆಗೆ ರಾಜ್ಯದ 159 ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶಗಳ 136 ವಾರ್ಡ್‌ಗಳಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರು ಪೂರೈಕೆಗೆಂದು ಗ್ರಾಮಾಂತರ ಪ್ರದೇಶದಲ್ಲಿ 203 ಖಾಸಗಿ ಕೊಳವೆ ಬಾವಿಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಜಾನುವಾರುಗಳ ಹಿತದೃಷ್ಟಿಯಿಂದ 98.26 ಟನ್ ಒಣ ಮೇವನ್ನು ದಾಸ್ತಾನು ಇಡಲಾಗಿದ್ದು, ಇದು ಮುಂದಿನ 4 ತಿಂಗಳಿಗೆ ಸಾಕಾಗಲಿದೆ. ಮುಂಬರುವ ದಿನಗಳಲ್ಲಿ ಮೇವು ಪೂರೈಕೆಗಾಗಿ ನೀರಾವರಿ ಸೌಲಭ್ಯವಿರುವ ರೈತರಿಗೆ 8.11 ಲಕ್ಷ ಮೇವು ಉತ್ಪಾದನೆ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ. ಬರದ ತೀವ್ರತೆ ಹೀಗೆಯೇ ಮುಂದುವರಿದಲ್ಲಿ ಗೋಶಾಲೆ ಮತ್ತು ಮೇವು ದಾಸ್ತಾನು ಕೇಂದ್ರಗಳನ್ನು ತೆರೆಯಲಾಗುವುದು ಎಂದು ದೇಶಪಾಂಡೆ ಹೇಳಿದರು.

ಬರ ಪರಿಸ್ಥಿತಿಯನ್ನು ನಿರ್ವಹಿಸಲು ಈಗಾಗಲೇ ಎಸ್‌ಡಿಆರ್‌ಎಫ್‌ನಿಂದ 100 ಕೋಟಿ ರೂ. ಮತ್ತು ರಾಜ್ಯ ಸರಕಾರದ ವತಿಯಿಂದ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಪ್ರತಿಯೊಂದು ಬರಪೀಡಿತ ತಾಲೂಕಿಗೂ ತಲಾ 50 ಲಕ್ಷ ರೂ. ಕೊಡಲಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ಬರಪೀಡಿತ ತಾಲೂಕುಗಳ ಸುಮಾರು 6.36 ಲಕ್ಷ ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದ್ದು, ಇದಕ್ಕಾಗಿ 1042.93 ಕೋಟಿ ರೂ.ಗಳನ್ನು ನಿಯೋಗಿಸಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News